ಉದಯವಾಹಿನಿ, ಬೆಂಗಳೂರು: ಕೋಣನಕುಂಟೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಖತರ್ನಾಕ್‌ ಕಳ್ಳಿಯೊಬ್ಬಳನ್ನ ಬಂಧಿಸಿರುವ ಘಟನೆ ನಡೆದಿದೆ. ಕೆಲಸ ಮಾಡುತ್ತಿದ್ದ ಮನೆಯಲ್ಲೇ ಚಿನ್ನಾಭರಣ ಕಳ್ಳತನ ಮಾಡಿ, ಕದ್ದ ಹಣದಿಂದ ತಮಿಳುನಾಡಿನಲ್ಲಿ ಸೈಟ್ ಖರೀದಿಸಿದ್ದ ಖತರ್ನಾಕ್ ಕಳ್ಳಿಯನ್ನ ಪೊಲೀಸರು ಬಂಧಿಸಿದ್ದಾರೆ. ಆಕೆಯಿಂದ 200 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಈ ಮೂಲಕ ಉಂಡ ಮನೆಗೆ ದ್ರೋಹ ಬಗೆದ ಕಳ್ಳಿಯ ಕೃತ್ಯವನ್ನ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನ ತಮಿಳುನಾಡು ಮೂಲದ ದೀಪ ಎಂದು ಗುರುತಿಸಲಾಗಿದೆ. ಈಕೆ ಕೋಣನಕುಂಟೆ ನಿವಾಸಿ ಜಗದೀಶ್ ಎಂಬುವವರ ಮನೆಯಲ್ಲಿ ಕಳೆದ ಒಂದು ವರ್ಷದಿಂದ ಮನೆಕೆಲಸ ಮಾಡುತ್ತಿದ್ದಳು. ಮನೆಕೆಲಸ ಮಾಡುತ್ತಿದ್ದ ದೀಪ, ಮನೆಯಲ್ಲಿದ್ದ ಚಿನ್ನಾಭರಣಗಳ ಮೇಲೆ ಕಣ್ಣಿಟ್ಟಿದ್ದಳು. ಒಂದೇ ಬಾರಿಗೆ ಕಳ್ಳತನ ಮಾಡದೆ, ಆಗಾಗ ಒಂದೊಂದೇ ಚಿನ್ನದ ಆಭರಣ ಕದ್ದು ತನ್ನ ಕೈಚಳಕ ತೋರಿದ್ದಳು. ಈ ಕೃತ್ಯದ ಬಗ್ಗೆ ಅನುಮಾನಗೊಂಡ ಮನೆ ಮಾಲೀಕ ಜಗದೀಶ್ ಅವರು ಪೊಲೀಸರಿಗೆ ದೂರು ನೀಡಿದ್ದರು.
ದೂರಿನ ಆಧಾರದ ಮೇಲೆ ತನಿಖೆ ಕೈಗೊಂಡ ಕೋಣನಕುಂಟೆ ಪೊಲೀಸರು, ಆರೋಪಿ ದೀಪಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ, ಆರೋಪಿ ತನ್ನ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದಾಳೆ. ಕದ್ದ ಹಣದಲ್ಲಿ ತಮಿಳುನಾಡಿನಲ್ಲಿ ಸೈಟ್ ಒಂದನ್ನ ಖರೀದಿಸಿದ್ದಾಗಿ ದೀಪ ತಪ್ಪೊಪ್ಪಿಕೊಂಡಿದ್ದಾಳೆ. ಸದ್ಯ, ಪೊಲೀಸರು ಆರೋಪಿ ದೀಪಳನ್ನು ಬಂಧಿಸಿ, ಆಕೆಯಿಂದ 200 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!