ಉದಯವಾಹಿನಿ, ಮೊಹಾಲಿ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ದಾಖಲಾದ ಆಸ್ಪತ್ರೆಗೆ ಬಾಂಬ್ ಬೆದರಿಕೆ ಕರೆ ಬಂದಿದೆ. ಅನಾರೋಗ್ಯದ ಹಿನ್ನೆಲೆ ಮಾನ್ ಮೊಹಾಲಿಯಲ್ಲಿರುವ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಮಧ್ಯಾಹ್ನ 1:11 ನಿಮಿಷಕ್ಕೆ ಸ್ಫೋಟ ಸಂಭವಿಸೋದಾಗಿ ಇ-ಮೇಲ್ ಮೂಲಕ ಬೆದರಿಕೆ ಹಾಕಲಾಗಿತ್ತು. ಇದರ ಜೊತೆಗೆ ಮೊಹಾಲಿಯ ಹಲವು ಖಾಸಗಿ ಶಾಲೆಗಳನ್ನ (ವಿಶೇಷವಾಗಿ ಫೇಸ್ 5 ಪ್ರದೇಶದಲ್ಲಿರುವವು ಸೇರಿದಂತೆ) ಕೂಡ ಗುರಿಯಾಗಿಸಿ ಬೆದರಿಕೆ ನೀಡಲಾಗಿದೆ.

ಈ ಬೆದರಿಕೆಯಿಂದಾಗಿ ಶಾಲೆಗಳಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳನ್ನ ತಕ್ಷಣ ತೆರವುಗೊಳಿಸಲಾಯಿತು. ಪೋಷಕರು ಮಕ್ಕಳನ್ನು ಕರೆದೊಯ್ಯಲು ಧಾವಿಸಿದ್ದರಿಂದ ರಸ್ತೆಗಳಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಯಿತು. ಪಂಜಾಬ್ ಪೊಲೀಸ್ ಮತ್ತು ಗುಪ್ತಚರ ಏಜೆನ್ಸಿಗಳು ತಕ್ಷಣ ಹೈ ಅಲರ್ಟ್ ಆಗಿ ಕಾರ್ಯಾಚರಣೆ ನಡೆಸಿವೆ. ಆಸ್ಪತ್ರೆ ಮತ್ತು ಶಾಲೆಗಳನ್ನು ಸಂಪೂರ್ಣ ಖಾಲಿ ಮಾಡಿಸಲಾಯಿತು. ಬಾಂಬ್ ನಿಷ್ಕ್ರೀಯ ತಂಡಗಳು ಸ್ಥಳಕ್ಕೆ ಆಗಮಿಸಿ ತೀವ್ರ ತಪಾಸಣೆ ನಡೆಸುತ್ತಿವೆ. ಈವರೆಗೆ ಯಾವುದೇ ಸ್ಫೋಟಕ ವಸ್ತುಗಳು ಅಥವಾ ಅನುಮಾನಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಹಿಂದಿನಂತೆ ಇದು ಕೂಡ ಸುಳ್ಳು ಬೆದರಿಕೆ ಆಗಿರಬಹುದು ಎಂದು ಅಧಿಕಾರಿಗಳು ಊಹಿಸುತ್ತಿದ್ದಾರೆ. ಆದಾಗ್ಯೂ ಭದ್ರತಾ ಕ್ರಮಗಳನ್ನು ಮತ್ತಷ್ಟು ಬಿಗಿ ಮಾಡಲಾಗಿದೆ. ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಆರೋಗ್ಯ ಸ್ಥಿತಿಗೆ ಸಂಬಂಧಿಸಿದಂತೆ ಆಸ್ಪತ್ರೆಯ ಸುತ್ತಮುತ್ತಲೂ ಈಗಾಗಲೇ ಭದ್ರತೆ ಹೆಚ್ಚಿಸಲಾಗಿತ್ತು. ಈ ಬೆದರಿಕೆಯಿಂದಾಗಿ ಭದ್ರತಾ ಏಜೆನ್ಸಿಗಳು ಇನ್ನಷ್ಟು ಎಚ್ಚರಿಕೆ ವಹಿಸಿವೆ. ಪೊಲೀಸರು ಈ ಈಮೇಲ್‌ನ ಮೂಲವನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!