ಉದಯವಾಹಿನಿ, ಧಮತರಿ, ಛತ್ತೀಸ್ಗಢ: ಜಿಲ್ಲಾ ಕೇಂದ್ರದಿಂದ ಸರಿಸುಮಾರು 90 ಕಿ.ಮೀ ದೂರದಲ್ಲಿರುವ ಭುರ್ಸಿಡೊಂಗರಿ ಗ್ರಾಮವು ಹಲವು ವರ್ಷಗಳಿಂದ ತನ್ನದೇ ಆದ ವಿಶಿಷ್ಟ ಗುರುತನ್ನು ಬೆಳೆಸಿಕೊಂಡು ಬರುತ್ತಿದೆ. ಈ ಗ್ರಾಮವೀಗ ಸರ್ಕಾರಿ ಉದ್ಯೋಗಗಳನ್ನು ಹೊಂದಿರುವವರ ಗ್ರಾಮ ಎಂದು ಹೆಸರುಗಳಿಸಿಕೊಂಡಿದೆ. ಇಲ್ಲಿ ಪ್ರತಿ ಎರಡು ಮನೆಗಳಿಗೆ ಒಬ್ಬ ವ್ಯಕ್ತಿ ಸರ್ಕಾರಿ ಉದ್ಯೋಗವನ್ನು ಹೊಂದಿದ್ದಾನೆ ಅಂತಾರೆ ಇಲ್ಲಿನ ಗ್ರಾಮಸ್ಥರು. ಅನೇಕ ಮನೆಗಳಲ್ಲಿ ಎರಡರಿಂದ ಮೂರು ಸದಸ್ಯರು ಸರ್ಕಾರಿ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹೀಗಾಗಿ ಈ ಗ್ರಾಮ ಯುವಕರಿಗೆ ಮಾದರಿಯಾಗಿದೆ. ಇಲ್ಲಿನವರಂತೆ ನಾವು ಓದಿ ದೊಡ್ಡವರಾಗಿ ಬೆಳೆದ ಮೇಲೆ ಸರ್ಕಾರಿ ಕೆಲಸವನ್ನು ಪಡೆದುಕೊಳ್ಳಬೇಕು ಎಂದು ಬಯಸುತ್ತಿದ್ದಾರೆ. ಇದಕ್ಕಾಗಿ ಅವರು ಶ್ರಮವನ್ನೂ ಹಾಕುತ್ತಿದ್ದಾರೆ. ಕೆಲವರು ವೈದ್ಯರಾಗಲು, ಇನ್ನಿತರರು ಇತರ ಪ್ರತಿಷ್ಠಿತ ಕೆಲಸವನ್ನು ತೆಗೆದುಕೊಳ್ಳಲು ಕಷ್ಟಪಟ್ಟು ಓದುವುದರಲ್ಲಿ ಮಗ್ನರಾಗಿದ್ದಾರೆ.
ಅತಿ ಹೆಚ್ಚು ಸರ್ಕಾರಿ ಉದ್ಯೋಗಿಗಳನ್ನು ಹೊಂದಿರುವ ಗ್ರಾಮ: ಭುರ್ಸಿಡೊಂಗರಿ ಗ್ರಾಮವು ಸುಮಾರು 2,352 ಜನಸಂಖ್ಯೆಯನ್ನು ಹೊಂದಿದೆ. ಪ್ರತಿ ವರ್ಷ ಈ ಗ್ರಾಮದ ಯುವಕರು ಯಾವುದೇ ನೇಮಕಾತಿ ಪರೀಕ್ಷೆ ಇರಲಿ ಅದರಲ್ಲಿ ಅತ್ಯುತಮ ಫಲಿತಾಂಶವನ್ನು ಪಡೆದುಕೊಳ್ಳುತ್ತಾರೆ. ಹೀಗಾಗಿ ಭುರ್ಸಿಡೊಂಗರಿ ಸುತ್ತಮುತ್ತಲಿನ ಎಲ್ಲ ಹಳ್ಳಿಗಳು ಇದನ್ನು ಸರ್ಕಾರಿ ಉದ್ಯೋಗಿಗಳನ್ನು ಹೊಂದಿರುವ ಗ್ರಾಮ ಎಂದು ಕರೆಯುತ್ತಾರೆ.
ಇಲ್ಲಿನ ಹವಾಮಾನ ಮತ್ತು ಮಣ್ಣು ಇಲ್ಲಿನ ಯುವಕರು ಶ್ರದ್ಧೆಯಿಂದ ಅಧ್ಯಯನ ಮಾಡುವಷ್ಟು ಉತ್ತಮವಾಗಿದೆ ಎಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸುತ್ತಾರೆ. ಉತ್ತಮವಾದ ಉದ್ಯೋಗಾವಕಾಶಗಳು ಬಂದಾಗ ಅವರು ಅದನ್ನು ಸಾಧಿಸುವವರೆಗೆ ವಿಶ್ರಾಂತಿ ಪಡೆಯುವುದಿಲ್ಲ. ಭುರ್ಸಿಡೊಂಗರಿ ಗ್ರಾಮದ ಯುವಕರ ಕಠಿಣ ಪರಿಶ್ರಮವನ್ನು ನೋಡಿ, ಇತರ ಹಳ್ಳಿಗಳ ಯುವಕರು ಈಗ ಅವರಿಂದ ಸ್ಫೂರ್ತಿ ಪಡೆದು ನಾವು ಅವರಂತೆ ಆಗಬೇಕು ಎಂದು ಹಂಬಲಿಸುತ್ತಿದ್ದಾರೆ. ಭುರ್ಸಿಡೊಂಗರಿ ಗ್ರಾಮದಲ್ಲಿ ಎಷ್ಟು ಜನ ಸರ್ಕಾರಿ ನೌಕರರಿದ್ದಾರೆ ಗೊತ್ತಾ? : ಈ ಗ್ರಾಮದಲ್ಲಿ ಸುಮಾರು 15 ಜನರು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನು 25 ಯುವಕರು ಸೇನೆ ಸೇರಿ ದೇಶಸೇವೆಯಲ್ಲಿ ನಿರತರಾಗಿದ್ದಾರೆ. ಮತ್ತೊಂದು ಕಡೆ ಸುಮಾರು 45 ಜನರು ಶಿಕ್ಷಕರಾಗಿ ಮತ್ತು ಸುಮಾರು 25 ಜನರು ಉನ್ನತ ಶಿಕ್ಷಣ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದಾರೆ ಎಂದು ಇಲ್ಲಿನ ಗ್ರಾಮಸ್ಥರು ತಮ್ಮೂರಿನ ನೌಕರರ ಅಂಕಿ – ಅಂಶಗಳನ್ನು ನೀಡಿದ್ದಾರೆ.
ಇನ್ನು ಎರಡು ಡಜನ್‌ಗೂ ಹೆಚ್ಚು ಜನರು ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಹೆಚ್ಚುವರಿ ಜಿಲ್ಲಾಧಿಕಾರಿ, ಉಪ ತಹಶೀಲ್ದಾರ್, ಜಿಲ್ಲಾ ಕಮಾಂಡರ್, ಪಿಡಬ್ಲ್ಯೂಡಿ ಮತ್ತು ಉನ್ನತ ಅಧಿಕಾರಿ ದರ್ಜೆಯ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ಸುಮಾರು 135 ರಿಂದ 140 ಜನರು ಸರ್ಕಾರಿ ಉದ್ಯೋಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇದು ಈ ಗ್ರಾಮದ ಮಟ್ಟಿಗೆ ದಾಖಲೆಯೇ ಸರಿ.
