ಉದಯವಾಹಿನಿ, ಮುಂಬೈ (ಮಹಾರಾಷ್ಟ್ರ): ಮೂರು ದಿನಗಳ ಭಾರತ ಭೇಟಿಯಲ್ಲಿರುವ ಫ್ರಾನ್ಸ್​​ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಇಂದು (ಮಂಗಳವಾರ) ಬೆಳಗ್ಗೆ ಮುಂಬೈಗೆ ಬಂದಿಳಿದರು. ಅರಬ್ಬೀ ಸಮುದ್ರ ತೀರದ ಪ್ರಸಿದ್ಧ ಮರೀನ್​ ಡ್ರೈವ್‌ನಲ್ಲಿ ಜಾಗಿಂಗ್ ಮಾಡುವ ಮೂಲಕ ತಮ್ಮ ದಿನಚರಿಯನ್ನು ಪ್ರಾರಂಭಿಸಿದರು. ಮ್ಯಾಕ್ರನ್ ಅವರು ಮರೀನ್ ಡ್ರೈವ್​​ನಲ್ಲಿ ವಾಯುವಿಹಾರ ನಡೆಸಲು ಉದ್ದೇಶಿಸಿದ್ದರಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಮುಂಬೈ ಪೊಲೀಸರು ಬಿಗಿ ಭದ್ರತೆ ಏರ್ಪಡಿಸಿದ್ದರು. ಫ್ರಾನ್ಸ್​ ಅಧ್ಯಕ್ಷರ ಜೊತೆ ಅವರ ಭದ್ರತಾ ಸಿಬ್ಬಂದಿಯೂ ಇದ್ದರು.
ವಾಯುವಿಹಾರದ ಬಳಿಕ, ಅಧ್ಯಕ್ಷರು ತಮ್ಮ ಪತ್ನಿ ಮತ್ತು ಫ್ರಾನ್ಸ್​ನ ಪ್ರಥಮ ಮಹಿಳೆ ಬ್ರಿಗಿಟ್ಟೆ ಮ್ಯಾಕ್ರನ್ ಅವರ ಜೊತೆಗೂಡಿ ದಕ್ಷಿಣ ಮುಂಬೈನ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್‌ನಲ್ಲಿ 2008ರ ನವೆಂಬರ್​ನಲ್ಲಿ ಪಾಕಿಸ್ತಾನ ಮೂಲಕ ಉಗ್ರರ ಗುಂಡೇಟಿಗೆ ಬಲಿಯಾದವರಿಗೆ ಪುಷ್ಪ ನಮನ ಸಲ್ಲಿಸಿದರು.

ಮೋದಿ ಜೊತೆ ದ್ವೀಪಕ್ಷೀಯ ಮಾತುಕತೆ: ಭಾರತ ಪ್ರವಾಸದ ವೇಳೆ ಫ್ರೆಂಚ್ ಅಧ್ಯಕ್ಷರು ದಕ್ಷಿಣ ಮುಂಬೈನ ಲೋಕ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ. ಅಲ್ಲಿ ಇಬ್ಬರು ನಾಯಕರು ಉಭಯ ರಾಷ್ಟ್ರಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯಲ್ಲಿ ಆಗಿರುವ ಪ್ರಗತಿಯ ಕುರಿತು ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ.

ಮೋದಿ ಮತ್ತು ಮ್ಯಾಕ್ರನ್ ಅವರ ಸಂವಾದದ ವೇಲೆ ಎರಡೂ ರಾಷ್ಟ್ರಗಳ ಸಂಬಂಧಗಳನ್ನು ಗಟ್ಟಿಗೊಳಿಸುವ, ಹೊಸ ಮತ್ತು ಉದಯೋನ್ಮುಖ ಎತ್ತರಕ್ಕೆ ಕೊಂಡೊಯ್ಯುವತ್ತ ಗಮನಹರಿಸಲಿದ್ದಾರೆ. ಪ್ರಾದೇಶಿಕ ಮತ್ತು ಜಾಗತಿಕ ಸಂಗತಿಗಳ ಕುರಿತು ಇಬ್ಬರೂ ನಾಯಕರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭಾರತ ಆಯೋಜಿಸಿರುವ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಭಾಗವಹಿಸಲು ಮತ್ತು ಮುಂಬೈನಲ್ಲಿ ದ್ವಿಪಕ್ಷೀಯ ಶೃಂಗಸಭೆಯನ್ನು ನಡೆಸಲು ಪ್ರಧಾನಿ ಮೋದಿ ಅವರ ಆಹ್ವಾನದ ಮೇರೆಗೆ ಅಧ್ಯಕ್ಷ ಎಮ್ಯಾನುಯೆಲ್​ ಮ್ಯಾಕ್ರನ್ ಅವರು ಫೆಬ್ರವರಿ 17 ರಿಂದ 19 ರವರೆಗೆ ಭಾರತಕ್ಕೆ ಅಧಿಕೃತ ಭೇಟಿ ನೀಡಿದ್ದಾರೆ.

ಇದು ಮ್ಯಾಕ್ರನ್ ಅವರ ನಾಲ್ಕನೇ ಭಾರತ ಭೇಟಿಯಾಗಿದೆ. ಮುಂಬೈಗೆ ಅವರ ಮೊದಲ ಭೇಟಿಯಾಗಿದೆ. ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಫ್ರೆಂಚ್​ ಅಧ್ಯಕ್ಷರನ್ನು ಮಹಾರಾಷ್ಟ್ರ ರಾಜ್ಯಪಾಲ ಆಚಾರ್ಯ ದೇವವ್ರತ್ ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಸ್ವಾಗತಿಸಿದರು.

Leave a Reply

Your email address will not be published. Required fields are marked *

error: Content is protected !!