ಉದಯವಾಹಿನಿ, ಕೋಟಾ(ರಾಜಸ್ಥಾನ): ದೇಶದ ಅತಿದೊಡ್ಡ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಾದ ಜೆಇಇ ಮೇನ್ಸ್- 2026ರ ಫಲಿತಾಂಶ ಪ್ರಕಟವಾಗಿದ್ದು, 12 ವಿದ್ಯಾರ್ಥಿಗಳು 100ಕ್ಕೆ 100 ಅಂಕ ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ.
ಜೆಇಇ ಮೇನ್ಸ್ 2026 ರ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಲ್ಲಿ ರಾಜಸ್ಥಾನದ ಮೂವರು ಸೇರಿ ಒಟ್ಟು 12 ಅಭ್ಯರ್ಥಿಗಳು ಪರಿಪೂರ್ಣ ಎನ್‌ಟಿಎ 100 ಅಂಕಗಳನ್ನು ಗಳಿಸಿ ಗಮನ ಸೆಳೆದಿದ್ದಾರೆ.
ಯಾವ ರಾಜ್ಯ ವಿದ್ಯಾರ್ಥಿಗಳಿಗೆ ಪೂರ್ಣ ಅಂಕ? ರಾಜಸ್ಥಾನದ ಮೂವರು, ಆಂಧ್ರಪ್ರದೇಶದ ಇಬ್ಬರು ಮತ್ತು ದೆಹಲಿ, ಬಿಹಾರ, ಒಡಿಶಾ, ಹರಿಯಾಣ, ಮಹಾರಾಷ್ಟ್ರ, ಗುಜರಾತ್ ಹಾಗೂ ತೆಲಂಗಾಣದ ತಲಾ ಓರ್ವ ವಿದ್ಯಾರ್ಥಿ ಪೂರ್ಣ ಅಂಕ ಪಡೆದ ಟಾಪರ್ಸ್ ಗಳಾಗದ್ದಾರೆ. ಎಲ್ಲ 12 ಅಭ್ಯರ್ಥಿಗಳು ಹುಡುಗರಾಗಿದ್ದಾರೆ. ದೆಹಲಿಯ ಶ್ರೇಯಾಂಶ್ ಮಿಶ್ರಾ, ಬಿಹಾರದ ಶುಭಂ ಕುಮಾರ್, ಆಂಧ್ರಪ್ರದೇಶದ ನರೇಂದ್ರ ಬಾಬು ಗಿರಿ ಮಹಿತ್ ಮತ್ತು ಅರ್ನವ್ ಗೌತಮ್, ರಾಜಸ್ಥಾನದ ಕಬೀರ್ ಚಿಲ್ಲರ್, ಅರ್ನವ್ ಗೌತಮ್ ಮತ್ತು ಚಿರಂಜೀಬ್ ಖಾರ್, ಒಡಿಶಾದ ಭವೇಶ್ ಪಾತ್ರ, ಹರಿಯಾಣದ ಅನಯ್ ಜೈನ್, ಗುಜರಾತ್‌ನ ನಿಮಯ್ ಪುರೋಹಿತ್, ಮಹಾರಾಷ್ಷ್ರದ ಮಾಧವ ಹಾಗೂ ತೆಲಂಗಾಣದ ವಿವಾನ್ ಶರದ್ ಮಹೇಶ್ವರಿ ಅವರು ಪೂರ್ಣ ಅಂಕ ಗಳಿಸಿದವರು ಎಂದು ಶಿಕ್ಷಣ ತಜ್ಞ ದೇವ್ ಶರ್ಮಾ ತಿಳಿಸಿದ್ದಾರೆ.
ಕೋಟಾ ವಿದ್ಯಾರ್ಥಿಗಳ ಮೇಲುಗೈ: ಪರೀಕ್ಷೆಯಲ್ಲಿ 100 ಅಂಕಗಳನ್ನು ಗಳಿಸಿದ ರಾಜಸ್ಥಾನದ ಮೂವರು ಅಭ್ಯರ್ಥಿಗಳು ಕೋಟಾದಲ್ಲಿ ತರಬೇತಿ ಪಡೆದಿದ್ದರು. ಮೂಲತಃ ಗುರ್ಗಾಂವ್‌ನ ಕಬೀರ್ ಚಿಲ್ಲರ್ ಎರಡು ವರ್ಷಗಳಿಂದ ಕೋಟಾದಲ್ಲಿ ತರಬೇತಿ ಪಡೆಯುತ್ತಿದ್ದರು. ಹಾಗೆಯೇ, ಚಿರಂಜೀಬ್ ಖಾರ್ ಕೂಡ ನಗರದಲ್ಲಿ ಕೋಚಿಂಗ್ ಪಡೆದಿದ್ದಾರೆ. ಇನ್ನು, ಕೋಟಾದ ನಿವಾಸಿ ಅರ್ನವ್ ಗೌತಮ್ ಸಹ ಇಲ್ಲೇ ತರಬೇತಿ ಪಡೆದವರು.ಬಿಹಾರದಿಂದ ಪರೀಕ್ಷೆಗೆ ಹಾಜರಾಗಿದ್ದ ಶುಭಂ ಕುಮಾರ್ ಕೂಡ ಕೋಟಾದಲ್ಲಿ ಪರೀಕ್ಷೆಗೆ ತಯಾರಿ ನಡೆಸಿ, ಪೂರ್ಣ ಅಂಕ ಪಡೆದಿದ್ದಾರೆ. ಅಧಿಕಾರಿಗಳ ಪ್ರಕಾರ, NTA ಅಂಕಗಳು ಪಡೆದ ಅಂಕಗಳ ಶೇಕಡಾವಾರು ಪ್ರಮಾಣಕ್ಕೆ ಸಮನಾಗಿರುವುದಿಲ್ಲ. ಜೆಇಇ ಮೇನ್ಸ್ ಪರೀಕ್ಷೆಯ ಮೊದಲ ಆವೃತ್ತಿಗೆ 13.04 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದರು.
ಪರೀಕ್ಷೆಗಳ ಅಂತಿಮ ಹಂತದ ನಂತರವೇ ಶ್ರೇಯಾಂಕ ಬಿಡುಗಡೆ: ಜೆಇಇ ಮೇನ್ಸ್ ಆನ್‌ಲೈನ್ ಪರೀಕ್ಷೆಗಳ ಅಂತಿಮ ಹಂತವು ಏಪ್ರಿಲ್ 2 ರಿಂದ 9 ರವರೆಗೆ ನಡೆಯಲಿದೆ. ಮೊದಲ ಹಂತ ಬರೆದ ವಿದ್ಯಾರ್ಥಿಗಳು ಎರಡನೇ ಹಂತಕ್ಕೂ ಹಾಜರಾಗಬಹುದು. ಎರಡರಲ್ಲೂ ಉತ್ತಮ ಅಂಕಗಳನ್ನು ಗಣನೆಗೆ ತೆಗೆದುಕೊಂಡು, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಅಖಿಲ ಭಾರತ ಶ್ರೇಯಾಂಕಗಳು ಮತ್ತು ವರ್ಗವಾರು ಕಟ್‌ಆಫ್ ಅಂಕಗಳನ್ನು ನಿರ್ಧರಿಸುತ್ತದೆ. ಅದರ ಪ್ರಕಾರ, 2.50 ಲಕ್ಷ ಅಭ್ಯರ್ಥಿಗಳನ್ನು ಅರ್ಹರೆಂದು ಘೋಷಿಸಲಾಗುತ್ತದೆ. ಇವರು ಮಾತ್ರ ಮೇ 17 ರಂದು ನಡೆಯಲಿರುವ ಜೆಇಇ ಅಡ್ವಾನ್ಸ್ಡ್ ಪರೀಕ್ಷೆ ಬರೆಯಲು ಅರ್ಹರಾಗುತ್ತಾರೆ.
