ಉದಯವಾಹಿನಿ, ಇಸ್ಲಾಮಾಬಾದ್‌: ಬಲೂಚ್ ಲಿಬರೇಶನ್ ಆರ್ಮಿ ಪಾಕಿಸ್ತಾನದ ಭದ್ರತಾ ಪಡೆಗಳ ಏಳು ಸಿಬ್ಬಂದಿಯನ್ನು ಕಸ್ಟಡಿಯಲ್ಲಿ ಇರಿಸಿರುವುದಾಗಿ ಹೇಳಿಕೊಂಡಿದೆ. ಅವರನ್ನು ಬಿಡುಗಡೆ ಮಾಡಲು ಕೈದಿಗಳ ವಿನಿಮಯಕ್ಕಾಗಿ ಪಾಕಿಸ್ತಾನ ಸರ್ಕಾರಕ್ಕೆ ಒಂದು ವಾರ ಗಡುವು ನೀಡಿದೆ. ಆ ಅವಧಿಯೊಳಗೆ ಮಾತುಕತೆ ನಡೆಯದಿದ್ದರೆ ಬಂಧಿತರಿಗೆ ಮರಣದಂಡನೆ ವಿಧಿಸಬಹುದು ಎಂದು ಎಚ್ಚರಿಕೆ ನೀಡಿದೆ.
ಈ ಬಗ್ಗೆ ಸಂಘಟನೆಯ ಮಾಧ್ಯಮ ವಿಭಾಗ ಹಕ್ಕಲ್ ಹೇಳಿಕೆ ಬಿಡುಗಡೆ ಮಾಡಿದೆ. ಹೇಳಿಕೆಯಲ್ಲಿ, ಗಡುವು ಮುಗಿಯಲು ಆರು ದಿನಗಳು ಮಾತ್ರ ಉಳಿದಿವೆ. ನಮ್ಮವರನ್ನು ಒಪ್ಪಿಸಿ, ಇದು ಅಂತಿಮ ಎಚ್ಚರಿಕೆ ಎಂದು ಪಾಕ್‌ಗೆ ಬಲೂಚ್ ಲಿಬರೇಶನ್ ಆರ್ಮಿ ಎಚ್ಚರಿಕೆ ರವಾನಿಸಿದೆ. ಈ ಬಗ್ಗೆ ಪಾಕಿಸ್ತಾನದ ಸೇನೆ ಅಥವಾ ಅಧಿಕಾರಿಗಳು ಯಾವುದೇ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಬಂಧಿತರನ್ನು ಆಪರೇಷನ್ ಹೆರೋಫ್ 2ನೇ ಹಂತದ ಸಮಯದಲ್ಲಿ ಸೆರೆಹಿಡಿಯಲಾಗಿದೆ. ಕಾರ್ಯಾಚರಣೆಯ ವೇಳೆ ಪಾಕ್‌ ಪಡೆಯ ಒಟ್ಟು 17 ಸಿಬ್ಬಂದಿಯನ್ನು ವಿವಿಧ ಸ್ಥಳಗಳಲ್ಲಿ ಬಂಧಿಸಲಾಗಿದೆ. ಬಂಧಿತರಲ್ಲಿ 10 ಮಂದಿ ಸ್ಥಳೀಯ ಬಲೂಚ್ ಜನಾಂಗದವರು ಎಂದು ಗುರುತಿಸಲಾಗಿತ್ತು. ಅವರು ಸ್ಥಳೀಯ ಪೊಲೀಸರೊಂದಿಗೆ ಸಂಪರ್ಕ ಹೊಂದಿದ್ದರಿಂದ ಎಚ್ಚರಿಕೆ ನೀಡಿ ಬಿಡುಗಡೆ ಮಾಡಲಾಗಿತ್ತು. ಅವರ ಬಿಡುಗಡೆ ನಿರ್ಧಾರವನ್ನು ಬಲೂಚ್ ಜನರ ಹಿತಾಸಕ್ತಿ ಎಂದು ಪರಿಗಣಿಸಲಾಗಿದೆ ಎಂದು ಬಿಎಲ್‌ಎ ಹೇಳಿಕೊಂಡಿದೆ. ಉಳಿದ ಏಳು ಬಂಧಿತರು ಪಾಕಿಸ್ತಾನಿ ಸೇನೆಯ ಘಟಕಗಳ ಸಿಬ್ಬಂದಿಯಾಗಿದ್ದಾರೆ. ಅವರು ತಮ್ಮ ವಶದಲ್ಲಿಯೇ ಇದ್ದಾರೆ. ಅವರನ್ನು ಬಲೂಚ್ ರಾಷ್ಟ್ರೀಯ ನ್ಯಾಯಾಲಯದ ವಿಚಾರಣೆಗೆ ಒಳಪಡಿಸಲಾಗಿದೆ. ವಿಚಾರಣೆಯ ಸಮಯದಲ್ಲಿ ಬಂಧಿತರು ನಾಗರಿಕರ ವಿರುದ್ಧದ ಕ್ರಮಗಳಲ್ಲಿ ಭಾಗಿಯಾಗಿರುವುದು ಮತ್ತು ಬಲೂಚ್ ಜನರ ಹತ್ಯೆಯ ಆರೋಪಗಳನ್ನು ಎದುರಿಸುತ್ತಿದ್ದಾರೆ. ವಿಚಾರಣೆಯ ಸಮಯದಲ್ಲಿ ಆರೋಪಿಗಳಿಗೆ ಪ್ರತಿಕ್ರಿಯಿಸಲು ಅವಕಾಶಗಳನ್ನು ನೀಡಲಾಗಿತ್ತು. ತಪ್ಪೊಪ್ಪಿಗೆ ಹೇಳಿಕೆಗಳನ್ನು ದಾಖಲಿಸಲಾಗಿತ್ತು ಎಂದು ಸಂಘಟನೆ ತಿಳಿಸಿದೆ.

 

Leave a Reply

Your email address will not be published. Required fields are marked *

error: Content is protected !!