ಉದಯವಾಹಿನಿ, ಪಾವ್‌ಟಕೆಟ್(ಅಮೆರಿಕ): ಅಮೆರಿಕದ ರೋಡ್ ಐಲೆಂಡ್ನ ಹಾಕಿ ಕ್ರೀಡಾಂಗಣದಲ್ಲಿ ಪಂದ್ಯದ ವೇಳೆ ಭೀಕರ ಗುಂಡಿನ ದಾಳಿ ನಡೆದಿದ್ದು, ದಾಳಿಯಲ್ಲಿ ಶಂಕಿತ ಸೇರಿದಂತೆ ಮೂವರು ಸಾವನ್ನಪ್ಪಿದ್ದರೆ, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಪಾವ್‌ಟಕೆಟ್ ಪೊಲೀಸ್ ಮುಖ್ಯಸ್ಥೆ ಟೀನಾ ಗೊನ್ಕಾಲ್ವ್ಸ್ ಮಾಧ್ಯಮಗಳ ಜೊತೆಗೆ ಮಾತನಾಡಿ, ಮೂವರು ಗಾಯಾಳುಗಳು ಗಂಭೀರ ಸ್ಥಿತಿಯಲ್ಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಂಡಿನ ದಾಳಿ ನಡೆಸಿದ ವ್ಯಕ್ತಿ ಸ್ವತಃ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾರೆ ಎಂದು ಹೇಳಿದರು.
ಗುಂಡು ಹಾರಿಸಿದ ವ್ಯಕ್ತಿಯ ಸಾವಿನಲ್ಲಿ ಪೊಲೀಸರು ಭಾಗಿಯಾಗಿಲ್ಲದಿದ್ದರೂ, ಅಧಿಕಾರಿಗಳು ಇನ್ನೂ ತನಿಖೆ ನಡೆಸುತ್ತಿದ್ದಾರೆ. ಇದು ಉದ್ದೇಶಿತ ಘಟನೆ ಎಂದು ತೋರುತ್ತದೆ. ಇದು ಕುಟುಂಬ ವಿವಾದವಾಗಿರಬಹುದು ಎಂದು ತಿಳಿಸಿದರು.
ಸಾವನ್ನಪ್ಪಿರುವ ಶಂಕಿತ ವ್ಯಕ್ತಿಯ ವಯಸ್ಸಿನ ಬಗ್ಗೆ ವಿವರಗಳನ್ನು ನೀಡದ ಗೊನ್ಕಾಲ್ವ್ಸ್, ಇಬ್ಬರೂ ಸಾವನ್ನಪ್ಪಿರುವವರು ವಯಸ್ಕರು ಎಂದು ಮಾಹಿತಿ ನೀಡಿದರು.ಪ್ರಾವಿಡೆನ್ಸ್ ಹೊರಗೆ ಕೆಲವು ಮೈಲುಗಳಷ್ಟು ದೂರದಲ್ಲಿರುವ ಪಾವ್‌ಟಕೆಟ್‌ನಲ್ಲಿರುವ ಡೆನ್ನಿಸ್ ಎಂ. ಲಿಂಚ್ ಅರೆನಾದಲ್ಲಿ ನಡೆದ ಗುಂಡಿನ ದಾಳಿಯನ್ನು ಕಂಡಿರುವ ಸಾಕ್ಷಿಗಳ ಜೊತೆಗೆ ಮಾತನಾಡಿ, ಏನಾಯಿತು ಎಂಬುದನ್ನು ತಿಳಿಯಲು ತನಿಖಾಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.
ಹಾಕಿ ಪಂದ್ಯದ ವೇಳೆ ತೆಗೆದ ವಿಡಿಯೋಗಳನ್ನು ಸಹ ಪರಿಶೀಲಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ದೃಶ್ಯಗಳಲ್ಲಿ ಆಟಗಾರರು ರಕ್ಷಣೆಗಾಗಿ ಡೈವಿಂಗ್ ಮಾಡುವುದು ಮತ್ತು ಪಾಪಿಂಗ್ ಶಬ್ದಗಳು ಕೇಳಿದ ಕೂಡಲೇ ಸ್ಟೇಡಿಯಂನಲ್ಲಿದ್ದ ಕ್ರೀಡಾಸಕ್ತರು ಚೆಲ್ಲಾಪಿಲ್ಲಿಯಾಗಿ ಓಡುತ್ತಿರುವುದನ್ನು ಕಾಣಬಹುದು ಎಂದು ತಿಳಿಸಿದರು.
ಕ್ರೀಡಾಂಗಣದ ಹೊರಗೆ, ಕಣ್ಣೀರು ಸುರಿಸುತ್ತಿರುವ ಕುಟುಂಬಗಳು ಮತ್ತು ಸಮವಸ್ತ್ರದಲ್ಲಿರುವ ಹಾಕಿ ಆಟಗಾರರು ಕ್ರೀಡಾಂಗಣದಿಂದ ಹೊರಡಲು ಬಸ್ ಹತ್ತುವ ಮೊದಲು ಅಪ್ಪಿಕೊಳ್ಳುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ಎರಡು ತಿಂಗಳ ಹಿಂದೆ ರೋಡ್ ಐಲೆಂಡ್ ಬ್ರೌನ್ ವಿಶ್ವವಿದ್ಯಾಲಯದಲ್ಲಿ ಗುಂಡಿನ ದಾಳಿ ನಡೆದಿತ್ತು. ಆ ಪ್ರಕರಣದಲ್ಲಿ ಒಬ್ಬ ಬಂದೂಕುಧಾರಿ ಇಬ್ಬರು ವಿದ್ಯಾರ್ಥಿಗಳನ್ನು ಕೊಂದಿದ್ದನು. ಜೊತೆಗೆ ಇತರ ಒಂಬತ್ತು ಜನರು ಗಾಯಗೊಂಡಿದ್ದರು. ಆ ಗುಂಡು ಹಾರಿಸಿದ ವ್ಯಕ್ತಿ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪ್ರಾಧ್ಯಾಪಕರ ಮೇಲೂ ಗುಂಡು ಹಾರಿಸಿದ್ದ. ಆದರೆ ಈ ಎರಡೂ ಘಟನೆಗಳಿಗೆ ಒಂದಕ್ಕೊಂದು ಸಂಬಂಧವಿಲ್ಲ. ಆದರೆ ಘಟನೆ ನಡೆದಿರುವುದು ತುಂಬಾ ದುಃಖಕರ ಎಂದು ಪಾವ್‌ಟಕೆಟ್ ಮೇಯರ್ ಡಾನ್ ಗ್ರೆಬಿಯನ್ ಹೇಳಿದರು.
ಪ್ರೌಢಶಾಲಾ ಮಕ್ಕಳು ಹಾಕಿ ಆಡುತ್ತಿದ್ದರು. ಅವರ ಕುಟುಂಬದವರು ಮಕ್ಕಳ ಆಟವನ್ನು ವೀಕ್ಷಿಸುತ್ತಿದ್ದರು. ಒಂದು ಮೋಜಿನ ಸಮಯ, ಈಗ ದುಃಖಕರ ಘಟನೆಯಾಗಿ ಮಾರ್ಪಟ್ಟಿದೆ ಎಂದು ಬೇಸರ ವ್ಯಕ್ತಪಡಿಸಿದರು
