ಉದಯವಾಹಿನಿ, ರಾಜನಿವಾಸ ಟ್ರೈಲರ್ ನೋಡಿದರೆ ತಕ್ಷಣ ಕಾಂತಾರದ ಝಲಕ್ ಕಾಣಿಸಿತು. ಆದರೆ ಇದು ಕಾಂತಾರಕ್ಕಿಂತಲೂ ಮೊದಲೇ ತಯಾರಾದಂಥ ಸಬ್ಜೆಕ್ಟ್. ಕೃತಿ ರೂಪಕ್ಕೆ ಇಳಿದು ಪರದೆಗೆ ಸಿದ್ಧಗೊಳ್ಳಲು ಇಷ್ಟು ಸಮಯ ತೆಗೆದುಕೊಂಡಿದೆ. ನಿಜ ಹೇಳಬೇಕೆಂದರೆ ʻಕಾಂತಾರʼ ಬಂದ ಬಳಿಕ ಹೋಲಿಕೆಯ ಆರೋಪ ಎದುರಾದೀತು ಎಂದು ಸಾಕಷ್ಟು ಬದಲಾವಣೆಯನ್ನ ಕೂಡ ಮಾಡಲಾಗಿದೆ. ಆದರೆ ಇದು ತುಳುನಾಡು ಭಾಗದ ಕಥೆಯಾದ ಕಾರಣ ಸಹಜವಾಗಿ ಒಂದಷ್ಟು ಹೋಲಿಕೆಗಳು ಕಾಣುತ್ತವೆ. ಆದರೆ ಚಿತ್ರದಲ್ಲಿ ಬೇರೆಯೇ ಕಥೆ ಇದೆ ಎನ್ನುತ್ತಾರೆ ನಿರ್ದೇಶಕ ಮಿಥುನ್ ಸುವರ್ಣ. ರಾಜನಿವಾಸದಲ್ಲಿ ನಾಯಕ ಪಾತ್ರ ನಿರ್ವಹಿಸಿ ರಾಜನಂತೆ ಮೆರೆದಾಡಿರುವವರು ರಾಘವ್. ಹಾಡು ಮತ್ತು ಹೊಡೆದಾಟದ ಗ್ಲಿಂಪ್ಸ್ ಕಂಡವರಿಗೆ ಇದೊಂದು ಮಾಸ್ ಮೂವಿಯಾಗುವ ಎಲ್ಲ ಲಕ್ಷಣಗಳು ಗೋಚರಿಸಿದೆ. ನಾಯಕಿಯಾಗಿ ಕೃತಿಕಾ ಕಂಗೊಳಿಸಿದ್ದಾರೆ. ಶ್ರೀನಗರ ಕಿಟ್ಟಿ ವಿಶೇಷ ಪಾತ್ರದಲ್ಲಿರುವುದು ಮೇಲ್ನೋಟಕ್ಕೆ ಎದ್ದು ಕಾಣಿಸಿದೆ. ಈ ಎಲ್ಲ ಕಾರಣಗಳಿಂದಲೇ ರಾಜನಿವಾಸ ಕುತೂಹಲ ಮೂಡಿಸಿದೆ.

ಟ್ರೈಲರ್ ಮತ್ತು ಮೂರು ಹಾಡುಗಳು ಈಗಾಗಲೇ ಸಿನಿಮಾ ಪ್ರಿಯರ ಮನಗೆದ್ದಿದೆ. ಟ್ರೈಲರ್ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು ಪ್ಯಾನ್ ಇಂಡಿಯಾದಲ್ಲಿ ನಿರೀಕ್ಷೆ ಸೃಷ್ಟಿಸಿದೆ. ಸಿನಿಮಾರಂಗದ ಅನೇಕರು ರಾಜನಿವಾಸ ಈ ವರ್ಷದ ಅತ್ಯುತ್ತಮ ಚಿತ್ರವಾಗಲಿದೆ ಎಂದಿದ್ದಾರೆ, ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಕ್ತಾಯ ಹಂತದಲ್ಲಿದೆ. ಇದೇ ತಿಂಗಳಾಂತ್ಯಕ್ಕೆ ಬಿಡುಗಡೆ ದಿನಾಂಕವನ್ನು ಘೋಷಿಸಲಾಗುತ್ತದೆ. ಕನ್ನಡದ ದೊಡ್ಡ ವಿತರಕ ಸಂಸ್ಥೆಗಳು ಸಿನಿಮಾ ಬಿಡುಗಡೆಗೆ ಕೇಳುತ್ತಿದ್ದಾರೆ ಮತ್ತು ತಮಿಳು, ತೆಲುಗು ಭಾಷೆಯಲ್ಲೂ ಬೇಡಿಕೆ ಇದೆ ಎನ್ನುತ್ತಿದ್ದಾರೆ ನಿರ್ಮಾಪಕರು. ರಾಜನಿವಾಸ ಚಿತ್ರವನ್ನು ಡಿಎಎಂ-36 ಸ್ಟುಡೀಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ. ದಾ. ಪಿ ಆಂಜನಪ್ಪ ನಿರ್ಮಾಪಕರು. ಸಹ ನಿರ್ಮಾಪಕರಾಗಿ ಲೋಕೇಶ್ ಗೌಡ ಬಂಡವಾಳ ಹೂಡಿದ್ದಾರೆ. ಬಲ ರಾಜ್ವಾಡಿ, ಯಮುನಾ ಶ್ರೀನಿಧಿ , ನೀನಾಸಂ ಅಶ್ವಥ್, ಸಹನ, ಪ್ರಶಾಂತ್ ಮೊದಲಾದ ಕಲಾವಿದರು ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ವಿಜಯ್ ಯಾರ್ಡ್ಲಿ ಸಂಗೀತ ನಿರ್ದೇಶನ ಇರುವ ರಾಜನಿವಾಸದ ಛಾಯಾಗ್ರಹಣ ರಮೇಶ್ ರಾಜ್ ಅವರದ್ದಾಗಿದೆ.

 

Leave a Reply

Your email address will not be published. Required fields are marked *

error: Content is protected !!