ಉದಯವಾಹಿನಿ, ಮುಂಬೈ(ಮಹಾರಾಷ್ಟ್ರ): ಕರ್ನಾಟಕದ ರೀತಿಯಲ್ಲಿ ಮಹಾರಾಷ್ಟ್ರದಲ್ಲೂ ಮುಸ್ಲಿಮರಿಗೆ ನೀಡಲಾಗಿದ್ದ ಮೀಸಲಾತಿಯನ್ನು ಅಲ್ಲಿನ ಬಿಜೆಪಿ ಸರ್ಕಾರ ರದ್ದುಗೊಳಿಸಿದೆ. ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮುಸ್ಲಿಂ ಸಮುದಾಯದವರಿಗೆ ನೀಡಲಾಗಿದ್ದ ಶೇಕಡಾ 5ರಷ್ಟು ಮೀಸಲಾತಿಯನ್ನು ಸಿಎಂ ದೇವೇಂದ್ರ ಫಡ್ನವೀಸ್​ ನೇತೃತ್ವದ ಸರ್ಕಾರ ರದ್ದುಗೊಳಿಸಿ ಮಂಗಳವಾರ ಆದೇಶಿಸಿದೆ.
ಮುಸ್ಲಿಂ ಸಮುದಾಯಕ್ಕೆ ನೀಡಲಾಗಿದ್ದ ಶೇ.5ರಷ್ಟು ಮೀಸಲಾತಿ ಅಧಿಸೂಚನೆಗೆ ಸಂಬಂಧಿಸಿದಂತೆ ಹೈಕೋರ್ಟ್​ ಮಧ್ಯಂತರ ತಡೆಯಾಜ್ಞೆ ನೀಡಿದ್ದರಿಂದ, ಆದೇಶವನ್ನೇ ರದ್ದು ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಮೀಸಲಾತಿ ನೀಡಿದ್ದ ಮಹಾಅಘಾಡಿ: ಹಿಂದಿನ ಕಾಂಗ್ರೆಸ್​, ಶಿವಸೇನೆ ಮತ್ತು ಎನ್‌ಸಿಪಿ ಸರ್ಕಾರದ ಮಹಾಅಘಾಡಿ ಮೈತ್ರಿ ಸರ್ಕಾರವು ಮರಾಠರಿಗೆ ಶೇ.16ರಷ್ಟು ಮತ್ತು ಮುಸ್ಲಿಮರಿಗೆ ಶೇ.5ರಷ್ಟು ಮೀಸಲಾತಿ ನೀಡಿ, ಅಧಿಸೂಚನೆ ಹೊರಡಿಸಿತ್ತು.

ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಮುಸ್ಲಿಂ ಸಮುದಾಯಕ್ಕೆ ಸರ್ಕಾರದ ಉದ್ಯೋಗ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ನೀಡಲಾಗಿದ್ದ ಶೇಕಡಾ ಐದರಷ್ಟು ಮೀಸಲಾತಿಗೆ ಸಂಬಂಧಿಸಿದ ಹಿಂದಿನ ಎಲ್ಲಾ ಆದೇಶ ಮತ್ತು ಅಧಿಸೂಚನೆಗಳನ್ನು ರದ್ದುಗೊಳಿಸಲಾಗಿದೆ ಎಂದು ಸರ್ಕಾರ ಹೇಳಿದೆ. 2014ರಿಂದ ಹೊರಡಿಸಲಾದ ಅಧಿಸೂಚನೆ ರದ್ದುಗೊಳಿಸಿದ್ದರಿಂದ ವಿಶೇಷ ಹಿಂದುಳಿದ ವರ್ಗದಲ್ಲಿ ಮುಸ್ಲಿಮರಿಗೆ ಜಾತಿ ಮತ್ತು ಕೆನೆಪದರವಲ್ಲದ ಪ್ರಮಾಣಪತ್ರಗಳನ್ನು ನೀಡುವುದನ್ನು ನಿಲ್ಲಿಸಲಾಗಿದೆ ಎಂಬುದು ಹೊಸ ಆದೇಶದಲ್ಲಿದೆ.

 

Leave a Reply

Your email address will not be published. Required fields are marked *

error: Content is protected !!