ಉದಯವಾಹಿನಿ, ಚೆನ್ನೈ (ತಮಿಳುನಾಡು): ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆ ರಾಜ್ಯದ 1.31 ಕೋಟಿ ಮಹಿಳೆಯರ ಖಾತೆಗಳಿಗೆ ಒಮ್ಮೆಗೆ ತಲಾ 5 ಸಾವಿರ ರೂಪಾಯಿ ಹಾಕುವ ಮೂಲಕ ಸುದ್ದಿಯಲ್ಲಿರುವ ಸಿಎಂ ಎಂ.ಕೆ. ಸ್ಟಾಲಿನ್​ ನೇತೃತ್ವದ ತಮಿಳುನಾಡು ಸರ್ಕಾರ ಒಟ್ಟು 10.71 ಲಕ್ಷ ಕೋಟಿ ರೂಪಾಯಿ ಸಾಲದ ಹೊರೆ ಹೊರಲಿದೆ.2026-27ರ ಹಣಕಾಸು ವರ್ಷದ ಮಧ್ಯಂತರ ಬಜೆಟ್ ಮಂಡಿಸಲಾಗಿದ್ದು, ರಾಜ್ಯದ ಒಟ್ಟು ಸಾಲ 10.71 ಲಕ್ಷ ಕೋಟಿಗಳಷ್ಟಿರಲಿದೆ ಎಂದು ಅಂದಾಜಿಸಿದೆ. ಅಂದರೆ, ರಾಜ್ಯವು ಅಂದಾಜು 7.21 ಕೋಟಿ ಜನಸಂಖ್ಯೆಯನ್ನು ಹೊಂದಿದ್ದು, ಪ್ರತಿ ಪ್ರಜೆಯ ತಲೆಯ ಮೇಲೆ ಸುಮಾರು 1 ಲಕ್ಷ 48 ಸಾವಿರ ರೂಪಾಯಿ ಹೊರೆ ಬೀಳಲಿದೆ.
2026-27ರ ಹಣಕಾಸು ವರ್ಷದ ತಮಿಳುನಾಡು ಸರ್ಕಾರದ ಮಧ್ಯಂತರ ಬಜೆಟ್ ಅನ್ನು ರಾಜ್ಯ ಹಣಕಾಸು ಸಚಿವ ತಂಗಮ್ ತೆನ್ನರಸು ಇಂದು ವಿಧಾನಸಭೆಯಲ್ಲಿ ಮಂಡಿಸಿದರು. ಒಟ್ಟು 2 ಗಂಟೆ 22 ನಿಮಿಷಗಳ ಕಾಲ ತಮ್ಮ ಬಜೆಟ್ ಭಾಷಣ ಓದಿದರು. ಇದರಲ್ಲಿ ರಾಜ್ಯದ ವೈಯಕ್ತಿಕ ತೆರಿಗೆ ಆದಾಯ, ಕೇಂದ್ರ ತೆರಿಗೆಗಳಲ್ಲಿ ರಾಜ್ಯ ಸರ್ಕಾರದ ಪಾಲು ಮತ್ತು ಕೇಂದ್ರ ಸರ್ಕಾರದಿಂದ ಬರಬೇಕಾದ ಅನುದಾನ ಸೇರಿದಂತೆ ವಿವಿಧ ಹಣಕಾಸು ವಿಷಯಗಳಿದ್ದವು.

ವೈಯಕ್ತಿಕ ತೆರಿಗೆ ಆದಾಯ ಹೆಚ್ಚಳ ನಿರೀಕ್ಷೆ: 2025-26ರ ಬಜೆಟ್​​​ನಲ್ಲಿ 2,20,895 ಕೋಟಿ ರೂಪಾಯಿ ಅಂದಾಜು ಮಾಡಲಾಗಿದ್ದ ವೈಯಕ್ತಿಕ ತೆರಿಗೆ ಆದಾಯವು 2,06,540 ಕೋಟಿ ರೂಪಾಯಿಗೆ ಕುಸಿತ ಕಂಡಿದೆ. ಇದಕ್ಕೆ ಪ್ರಮುಖ ಕಾರಣ, ಸರಕು ಮತ್ತು ಸೇವಾ ತೆರಿಗೆ ಇಳಿಕೆ ಎಂದು ಉಲ್ಲೇಖಿಸಲಾಗಿದೆ.
ಆದರೆ, 2026-27ರ ಮಧ್ಯಂತರ ಬಜೆಟ್ ಅಂದಾಜಿನಲ್ಲಿ, ರಾಜ್ಯದ ವೈಯಕ್ತಿಕ ತೆರಿಗೆ ಆದಾಯವನ್ನು 2,29,579 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇದರಲ್ಲಿ ವಾಣಿಜ್ಯ ತೆರಿಗೆಗಳ ಮೂಲಕ 1,62,417 ಕೋಟಿ ರೂಪಾಯಿ, ಮುದ್ರಾಂಕ ಮತ್ತು ನೋಂದಣಿ ಶುಲ್ಕವಾಗಿ 31,881 ಕೋಟಿ ರೂಪಾಯಿ, ವಾಹನಗಳ ಮೇಲಿನ ತೆರಿಗೆಯಾಗಿ 14,928 ಕೋಟಿ ರೂಪಾಯಿ ಮತ್ತು ಅಬಕಾರಿ ಸುಂಕವಾಗಿ 13,668 ಕೋಟಿ ರೂಪಾಯಿ ಬರಲಿದೆ ಎಂದು ಅಂದಾಜಿಸಲಾಗಿದೆ. ಅಂದರೆ, ವೈಯಕ್ತಿಕ ತೆರಿಗೆ ಆದಾಯವು ಕಳೆದ ವರ್ಷಕ್ಕಿಂತ ಶೇಕಡಾ 11.15 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಬಜೆಟ್​ನಲ್ಲಿ ಮಂಡಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!