ಉದಯವಾಹಿನಿ, ನವದೆಹಲಿ: ಭಾರತ AI ಇಂಪ್ಯಾಕ್ಟ್ ಶೃಂಗಸಭೆಯ ಹೊರತಾಗಿಯೂ ಪ್ರಧಾನಿ ನರೇಂದ್ರ ಮೋದಿ ಬುಧವಾರ ಗೂಗಲ್ ಸಿಇಒ ಸುಂದರ್ ಪಿಚೈ ಅವರನ್ನು ಭೇಟಿ ಮಾಡಿದರು. ಕೃತಕ ಬುದ್ಧಿಮತ್ತೆಯಲ್ಲಿ ಭಾರತದ ಬೆಳವಣಿಗೆ ಮತ್ತು ಭಾರತೀಯ ವಿದ್ಯಾರ್ಥಿಗಳು ಮತ್ತು ಈ ವಲಯದ ವೃತ್ತಿಪರರೊಂದಿಗೆ ಗೂಗಲ್​ ಹೇಗೆ ಸಹಕರಿಸಬಹುದು ಎಂಬುದರ ಕುರಿತು ಚರ್ಚಿಸಲಾಯಿತು.

ಸುಂದರ್​ ಪಿಚೈ ಭೇಟಿ ಕುರಿತಂತೆ ಪ್ರಧಾನಿ ಮೋದಿ X ಪೋಸ್ಟ್​​ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಪಿಚೈ ಅವರನ್ನು ಭೇಟಿಯಾಗುತ್ತಿರುವುದು ಸಂತಸದ ವಿಷಯ ಎಂದು ಹೇಳಿದ್ದಾರೆ. ಭಾರತವು AI ನಲ್ಲಿ ಮಾಡುತ್ತಿರುವ ಕೆಲಸ ಮತ್ತು ಗೂಗಲ್​ ಈ ಕ್ಷೇತ್ರದಲ್ಲಿ ನಮ್ಮ ಪ್ರತಿಭಾನ್ವಿತ ವಿದ್ಯಾರ್ಥಿಗಳು ಮತ್ತು ವೃತ್ತಿಪರರೊಂದಿಗೆ ಹೇಗೆ ಕೆಲಸ ಮಾಡಬಹುದು ಎಂಬುದರ ಕುರಿತು ಅವರು ಮಾತನಾಡಿದರು ಎಂದು ಹೇಳಿದ್ದಾರೆ.

ಭಾರತ AI ಇಂಪ್ಯಾಕ್ಟ್ ಶೃಂಗಸಭೆ ಶೃಂಗಸಭೆಯಲ್ಲಿ ಭಾಗವಹಿಸುವುದಕ್ಕಾಗಿ ಪಿಚೈ ನವದೆಹಲಿಗೆ ಭೇಟಿ ನೀಡಿದ್ದಾರೆ. ಈ ಬಗ್ಗೆ ಅವರು ಸಹ ಎಕ್ಸ್​ ಪೋಸ್ಟ್​ ಮಾಡಿದ್ದಾರೆ. ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದು ಸಂತಸ ತಂದಿದೆ. ಭಾರತದಲ್ಲಿ AI ಬೆಳವಣಿಗೆ ಹಾಗೂ ಅದನ್ನು ಅಳವಡಿಸಿಕೊಳ್ಳುವ ಬಗ್ಗೆ ಅವರ ದೃಷ್ಟಿಕೋನ ಮತ್ತು ಗೂಗಲ್ ಹೇಗೆ ಸಹಾಯ ಮಾಡುತ್ತಿದೆ ಎಂಬುದರ ಬಗ್ಗೆ ಚರ್ಚಿಸಿದೆವು. ಆರೋಗ್ಯ ಸುಧಾರಣೆ, ಎಲ್ಲಾ ಭಾಷೆಗಳಲ್ಲಿ ಮಾಹಿತಿ ಪ್ರವೇಶ, ಸ್ಟಾರ್ಟಪ್‌ಗಳು, ಕೃಷಿ ಹೀಗೆ ಸಾಕಷ್ಟು ವಿಷಯಗಳ ಬಗ್ಗೆ ಮಾತನಾಡಿದೆವು ಎಂದು ಅವರು ಎಕ್ಸ್​ ಪೋಸ್ಟ್​ ನಲ್ಲಿ ಬರೆದುಕೊಂಡಿದ್ದಾರೆ.

ಜಾಗತಿಕ ದಕ್ಷಿಣದಲ್ಲಿ ಆಯೋಜಿಸಲಾಗುತ್ತಿರುವ ಮೊದಲ ಜಾಗತಿಕ AI ಶೃಂಗಸಭೆ ಆಗಿರುವ ಇಂಡಿಯಾ AI ಇಂಪ್ಯಾಕ್ಟ್ ಶೃಂಗಸಭೆಯು, ಸರ್ವಜನ ಹಿತಾಯ, ಸರ್ವಜನ ಸುಖಾಯ ಎಂಬ ದ್ಯೇಯ ವಾಕ್ಯದೊಂದಿಗೆ ನಡೆಯುತ್ತಿದೆ. ರಾಷ್ಟ್ರೀಯ ದೃಷ್ಟಿಕೋನ ಮತ್ತು ಮಾನವೀಯತೆಗಾಗಿ AI ಎಂಬ ಜಾಗತಿಕ ತತ್ವದೊಂದಿಗೆ ಹೊಂದಿಕೆಯಾಗುವ AIನ ಪರಿವರ್ತನೆಯ ಗುರಿ ಹೊಂದಿದೆ.

ಶೃಂಗಸಭೆಯಲ್ಲಿ 110 ಕ್ಕೂ ಹೆಚ್ಚು ದೇಶಗಳು, 30 ಅಂತಾರಾಷ್ಟ್ರೀಯ ಸಂಸ್ಥೆಗಳು, ಸುಮಾರು 45 ಸಚಿವರು ಸೇರಿದಂತೆ ಹಲವು ಉದ್ಯಮಿಗಳು ಇದರಲ್ಲಿ ಭಾಗವಹಿಸಿದ್ದಾರೆ. AI ಶೃಂಗಸಭೆಯು AI ಆಡಳಿತ, ಸುರಕ್ಷತೆ ಮತ್ತು ಸಾಮಾಜಿಕ ಪ್ರಭಾವದ ಕುರಿತು ಜಾಗತಿಕ ಸಹಕಾರವನ್ನು ಬಲಪಡಿಸುವ ಗುರಿ ಹೊಂದಿದೆ. ಇಂಡಿಯಾ AI ಇಂಪ್ಯಾಕ್ಟ್ ಶೃಂಗಸಭೆ 2026, ಪ್ರಮುಖವಾಗಿ ಮೂರು ಸೂತ್ರಗಳಿಂದ ರೂಪಿತವಾಗಿದೆ. ಪೀಪಲ್(ಜನರು)​, ಪ್ಲಾನೆಟ್(ಗ್ರಹ)​ ಮತ್ತು ಪ್ರೋಗ್ರೆಸ್( ಪ್ರಗತಿ)​ ಎಂಬ ಮೂರು ಪ್ರಮುಖ ಅಂಶಗಳ ಮೇಲೆ ಕೆಲಸ ಮಾಡುತ್ತಿದೆ. ಈ ಸೂತ್ರಗಳು ಕೃತಕ ಬುದ್ಧಿಮತ್ತೆಯ ಮೇಲೆ ಜಾಗತಿಕ ಸಹಕಾರದ ಮೂಲ ತತ್ವಗಳನ್ನು ನಿರೂಪಿಸುತ್ತವೆ.

Leave a Reply

Your email address will not be published. Required fields are marked *

error: Content is protected !!