ಉದಯವಾಹಿನಿ, ವಾಲೋಂಗ್‌​ (ಅರುಣಾಚಲ ಪ್ರದೇಶ): ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್‌ನಲ್ಲಿ ಹೊತ್ತಿ ಉರಿಯುತ್ತಿರುವ ಕಾಡಿನ ಬೆಂಕಿಯನ್ನು ನಿಯಂತ್ರಿಸಲು ಸೇನೆ ಮತ್ತು ಭಾರತೀಯ ವಾಯುಪಡೆ ನಿರಂತರ ಕಾರ್ಯಾಚರಣೆಗಳಲ್ಲಿ ತೊಡಗಿವೆ.
ಭೀಕರ ಕಾಡ್ಗಿಚ್ಚನ್ನು ಎದುರಿಸಲು ವೈಮಾನಿಕ ಅಗ್ನಿಶಾಮಕ ಕಾರ್ಯಾಚರಣೆ ನಡೆಸುತ್ತಿದ್ದು, ಹೆಲಿಕಾಪ್ಟರ್‌ಗಳು ಸವಾಲಿನ ಪರಿಸ್ಥಿತಿಯಲ್ಲಿ ನಿರಂತರವಾಗಿ ನೀರು ಹಾಕುವ ಕಾರ್ಯಾಚರಣೆಗಳನ್ನು ನಡೆಸುತ್ತಿವೆ. ಜೊತೆಗೆ ಅಗ್ನಿಶಾಮಕದಳಗಳು ಕೂಡ ಭೂಮಿ ಮೇಲಿಂದ ಬೆಂಕಿ ನಂದಿಸುವ ಪ್ರಯತ್ನ ಮುಂದುವರೆಸಿವೆ.ಅರುಣಾಚಲ ಪ್ರದೇಶದ ವಾಲೋಂಗ್‌ನಲ್ಲಿ, ಐಎಎಫ್ ಹೆಲಿಕಾಪ್ಟರ್‌ಗಳು ಬೆಂಕಿ ಹೊತ್ತಿಕೊಂಡ ಪ್ರದೇಶದ ಮೇಲೆ 139,800 ಲೀಟರ್ ನೀರನ್ನು ಹರಿಸುವ ಮೂಲಕ ಯಶಸ್ವಿಯಾಗಿ ನಂದಿಸಿವೆ. ನಾಗಾಲ್ಯಾಂಡ್‌ನ ಡ್ಜುಕೌ ಕಣಿವೆಯ ಮೇಲೆ ಕಾರ್ಯಾಚರಣೆ ಮುಂದುವರೆದಿದೆ, ಅಲ್ಲಿ ಜಪ್ಫು ಶಿಖರದ ಬಳಿ ಬೆಂಕಿಯನ್ನು ನಂದಿಸಲು ಮಿ -17 ವಿ 5 ಹೆಲಿಕಾಪ್ಟರ್‌ಗಳು ದಿಮಾಪುರದ ಬಳಿಯ ಪದುಂಪೋಖಿರಿ ಸರೋವರದಿಂದ ನೀರನ್ನು ಪಡೆದು ಬೆಂಕಿ ನಂದಿಸುವ ಪ್ರಯತ್ನ ನಡೆಸಿವೆ.
ಅಸ್ಪಷ್ಟ ಗೋಚರತೆ ಮತ್ತು ಗಾಳಿಯಿಂದಾಗಿ ಈ ವೈಮಾನಿಕ ಕಾರ್ಯಾಚರಣೆ ಸವಾಲಿನಿಂದ ಕೂಡಿದೆ. ಕಾರ್ಯಾಚರಣೆ ಕುರಿತು ಮಂಗಳವಾರ ಮಾತನಾಡಿದ ಏರ್ ವೈಸ್ ಮಾರ್ಷಲ್ ಅಜಯ್ ಕುನ್ನತ್, ವಾಯುಪಡೆಯು ವಾಯು ಕಾರ್ಯಾಚರಣೆಗಳಿಗೆ ತಂತ್ರಜ್ಞಾನವನ್ನು ಬಳಸುವ ವಿಧಾನವನ್ನು ಬದಲಾಯಿಸಬೇಕು. ಇಂತಹ ಕಾರ್ಯಾಚರಣೆಗಳು ಶೂನ್ಯ ದೋಷ ಪರಿಸರದಲ್ಲಿ ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ತೋರಿಸಿದೆ ಎಂದಿದ್ದಾರೆ.
ಶುಷ್ಕ ಹವಾಮಾನ ಪರಿಸ್ಥಿತಿಗಳು ಮತ್ತು ಬೆಟ್ಟದ ಬುಡಕಟ್ಟು ಜನಾಂಗದವರು ಬಳಸುವ ಸಾಂಪ್ರದಾಯಿಕ ಜುಮ್ ಕೃಷಿಯ ಅಭ್ಯಾಸವು ಈಶಾನ್ಯದಲ್ಲಿ ಕಾಡ್ಗಿಚ್ಚು ಹಬ್ಬಿಗೆ ಕಾರಣವಾಗಿದೆ ಎಂದು ಗುವಾಹಟಿಯಲ್ಲಿರುವ ರಕ್ಷಣಾ ವಕ್ತಾರರು ತಿಳಿಸಿದ್ದಾರೆ.ಫೆಬ್ರವರಿ 13ರಂದು ಕಾಡಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಟ್ಟಗಳಾದ್ಯಂತ ಉರಿಯುತ್ತಿರುವ ಬೆಂಕಿಯನ್ನು ನಂದಿಸಲು ಹೆಲಿಕಾಪ್ಟರ್‌ಗಳು ನೀರನ್ನು ಹರಿಸುತ್ತಿರುವ ವಿಡಿಯೋವನ್ನು ಸೇನೆ ಹಂಚಿಕೊಂಡಿದೆ.

 

Leave a Reply

Your email address will not be published. Required fields are marked *

error: Content is protected !!