ಉದಯವಾಹಿನಿ, ಹರಿದ್ವಾರದ ಕೆಲವು ಧಾರ್ಮಿಕ ಸ್ಥಳಗಳಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳನ್ನು ಪ್ರಸ್ತಾಪಿಸಿರುವ ಉತ್ತರಾಖಂಡ ಹೈಕೋರ್ಟ್ ಪರಿಸ್ಥಿತಿ ಚಿಂತಾಜನಕವಾಗಿದ್ದು, ದೇಗುಲ ಮತ್ತು ಆಶ್ರಮಗಳಲ್ಲಿ ದಿಢೀರ್ ತಪಾಸಣೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಿದೆ.
ಮಹಿಳೆಯೊಂದಿಗೆ ಸಹಜೀವನ ನಡೆಸುತ್ತಿರುವ ಆರೋಪವೂ ಸೇರಿದಂತೆ ಮಾ ಚಂಡಾ ದೇವಿ ದೇಗುಲದ ಮುಖ್ಯ ಅರ್ಚಕರ ವಿರುದ್ಧ ದಾಖಲಾಗಿರುವ ವಿವಿಧ ಕ್ರಿಮಿನಲ್ ಪ್ರಕರಣಗಳ ವಿಚಾರಣೆ ವೇಳೆ ನ್ಯಾಯಮೂರ್ತಿ ರಾಕೇಶ್ ತಪ್ಲಿಯಾಲ್ ಈ ನಿರ್ದೇಶನ ನೀಡಿದ್ದಾರೆ. ದೇವಾಲಯ ನಿರ್ವಹಿಸುತ್ತಿರುವವರ ವಿರುದ್ಧ ಇಂತಹ ಹಲವು ಅಪರಾಧ ಪ್ರಕರಣಗಳು ದಾಖಲಾಗುತ್ತಿರುವುದನ್ನು ಗಮನಿಸಿರುವುದಾಗಿ ನ್ಯಾಯಾಲಯ ತಿಳಿಸಿದೆ. ಅಂತೆಯೇ ಧಾರ್ಮಿಕ ಸ್ಥಳಗಳಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಕುರಿತು ಪರಿಶೀಲಿಸಲು ದಿಢೀರ್ ತಪಾಸಣೆ ನಡೆಸಲು ತಂಡ ರಚಿಸುವಂತೆ ಸೂಚಿಸಿದೆ. ಅಕ್ರಮ ಚಟುಚಟಿಕೆಗಳು ದೇವಾಲಯಗಳಲ್ಲಿ ನಡೆಯುತ್ತಿವೆ ಎಂಬಂತಹ ಕಾಲವೂ ಬಂತೇ? ಎಂದು ಪೀಠ ಬೇಸರ ವ್ಯಕ್ತಪಡಿಸಿದೆ. ಜೊತೆಗೆ ದೇಗುಲಗಳನ್ನು ಉಳಿಸಿ ಎಂದು ಬುದ್ಧಿವಾದ ಹೇಳಿದೆ.

ದೇಶ, ವಿದೇಶಗಳ ವಿವಿಧೆಡೆಯಿಂದ ಭಕ್ತಾದಿಗಳು ಇಲ್ಲಿ ದೇವರಿದ್ದಾರೆ ಎಂದು ಬರುತ್ತಾರೆ. ಆದರೆ, ಇಂತಹ ಮಂದಿರಗಳಲ್ಲಿಯೇ ಅಲ್ಲಿನ ಮಹಾಂತರು ಈ ಎಲ್ಲ ಚಟುವಟಿಕೆಗಳನ್ನು ನಡೆಸಿದ್ದಾರೆ. ಮೊದಲಿನ ಪ್ರಕರಣದಲ್ಲಿ ವಿಚ್ಛೇದನ ಪ್ರಕ್ರಿಯೆ ನಡೆಯುತ್ತಿದೆ, ಮುಂದುವರಿದು ಈಗ ಲಿವ್-ಇನ್ ಸಂಬಂಧ ಕೇಳಿಬಂದಿದೆ. ಲಿವ್ ಇನ್ ಸಂಬಂಧ ಇರುವವರ ಜೊತೆಗೆ ಮಗುವೂ ಆಗಿದೆ. ಇದಲ್ಲದೆ ಪಂಜಾಬ್ ಪೊಲೀಸರು ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಿಸಿದ್ದಾರೆ ಎಂದು ನ್ಯಾಯಾಲಯ ಪ್ರಕರಣದ ಬಗ್ಗೆ ತೀವ್ರ ಬೇಸರ ಹೊರಹಾಕಿದೆ.
ದಿಢೀರ್ ತಪಾಸಣೆ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ತಿಳಿಸಿದೆ. ಆಶ್ರಮ, ದೇವಾಲಯಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದರೆ ಅದು ಅತ್ಯಂತ ಚಿಂತಾಜನಕ ಸ್ಥಿತಿ ಎಂದು ತಿಳಿಸಿದೆ. ದೇವಾಲಯದ ಪ್ರಧಾನ ಅರ್ಚಕ ರೋಹಿತ್ ಗಿರಿ ಅವರ ವಿರುದ್ಧ ಮಹಿಳೆಯೊಬ್ಬರ ವಿಚ್ಛೇದನ ಪ್ರಕ್ರಿಯೆ ನಡೆಯತ್ತಿರುವಾಗಲೇ ಆಕೆಯೊಂದಿಗೆ ಸಹಜೀವನದಲ್ಲಿ ತೊಡಗಿ ಮಗು ಪಡೆದಿರುವುದು. ಜೊತೆಗೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ವಿವಿಧ ಪ್ರಕರಣಗಳು ದಾಖಲಾಗಿರುವುದನ್ನು ಗಮನಿಸಿರುವ ನ್ಯಾಯಾಲಯ ಇಂತಹ ಘಟನೆಗಳಿಂದ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದಿದೆ. ಕನಿಷ್ಠ ದೇವಾಲಯ, ಮಸೀದಿ, ಗುರುದ್ವಾರಗಳಂತಹ ಪವಿತ್ರ ಸ್ಥಳಗಳನ್ನು ಇಂತಹ ಚಟುವಟಿಕೆಗಳಿಂದ ಉಳಿಸಬೇಕೆಂದು ಖಡಕ್ ಎಚ್ಚರಿಕೆ ನೀಡಿದೆ.

Leave a Reply

Your email address will not be published. Required fields are marked *

error: Content is protected !!