ಉದಯವಾಹಿನಿ, ನವದೆಹಲಿ: ಭಾರತ ಮಂಟಪದಲ್ಲಿ ನಡೆಯುತ್ತಿರುವ ಜಾಗತಿಕ ಕೃತಕ ಬುದ್ದಿಮತ್ತೆ(AI) ಶೃಂಗದಲ್ಲಿ ಪ್ರಧಾನಿ ನರೇಂದ್ರ ಮೋದಿ ದೃಷ್ಟಿಕೋನವನ್ನು ಪರಿಚಯಿಸಿದ್ದಾರೆ. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, 21ನೇ ಶತಮಾನದ ಎಐ ಆಧಾರಿತ ಜಗತ್ತಿನಲ್ಲಿ ಮಾನವೀಯತೆಯ ಕಲ್ಯಾಣಕ್ಕಾಗಿ ಭಾರತದ ಈ MANAV ದೃಷ್ಟಿಕೋನವು ಒಂದು ಪ್ರಮುಖ ಕೊಂಡಿಯಾಗಲಿದೆ ಎಂದು ಹೇಳಿ ಐದು ಪ್ರಮುಖ ತತ್ವಗಳನ್ನು ವಿವರಿಸಿದರು.
ಇಂದು ನಾವು ನೋಡುತ್ತಿರುವುದು ಎಐ ಪ್ರಭಾವದ ಆರಂಭ ಮಾತ್ರ. ಎಐ ಪರಿವರ್ತನೆ ಮಾಡುವ ಶಕ್ತಿಯನ್ನು ಹೊಂದಿದೆ. ಇದು ಸರಿಯಾದ ದಾರಿಯಲ್ಲಿ ಹೋಗದೇ ಇದ್ದರೆ ಸಮಸ್ಯೆಯಾಗಲಿದೆ. ಇದು ಸರಿಯಾದ ಹಾದಿಯಲ್ಲಿ ಹೋದರೆ ಅದು ಪರಿಹಾರ ಪ್ರಕ್ರಿಯೆಯಲ್ಲಿ ಸಹಾಯ ಮಾಡುತ್ತದೆ ಎಂದು ವಿಶ್ಲೇಷಿಸಿದರು. ಪ್ರಸ್ತುತ ಎಐ ಕ್ರಾಂತಿಯನ್ನು ನಾಗರಿಕತೆಯ ದಿಕ್ಕನ್ನು ಮರುಹೊಂದಿಸುವ ಮತ್ತು ಅಭಿವೃದ್ಧಿಯ ವೇಗವನ್ನು ಹೆಚ್ಚಿಸುವ ಐತಿಹಾಸಿಕ ತಿರುವುಗಳಿಗೆ ಹೋಲಿಸಿದ ಮೋದಿ, ಬೆಂಕಿಯ ಆವಿಷ್ಕಾರದಿಂದ ಲಿಪಿಗಳು ಬಂದವು ಬಳಿಕ ವೈರ್‌ಲೆಸ್ ಸಂವಹನದ ಆವಿಷ್ಕಾರ ನಡೆಯಿತು. ಹಿಂದಿನ ತಾಂತ್ರಿಕ ಬದಲಾವಣೆಗಳು ಹರಡಲು ವರ್ಷಗಳೇ ತೆಗೆದುಕೊಂಡಿದ್ದವು. ಆದರೆ ಎಐನಿಂದಾಗಿ ಬಹಳ ವೇಗವಾಗಿ ಜಗತ್ತಿನಲ್ಲಿ ತಾಂತ್ರಿಕ ಬದಲಾವಣೆ ಆಗುತ್ತಿದೆ ಎಂದರು.
ಎಐ ಯಂತ್ರಗಳಿಗೆ ಬುದ್ಧಿಯ ಬಲ ತುಂಬುತ್ತಿದೆ. ಆದರೆ ಅದಕ್ಕಿಂತ ಹೆಚ್ಚಾಗಿ ಮಾನವನ ಸಾಮರ್ಥ್ಯಗಳನ್ನು ಹಲವು ಪಟ್ಟು ಹೆಚ್ಚಿಸುತ್ತಿದೆ. ಅದರಲ್ಲಿ ಒಂದೇ ಒಂದು ವ್ಯತ್ಯಾಸವೆಂದರೆ ಎಐನ ವೇಗ ಈಗ ಬಹಳ ಹೆಚ್ಚಾಗಿದೆ. ಹಿಂದೆ ಯಂತ್ರಗಳಿಂದ ಕಲಿಕೆ ಎನ್ನುವುದು ಸಾಮಾನ್ಯವಾಗಿತ್ತು. ಆದರೆ ಈಗ ಯಂತ್ರಗಳಿಗೇ ಕಲಿಸುವ ಕಾಲಕ್ಕೆ ಬಂದಿದ್ದೇವೆ. ಎಐ ಎಂದಿಗಿಂತಲೂ ವೇಗವಾಗಿ, ಆಳವಾಗಿ ಬದಲಾಗುತ್ತಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!