ಉದಯವಾಹಿನಿ, ಜಲ್ನಾ(ಮಹಾರಾಷ್ಟ್ರ): ಇತ್ತೀಚೆಗೆ ಅಪಘಾತದಲ್ಲಿ ಮೆದುಳು ನಿಷ್ಕ್ರಿಯದಿಂದ ಮೃತಪಟ್ಟಿದ್ದ ಕೇರಳದ ಹತ್ತು ತಿಂಗಳ ಹೆಣ್ಣು ಮಗುವಿನ ಅಂಗಾಂಗ ದಾನ ಮಾಡಲಾಗಿತ್ತು. ಈ ನಿರ್ಧಾರಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು. ಜತೆಗೆ ಜನತೆ ಕಂಬನಿ ಸಹ ಮಿಡಿದಿದ್ದರು. ಇದೀಗ ಅದಕ್ಕೂ ಮೀರಿದ ಕರುಳು ಹಿಂಡುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.ಸಾಮಾನ್ಯವಾಗಿ ವ್ಯಕ್ತಿಯ ಮರಣದ ನಂತರ ದೇಹವನ್ನು ದಹನ ಮಾಡಲಾಗುತ್ತದೆ. ಆದರೆ, ಇಲ್ಲಿಯ ಜಲ್ನಾದ ವೈದ್ಯ ದಂಪತಿ ತಮಗೆ ಜನಿಸಿದ 5 ದಿನದ ಅವಧಿಪೂರ್ವ ಶಿಶುವಿನ ದೇಹವನ್ನು ವೈದ್ಯಕೀಯ ಕಾಲೇಜಿಗೆ ಅಧ್ಯಯನಕ್ಕೆಂದು ದಾನ ಮಾಡಿದ್ದಾರೆ.ಮೃತ ಮಗುವಿಗೆ ಕೊನೆಯ ಮುತ್ತಿಟ್ಟ ತಾಯಿ: ಜಲ್ನಾದ ಸಂಜೀವನಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ತಾಯಿ ತನ್ನ ಶಿಶುವಿನ ದೇಹವನ್ನು ದಾನ ಮಾಡುವ ಮೊದಲು ಕೊನೆಯ ಬಾರಿಗೆ ಹಣೆಗೆ ಮುತ್ತಿಕ್ಕಿದರು. ಈ ದೃಶ್ಯ ಅಲ್ಲಿ ನೆರೆದಿದ್ದ ಎಲ್ಲರ ಕಣ್ಣನ್ನು ಒದ್ದೆ ಮಾಡಿತು. ಈ ಬಗ್ಗೆ ಮಕ್ಕಳ ತಜ್ಞ ಡಾ. ಕೈಲಾಶ್ ರಾಜ್‌ಗುರು ಪ್ರತಿಕ್ರಿಯಿಸಿ, “ವೈದ್ಯ ದಂಪತಿಗಳ ನಿರ್ಧಾರ ವೈದ್ಯಕೀಯ ಶಿಕ್ಷಣಕ್ಕೆ ಹೆಚ್ಚಿನ ಸಹಾಯ ಮಾಡುತ್ತದೆ ಮತ್ತು ದೇಹ ದಾನದ ಬಗ್ಗೆ ಸಮಾಜದಲ್ಲಿ ಸಾರ್ವಜನಿಕ ಜಾಗೃತಿಯನ್ನು ಹೆಚ್ಚಿಸುತ್ತದೆ” ಎಂದು ಶ್ಲಾಘಿಸಿದರು.
ಮಗುವಿಗೆ ಆಗಿದ್ದಾದರೂ ಏನು?: ಫೆಬ್ರವರಿ 10, 2026 ರಂದು ಡಾ. ಸೋನಾಲಿ ದಹಿಭಾಟೆ ಮತ್ತು ಡಾ. ಉದಯ್ ದಹಿಭಾಟೆ ಅವರಿಗೆ ಅವಧಿಪೂರ್ವ ಶಿಶು ಜನಿಸಿತು. ಆದರೆ, ಮಗುವಿನ ಸ್ಥಿತಿ ತುಂಬಾ ಹದಗೆಟ್ಟಿತ್ತು. ಇದರಿಂದಾಗಿ ಮಗುವನ್ನು ನಗರದ ಸಂಜೀವನಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ NICU ವಿಭಾಗಕ್ಕೆ ದಾಖಲಿಸಲಾಯಿತು.
ವೈದ್ಯರ ಅತ್ಯುತ್ತಮ ಪ್ರಯತ್ನದ ಹೊರತಾಗಿಯೂ ಅವರು ಮಗುವನ್ನು ಉಳಿಸುವಲ್ಲಿ ವಿಫಲರಾದರು. ಕೊನೆ ಕ್ಷಣದಲ್ಲಿ ಮಗುವಿನ ತಂದೆ ಡಾ. ಉದಯ್ ದಹಿಭಾಟೆ ಸಮಾಜಕ್ಕೆ ಒಂದು ಮಾದರಿಯಾಗಿರಲು ಮತ್ತು ಮೃತ ನವಜಾತ ಶಿಶುವಿನ ದೇಹವನ್ನು ದಾನ ಮಾಡಲು ನಿರ್ಧರಿಸಿದರು. ನಿರ್ಧಾರದಂತೆ ಮಗುವಿನ ದೇಹವನ್ನು ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಗಾಗಿ ಜಲ್ನಾ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಹಸ್ತಾಂತರಿಸಲಾಯಿತು.ಡಾ. ಬಲಿರಾಮ್ ಬಾಗಲ್, ಡಾ. ಕೈಲಾಶ್ ರಾಜ್‌ಗುರು, ಡಾ. ಶಿವದಾಸ್ ಮಿರ್ಕಾಡ್, ಡಾ. ಸಹಿದಾ ಅಫ್ರೋಜ್, ಡಾ. ಪ್ರತಿಮಾ ಕುಲಕರ್ಣಿ ಮತ್ತು ಜಲ್ನಾ ಸರ್ಕಾರಿ ವೈದ್ಯಕೀಯ ಕಾಲೇಜಿನ ಮಾರ್ಗದರ್ಶನದಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.”ಈ ಶ್ಲಾಘನೀಯ ಕ್ರಮವು ವೈದ್ಯಕೀಯ ಶಿಕ್ಷಣಕ್ಕೆ ಹೆಚ್ಚು ಸಹಾಯ ಮಾಡುತ್ತದೆ ಮತ್ತು ಅಂಗಾಂಗ ದಾನದ ಬಗ್ಗೆ ಸಮಾಜದಲ್ಲಿ ಜಾಗೃತಿಯನ್ನು ಹೆಚ್ಚಿಸುತ್ತದೆ. ಸಮಾಜಕ್ಕೆ ಒಳ್ಳೆಯ ನಿರ್ಧಾರ. ದೇಹ ದಾನ ಮಾಡಿದ ಮಗುವಿನ ಪೋಷಕರನ್ನು, ವೈದ್ಯ ದಂಪತಿಗಳನ್ನು ನಾನು ಅಭಿನಂದಿಸುತ್ತೇನೆ. ಏಕೆಂದರೆ ಅಂತಹ ದುಃಖದ ಪರಿಸ್ಥಿತಿಯಲ್ಲಿಯೂ ಸಹ ಉತ್ತಮ ನಿರ್ಧಾರವನ್ನು ತೆಗೆದುಕೊಂಡರು. ಅವರ ನಿರ್ಧಾರವು ಸಮಾಜದಲ್ಲಿ ಜಾಗೃತಿ ಮೂಡಿಸಲು ಸಹಾಯ ಮಾಡುತ್ತದೆ. ಮಗುವಿನ ದೇಹವನ್ನು ದಾನ ಮಾಡುವುದು ಜಲ್ನಾದ ಸರ್ಕಾರಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಉಪಯುಕ್ತವಾಗಿರುತ್ತದೆ” ಎಂದು ಮಕ್ಕಳ ತಜ್ಞ ಡಾ. ಕೈಲಾಶ್ ರಾಜಗುರು ಹೇಳಿದ್ದಾರೆ
