ಉದಯವಾಹಿನಿ, ಮುಜಾಫರ್​​ಪುರ(ಬಿಹಾರ): ಇಲ್ಲಿನ ಮೋತಿಪುರ ಬ್ಲಾಕ್‌ನ ಟಿಖಾ ಗ್ರಾಮದ ಮಹಿಳೆಯೊಬ್ಬರು ಪ್ರಗತಿಪರ ರೈತ ಮಹಿಳೆ ಎಂಬ ಖ್ಯಾತಿ ಪಡೆದಿದ್ದಾರೆ. ಮಹಿಳೆ ಮನೆಗೆ ಮಾತ್ರ ಸೀಮಿತವಲ್ಲ ಎಂಬುದನ್ನು ಅವರು ತಮ್ಮ ಸಾಧನೆಯ ಮೂಲಕ ತೋರಿಸಿಕೊಟ್ಟಿದ್ದಾರೆ.
ಈಗ, ಅವರು ತಮ್ಮೂರಿಗೆ ಮಾತ್ರವಲ್ಲದೇ, ಸುತ್ತಲಿನ ಊರುಗಳಲ್ಲಿ ಮನೆ ಮಾತಾಗುವ ಮೂಲಕ ಕೃಷಿ ಉದ್ಯಮಿಯಾಗಿ ಬೆಳೆದಿದ್ದಾರೆ. ‘ಮಶ್ರೂಮ್​ ರಾಣಿ’ ಎಂದೇ ಕರೆಸಿಕೊಳ್ಳುವ ಇವರು ಇತರ 400 ರೈತರಿಗೆ ತಮ್ಮ ವ್ಯವಸಾಯದ ಪಟ್ಟುಗಳನ್ನು ಹೇಳಿಕೊಟ್ಟಿದ್ದಾರೆ.
49 ವರ್ಷದ ಶೋಭಾ ದೇವಿ ಮಶ್ರೂಮ್​ ಬೆಳೆಯಲ್ಲಿ ಯಶಸ್ಸು ಸಾಧಿಸಿದವರು. 2020ರಲ್ಲಿ ಗೃಹಿಣಿಯಿಂದ ರೈತರಾಗಿ ಬೆಳೆದರು. ಮೊದಲು ಬಿಹಾರ ಸರ್ಕಾರದ ಜೀವಿಕಾ ಯೋಜನೆಯಡಿ ಸ್ವ ಸಹಾಯ ಗುಂಪಿಗೆ ಸೇರಿದರು. ಕ್ರಮೇಣ ಗುಂಪಿನ ನಾಯಕಿಯಾದರು. ಜೀವಿಕಾ ಮತ್ತು ಸಿಂಜೆಂಟಾ ಫೌಂಡೇಶನ್ ಇಂಡಿಯಾ ಜಂಟಿಯಾಗಿ ಆರಂಭಿಸಿದ ಕೃಷಿ ಉದ್ಯಮಿ ಕಾರ್ಯಕ್ರಮಕ್ಕೆ ಅವರನ್ನು ಸೇರಿಸಿಕೊಳ್ಳಲಾಯಿತು. ಇದು ಗ್ರಾಮೀಣ ಮಹಿಳೆಯರಿಗೆ ಕೃಷಿ ಆಧಾರಿತ ಉದ್ಯಮಗಳನ್ನು ಆರಂಭಿಸಲು ತಾಂತ್ರಿಕ ಮತ್ತು ನಿರ್ವಹಣಾ ಕೌಶಲ್ಯಗಳನ್ನು ಹೇಳಿಕೊಡುವ 21 ದಿನಗಳ ತರಬೇತಿಯಾಗಿತ್ತು.
ಈ ತರಬೇತಿಯ ವೇಳೆ ಶೋಭಾ ಅವರು ನರ್ಸರಿ ನಿರ್ವಹಣೆ, ಅಣಬೆ ಕೃಷಿ, ವರ್ಮಿಕಾಂಪೋಸ್ಟಿಂಗ್, ಮಲ್ಚಿಂಗ್ ತಂತ್ರಗಳು, ಧಾನ್ಯ ವ್ಯಾಪಾರ ಮತ್ತು ರೈತರ ಸಲಹಾ ವ್ಯವಸ್ಥೆಗಳನ್ನು ಕಲಿತರು. ಈ ತರಬೇತಿಯು ಅವರ ಜೀವನವನ್ನೇ ಬದಲಿಸಿತು. ಎರೆಹುಳು ಗೊಬ್ಬರದಿಂದ ಅಣಬೆ ಕೃಷಿ ಉದ್ಯಮ: ಶೋಭಾ ತಾವು ಅಣಬೆ ಕೃಷಿ ಉದ್ಯಮಿಯಾಗಿ ಬೆಳೆದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, 2021ರಲ್ಲಿ ವರ್ಮಿಕಾಂಪೋಸ್ಟಿಂಗ್‌ ಪ್ರಾರಂಭಿಸಿದೆ. ಮನೆಯಲ್ಲಿ ದನದ ಸಗಣಿ ಹೇರಳವಾಗಿ ಲಭ್ಯ ಇರುವುದರಿಂದ 3 ಸಾವಿರ ರೂಪಾಯಿ ಖರ್ಚು ಮಾಡಿ ಎರೆಹುಳು ಗೊಬ್ಬರ ತಯಾರಿಕೆಗೆ ವ್ಯವಸ್ಥೆ ಮಾಡಿದೆ. ಎರೆಹುಳು ಗೊಬ್ಬರ ಮಾರಾಟ ಆದಾಯ ತಂದಿತು. ಇದು ನನ್ನ ಮನೋಸ್ಥೈರ್ಯ ಹೆಚ್ಚಿಸಿತು. ಇದನ್ನು ಹೆಚ್ಚಿನ ಮಟ್ಟದಲ್ಲಿ ವಿಸ್ತರಿಸಲು ಇಂಬು ನೀಡಿತು ಎಂದರು.

ಈ ಉಪಕ್ರಮದ ಯಶಸ್ಸಿನಿಂದ ಉತ್ತೇಜಿತಗೊಂಡು ಹೆಚ್ಚಿನ ಸಾಲ ತೆಗೆದುಕೊಂಡು ಕೃಷಿ ಉದ್ಯಮಿ ಸೇವಾ ಕೇಂದ್ರವನ್ನು ಸ್ಥಾಪಿಸಿದೆ. ಇದರಲ್ಲಿ ಬಂದ ಲಾಭವನ್ನು ಮರುಹೂಡಿಕೆ ಮಾಡುವುದು ಮತ್ತು ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿಸುವುದನ್ನು ಮಾಡಿದೆ. ಕ್ರಮೇಣ ತಮ್ಮ ಕಾರ್ಯಾಚರಣೆಗಳನ್ನು ಮತ್ತಷ್ಟು ವಿಸ್ತರಿಸಿದೆ ಎಂದು ಅವರು ಮಾಹಿತಿ ನೀಡಿದರು.

400 ಮಂದಿಗೆ ತರಬೇತಿ: ಎರೆಹುಳು ಮಾರಾಟವಲ್ಲದೇ, ಅಣಬೆ ಕೃಷಿ ಉದ್ಯಮವನ್ನು ಆರಂಭಿಸಿದೆ. ಅಣಬೆ ಉತ್ಪಾದನೆ ಮತ್ತು ಸಾವಯವ ಗೊಬ್ಬರ ತಯಾರಿ ಎರಡನ್ನೂ ನಿಭಾಯಿಸುತ್ತಿದ್ದೇನೆ. ಮೋತಿಪುರ ಮತ್ತು ಸುತ್ತಮುತ್ತಲಿನ ಗ್ರಾಮಗಳ ಸುಮಾರು 400 ರೈತರಿಗೆ ಈ ಬಗ್ಗೆ ತರಬೇತಿ ನೀಡಿ, ಅವರನ್ನು ನಮ್ಮ ಜಾಲಕ್ಕೆ ಸೇರಿಸಿಕೊಂಡಿದ್ದೇನೆ. ಅವರಿಂದ ಅಣಬೆಯನ್ನು ಖರೀದಿಸಿ ಸ್ಥಳೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತೇವೆ ಎಂದು ತಿಳಿಸಿದರು.

ರೈತರು ಸಾವಯದ ಕೃಷಿ ಬಗ್ಗೆ ಜ್ಞಾನವಿಲ್ಲದೆ, ಅತಿಯಾದ ರಾಸಾಯನಿಕಮಿಶ್ರಿತ ರಸಗೊಬ್ಬರಗಳನ್ನು ಬಳಸುತ್ತಿದ್ದರು. ಇದು ಬೆಳೆ ನಷ್ಟಕ್ಕೆ ಕಾರಣವಾಯಿತು. ತಮ್ಮ ಸಂಪರ್ಕಕ್ಕೆ ಬಂದ ಅನೇಕ ರೈತರಿಗೆ ತರಬೇತಿ ನೀಡಿದೆವು. ಮಣ್ಣಿನ ಆರೋಗ್ಯ, ಕೀಟ ನಿರ್ವಹಣೆ ಮತ್ತು ಸಮತೋಲಿತ ಒಳಹರಿವಿನ ಬಳಕೆಯ ಬಗ್ಗೆ ಮಾರ್ಗದರ್ಶನ ನೀಡಿದೆವು. ಕೃಷಿಯಲ್ಲಿ ಬೆಳೆಗಳನ್ನು ಉಳಿಸಿಕೊಳ್ಳುವುದರ ಜೊತೆಗೆ, ಮಣ್ಣಿನ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡಿದೆವು ಎಂದು ಶೋಭಾ ಅವರು ತಿಳಿಸುತ್ತಾರೆ.

ಈ ವ್ಯವಹಾರದಿಂದ ಈಗ ಶೋಭಾ ಅವರಿಗೆ ಸುಮಾರು 15 ಸಾವಿರ ರೂಪಾಯಿ ನಿವ್ವಳ ಮಾಸಿಕ ಆದಾಯ ಬರುತ್ತದೆ. ಅದನ್ನು ಅವರು ಮನೆ ನಿರ್ವಹಿಸಲು ಬಳಸುತ್ತಾರೆ. ಅಣಬೆಗಳ ಹೊರತಾಗಿ, ಅವರು ಎರೆಹುಳು ಗೊಬ್ಬರ ಉತ್ಪಾದನೆ. ಸಾವಯವ ಕೃಷಿ ಪದ್ಧತಿಗಳನ್ನು ಬಳಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!