ಉದಯವಾಹಿನಿ, ಪಾಟ್ನಾ (ಬಿಹಾರ): 3 ಲಕ್ಷ ರೂ ಬಹುಮಾನ ಘೋಷಿತ ಮಾವೋವಾದಿ ಸುರೇಶ್ ಕೊಡಾ ಅಲಿಯಾಸ್ ಮುಸ್ತಕಿಮ್ ಶರಣಾಗುವ ಮೂಲಕ ಬಿಹಾರ ರಾಜ್ಯ ನಕ್ಸಲ್ ಮುಕ್ತವಾಗಿದೆ ಎಂದು ಬಿಹಾರ ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ಪ್ರಕಟಿಸಿರುವ ಪೊಲೀಸ್ ಮುಖ್ಯ ಕಚೇರಿ, ಯುಎಪಿಎ ಸೇರಿದಂತೆ 60 ಪ್ರಕರಣಗಳನ್ನು ಹೊಂದಿದ್ದ ಕೊಡಾ, ಮುಂಗೇರ್ ಜಿಲ್ಲೆಯ ಸ್ಪೆಷಲ್ ಟಾಸ್ಕ್ ಫೋರ್ಸ್ ಮುಂದೆ ಶರಣಾಗತನಾಗಿದ್ದಾನೆ. ತನ್ನ ಬಳಿ ಇದ್ದ ಮೂರು ರೈಫಲ್, ನೂರಾರು ಮದ್ದುಗುಂಡು ಮತ್ತು ಮ್ಯಾಗಜೀನ್ ಹಾಗೂ ಸ್ವಲ್ಪ ಹಣವನ್ನು ಆತ ಪೊಲೀಸರಿಗೆ ಒಪ್ಪಿಸಿದ್ದಾನೆ ಎಂದು ತಿಳಿಸಿದ್ದಾರೆ.
ಶರಣಾಗಿರುವ ಕೊಡಾಗೆ ಆತ್ಮಸಮರ್ಪಣೆ ಶಾ ಪುನರ್ವಾಸ ಯೋಜನೆ ಅಡಿ ಎಲ್ಲಾ ಪ್ರಯೋಜನಗಳನ್ನು ನೀಡಲಾಗುವುದು. ಮಾವೋಗಳ ಶರಣಾಗತಿ ಮತ್ತು ಪುನರ್ವಸತಿಗೆ ಈ ಯೋಜನೆ ರೂಪಿಸಲಾಗಿದೆ. ಈ ಯೋಜನೆ ಅಡಿ ಈತನ ತಲೆಗೆ ಘೋಷಿಸಿದ್ದ ಬಹುಮಾನದಷ್ಟೇ ಮೊತ್ತವನ್ನು ಪುನರ್ವಸತಿ ಯೋಜನೆ ಭಾಗವಾಗಿ 3 ಲಕ್ಷ ರೂ ಹಣ ಪಡೆಯುತ್ತಾನೆ. ಇದರ ಜೊತೆಗೆ 5 ಲಕ್ಷ ಪ್ರೋತ್ಸಾಹಧನ ಮತ್ತು 36 ತಿಂಗಳ ಕಾಲ 10 ಸಾವಿರ ಸ್ಟೈಫಂಡ್ ಹಣ ಪಡೆಯಲಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಕೊಡಾ ಶರಣಾಗತಿಯೊಂದಿಗೆ ಬಿಹಾರದಲ್ಲಿನ ನಕ್ಸಲ್ ತಾಣಗಳು ಸಂಪೂರ್ಣವಾಗಿ ನಾಶವಾಗಿವೆ ಎಂದು ಪೊಲೀಸರು ತಿಳಿಸಿದ್ದು, ರಾಜ್ಯವು ನಕ್ಸಲ್ ಮುಕ್ತವಾಗಿದೆ ಎಂದು ಘೋಷಿಸಿದ್ದಾರೆ.
2012ರಲ್ಲಿ ಬಿಹಾರದ 23 ಜಿಲ್ಲೆಗಳಲ್ಲಿ ನಕ್ಸಲ್ ಚಟುವಟಿಕೆ ವಿಪರೀತವಾಗಿತ್ತು. 1970ರ ಸುಮಾರಿನಲ್ಲಿ ಬಿಹಾರದಲ್ಲಿ ಮಾವೋವಾದಿಗಳ ಪ್ರಭಾವ ಗಮನಾರ್ಹವಾಗಿ ಬೆಳವಣಿಗೆ ಕಾಣಲಾರಂಭಿಸಿತು. ಪ್ರಸ್ತುತ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸುಸ್ಥಿರ ಪ್ರಯತ್ನದಿಂದಾಗಿ 2025 ರಲ್ಲಿ ಯಾವುದೇ ಒಂದು ನಕ್ಸಲ್ ಘಟನೆಗಳು ವರದಿಯಾಗಿರಲಿಲ್ಲ. 220 ನಕ್ಸಲರನ್ನು ಬಂಧಿಸಲಾಗಿತ್ತು. ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಇದರ ಪರಿಣಾಮ ರಾಜ್ಯವು ನಕ್ಸಲ್ ಮುಕ್ತವಾಗಿದೆ ಎಂದು ತಿಳಿದು ಬಂದಿದೆ.
