ಉದಯವಾಹಿನಿ, ನಾಗರಿಕರ ದಂಗೆಯಲ್ಲಿ ಬೇಯುತ್ತಿರುವ ಇರಾನ್​ ಮೇಲೆ ಅಮೆರಿಕ ದಾಳಿ ಮಾಡುವ ಸಂಭವ ಹೆೆಚ್ಚುತ್ತಿದೆ. ಮಧ್ಯಪ್ರಾಚ್ಯದತ್ತ ಅಮೆರಿಕದ ನೌಕಾಪಡೆಗಳು ಸಾಗುತ್ತಿವೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ. ಇಸ್ರೇಲ್ ಜೊತೆಗೂಡಿ ಜಂಟಿ ದಾಳಿ ನಡೆಯಬಹುದು ಎಂದು ಹೇಳಲಾಗಿದೆ.
ಟ್ರಂಪ್‌ ಗ್ರೀನ್ ಸಿಗ್ನಲ್ ಒಂದೇ ಬಾಕಿ: ಅಮೆರಿಕದ ಸೇನೆ ಈ ವಾರಾಂತ್ಯದಲ್ಲಿ ಇರಾನ್ ಮೇಲೆ ದಾಳಿ ಮಾಡಲು ಸಿದ್ಧವಾಗಿದೆ. ಆದರೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಕುರಿತು ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಸೇನೆಯು ಅಧ್ಯಕ್ಷರ ಆದೇಶಕ್ಕಾಗಿ ಕಾಯುತ್ತಿವೆ ಎಂದು ಮಾಧ್ಯಮಗಳು ಉಲ್ಲೇಖಿಸಿವೆ.ಅಮೆರಿಕ ಮತ್ತು ಇರಾನ್​ ಮಧ್ಯೆ ಪರಮಾಣು ಶಸ್ತ್ರಾಸ್ತ್ರ ಹೊಂದುವ ಕುರಿತು ಬ್ರಿಟನ್​ನಲ್ಲಿ ಮಾತುಕತೆ ನಡೆಯುತ್ತಿರುವ ಮಧ್ಯೆ ಅಮೆರಿಕವು ಇರಾನ್​ ಮೇಲೆ ದಾಳಿ ಮಾಡಲು ಸಜ್ಜಾಗಿದೆ ಎಂಬ ವರದಿಗಳು ಆತಂಕದ ಜೊತೆಗೆ ಕುತೂಹಲ ಮೂಡಿಸಿವೆ.
ಅಮೆರಿಕಕ್ಕೆ ಇರಾನ್​ ಎಚ್ಚರಿಕೆ: ಇತ್ತ, ಇರಾನ್​ ಅಮೆರಿಕದ ದಾಳಿ ಬೆದರಿಕೆಗೆ ಬಗ್ಗಲ್ಲ ಎಂದಿದೆ. ದೇಶದ ಸರ್ವೋಚ್ಛ ನಾಯಕ ಆಯತೊಲ್ಲಾ ಖಮೇನಿ ಅಮೆರಿಕವು ನಮ್ಮ ಮೇಲೆ ದಾಳಿ ಮಾಡಿದರೆ, ನಾವು ಪ್ರತಿ ದಾಳಿ ನಡೆಸುತ್ತೇವೆ. ಮಧ್ಯಪ್ರಾಚ್ಯದಲ್ಲಿನ ಅಮೆರಿಕದ ತಾಣಗಳು ಛಿದ್ರವಾಗಲಿವೆ ಎಂದು ಎಚ್ಚರಿಕೆ ನೀಡಿದ್ದಾರೆ.ರಷ್ಯಾ ಜೊತೆ ಇರಾನ್​ ನೌಕಾಭ್ಯಾಸ: ಅಮೆರಿಕದ ದಾಳಿ ಬೆದರಿಕೆ ಹಿನ್ನೆಲೆಯಲ್ಲಿ ತನ್ನ ಸಾರ್ವಭೌಮತೆಯನ್ನು ಕಾಪಾಡಿಕೊಳ್ಳಲು ಇರಾನ್​ ನೌಕಾಪಡೆಯು ರಷ್ಯಾದ ಜೊತೆಗೂಡಿ ಒಮಾನ್​ ಸಮುದ್ರದಲ್ಲಿ ನೌಕಾ ಸಮರಭ್ಯಾಸ ನಡೆಸುತ್ತಿದೆ. ಇರಾನ್ ನೌಕಾಪಡೆಯ ವಕ್ತಾರ ರಿಯರ್ ಅಡ್ಮಿರಲ್ ಹಸನ್ ಮಘ್ಸೌದ್ಲೂ ಅವರು ತಿಳಿಸಿದಂತೆ, ಇರಾನ್ ಮತ್ತು ರಷ್ಯಾದ ಜಂಟಿ ನೌಕಾ ಪಡೆಗಳು ಫೆಬ್ರವರಿ 19 ರಂದು ಓಮನ್ ಕೊಲ್ಲಿ ಮತ್ತು ಉತ್ತರ ಹಿಂದೂ ಮಹಾಸಾಗರದಲ್ಲಿ ಅಭ್ಯಾಸ ನಡೆಸಲಿದೆ ಎಂದಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಜೆಟ್​ಗಳು: ಇರಾನ್​ ಪರಮಾಣು ಅಸ್ತ್ರ ಹೊಂದುವುದನ್ನು ಕಟುವಾಗಿ ವಿರೋಧಿಸುತ್ತಿರುವ ಅಮೆರಿಕವು ಮಧ್ಯಪ್ರಾಚ್ಯಕ್ಕೆ ತನ್ನ ಬಲಿಷ್ಠ F-22 ಮತ್ತು F-35 ಫೈಟರ್ ಜೆಟ್‌ಗಳನ್ನು ಕಳುಹಿಸುತ್ತಿದೆ. ವಿಶ್ವದ ಅತ್ಯಂತ ಆಧುನಿಕ ವಿಮಾನವಾಹಕ ನೌಕೆಯಾದ ಯುಎಸ್​ಎಸ್​ ಜೆರಾಲ್ಡ್ ಆರ್​​.ಫೋರ್ಡ್​ ಕೂಡ ಈ ಪ್ರದೇಶಕ್ಕೆ ಬಂದಿದೆ.
2024ರ ಜೂನ್‌ನಲ್ಲಿ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ 12 ದಿನ ಇರಾನ್ ಮೇಲೆ ದಾಳಿ ನಡೆಸಿದ್ದವು. ಅದರ ಸೇನೆ ಮತ್ತು ಪರಮಾಣು ತಾಣಗಳ ಮೇಲೆ ದಾಳಿ ಮಾಡಿ ಭಾರೀ ಹಾನಿ ಮಾಡಿದ್ದವು. ಈ ಬಾರಿ ಅದಕ್ಕಿಂತ ಹೆಚ್ಚಿನ ಭೀಕರ ದಾಳಿ ನಡೆಸಲಾಗುವುದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಈ ಹಿಂದೆ ಎಚ್ಚರಿಕೆ ನೀಡಿದ್ದರು.ಇರಾನ್​ ಮತ್ತು ಅಮೆರಿಕದ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಕುರಿತು ಹೇಳಿಕೆ ನೀಡಿರುವ ಶ್ವೇತಭವನ, ಈ ವಾರಾಂತ್ಯದಲ್ಲಿ ಅಮೆರಿಕ ಇರಾನ್ ಮೇಲೆ ದಾಳಿ ನಡೆಸುವ ಬಗ್ಗೆ ಚಿಂತನೆ ನಡೆಸುತ್ತಿದೆ. ಆದರೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎಂದಿದೆ.
ಸ್ವಿಟ್ಜರ್‌ಲ್ಯಾಂಡ್‌ನ ಜಿನೀವಾದಲ್ಲಿ ಪರಮಾಣು ಒಪ್ಪಂದದ ಕುರಿತು ಅಮೆರಿಕ ಮತ್ತು ಇರಾನ್ ನಿಯೋಗಗಳು ಉನ್ನತ ಮಟ್ಟದ ಸಭೆ ನಡೆಸುತ್ತಿವೆ. ಇರಾನ್ ಅಧಿಕಾರಿಗಳೊಂದಿಗೆ ಮಾತುಕತೆಯಲ್ಲಿ ಪ್ರಗತಿ ಸಾಧಿಸಲಾಗಿದೆ. ಆದರೆ, ಕೆಲವು ವಿಷಯಗಳಲ್ಲಿ ಎರಡೂ ರಾಷ್ಟ್ರಗಳು ಒಮ್ಮತಕ್ಕೆ ಬಂದಿಲ್ಲ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!