
ಉದಯವಾಹಿನಿ, ಕುರುಕ್ಷೇತ್ರ: ಹರಿಯಾಣದ ಕೆಲವು ರೈತರು ರಾಸಾಯನಿಕ ಕೃಷಿಗೆ ಈಗಾಗಲೇ ಬೈ ಬೈ ಹೇಳಿದ್ದಾರೆ. ಸಾವಯವ ಮತ್ತು ನೈಸರ್ಗಿಕ ಕೃಷಿಯತ್ತ ಮುಖ ಮಾಡುತ್ತಿದ್ದಾರೆ. ಅನೇಕರು ಸಾವಯವ ಕೃಷಿಯಲ್ಲಿಯೂ ಹೊಸತನವನ್ನು ಕಂಡುಕೊಳ್ಳುತ್ತಿದ್ದಾರೆ.
ಕುರುಕ್ಷೇತ್ರದ ಅಮೀನ್ (ಅಭಿಮನ್ಯುಪುರ) ಗ್ರಾಮದ ನಿವಾಸಿಗಳಾದ ಇಬ್ಬರು ರೈತ ಸಹೋದರರು ತಮ್ಮ ಸ್ವಂತ ಬಳಕೆಗಾಗಿ ಸಾವಯವ ಕೈ ತೋಟವನ್ನು ಮಾಡಿಕೊಂಡಿದ್ದಾರೆ. ಇಬ್ಬರೂ ತಮ್ಮ ಅಡುಗೆ ತೋಟದಲ್ಲಿ ಸಾವಯವ ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ವಿಶೇಷವೆಂದರೆ ಈ ಇಬ್ಬರು ಸಹೋದರರು ತಮ್ಮ ಕೈ ತೋಟದಲ್ಲಿ 8 ಕಿಲೋಗ್ರಾಂಗಳಷ್ಟು ದೊಡ್ಡ ಟರ್ನಿಪ್ ಬೆಳೆದಿದ್ದಾರೆ. ಇದು ಜನರನ್ನು ಬೆರಗುಗೊಳಿಸಿದೆ.
8 ಕೆಜಿ ಟರ್ನಿಪ್ ನೋಡಿ ಅಚ್ಚರಿಗೊಳಗಾದ ಜನ: ನಮಗೆ ಕೃಷಿಯ ಬಗ್ಗೆ ಅಪಾರ ಆಸಕ್ತಿ ಇದೆ. ಕಳೆದ 45 ವರ್ಷಗಳಿಂದ ನಾವಿಬ್ಬರೂ ಸಹೋದರರು ಒಟ್ಟಿಗೆ ಕೃಷಿ ಮಾಡುತ್ತಿದ್ದೇವೆ. ನಾವು ಸುಮಾರು 30 ಎಕರೆ ಭೂಮಿಯನ್ನು ಹೊಂದಿದ್ದೇವೆ. ಯಾವುದೇ ರೀತಿಯ ರಾಸಾಯನಿಕಗಳನ್ನು ಬಳಸದ ಸಾವಯವ ಕೈ ತೋಟಕ್ಕಾಗಿ ಹೊಲದಲ್ಲಿ ಸ್ವಲ್ಪ ಜಾಗವನ್ನು ಕಾಯ್ದಿರಿಸಿದ್ದೇವೆ. ನಮ್ಮ ಕೈ ತೋಟದಲ್ಲಿ 8 ಕೆಜಿ ತೂಗುವ ಟರ್ನಿಪ್ ಬೆಳೆದಿದ್ದೇವೆ. ಗಡ್ಡೆ ಹಾಗೂ ಅದರ ಎಲೆಗಳೊಂದಿಗೆ ಸುಮಾರು 15 ಕೆಜಿ ತೂಗುತ್ತದೆ ಎಂದು ಕುರುಕ್ಷೇತ್ರದ ಅಮೀನ್ ಗ್ರಾಮದ ರೈತ ಅಶ್ವನಿ ಕುಮಾರ್ ಶರ್ಮಾ ಈ ಟಿವಿ ಭಾರತಕ್ಕೆ ತಿಳಿಸಿದ್ದಾರೆ. ಸಾವಯವ ಟರ್ನಿಪ್; ನಮ್ಮ ಹೊಲದಲ್ಲಿ ಇಷ್ಟು ದೊಡ್ಡ ಟರ್ನಿಪ್ ಬೆಳೆದಿರುವುದು ಸಾವಯವ ಕೃಷಿಯ ಪವಾಡವೇ ಸರಿ. ನಾವು ಈ ಟರ್ನಿಪ್ ಚಳಿಗಾಲದಲ್ಲಿ ನಮ್ಮ ಹೊಲದಲ್ಲಿ ನೆಟ್ಟಿದ್ದೆವು. ನೀರಿನ ಬಳಕೆ ಕೂಡ ತುಂಬಾ ಕಡಿಮೆ. ಆದರೆ ಇಷ್ಟೊಂದು ದೊಡ್ಡ ಟರ್ನಿಪ್ ಬೆಳೆಯುತ್ತದೆ ಎಂದು ಅಂದುಕೊಂಡಿರಲಿಲ್ಲ. ನಾವು ಅದನ್ನು ಕಿತ್ತಾಗ ಅಚ್ಚರಿಯಾಗಿದ್ದಂತೂ ಸುಳ್ಳಲ್ಲ. ಎಲ್ಲರೂ ಅದರ ಗಾತ್ರವನ್ನು ನೋಡಿ ಆಶ್ಚರ್ಯಚಕಿತರಾದರು. ಮೂರರಿಂದ ನಾಲ್ಕು ಕಿಲೋಗ್ರಾಂಗಳಷ್ಟು ತೂಗುತ್ತದೆ ಎಂದು ನಾವು ಭಾವಿಸಿದ್ದೆವು. ಆದರೆ, ಅದನ್ನು ತೂಕಕ್ಕೆ ಹಾಕಿದಾಗ ಬರೋಬ್ಬರಿ 8 ಕೆಜಿ ತೂಗುತ್ತಿತ್ತು. ಈ ಟರ್ನಿಪ್ ನೋಡಲು ಜನರು ಮನೆಗೆ ಬರುತ್ತಿದ್ದಾರೆ. ಜನರು ಈ ಅದ್ಭುತ ಕೃಷಿಯನ್ನು ಹೊಗಳುತ್ತಿದ್ದಾರೆ. ನಾವು ಫೆಬ್ರವರಿ 9 ರಂದು ನಮ್ಮ ಹೊಲದಿಂದ ಈ ಟರ್ನಿಪ್ ಕಿತ್ತಿದ್ದೆವು. ಆ ಸಮಯದಲ್ಲಿ ಇದು ಎಲೆಗಳ ಸಮೇತ 15 ಕೆಜಿ ತೂಕ ಹೊಂದಿತ್ತು. ಎಲೆಗಳನ್ನು ಕತ್ತರಿಸಿದ ನಂತರ ಅದರ ತೂಕ 8 ಕೆಜಿ ಇತ್ತು. ಎಲ್ಲರೂ ಅದನ್ನು ನೋಡಿ ಆಶ್ಚರ್ಯಚಕಿತರಾದರು ಎಂದು ರಾಜೀವ್ ಶರ್ಮಾ ಹೇಳಿದ್ದಾರೆ.
