ಉದಯವಾಹಿನಿ, ಕೀವ್, : ರಶ್ಯದೊಂದಿಗೆ ಶಾಂತಿ ಮಾತುಕತೆಯಲ್ಲಿ ಕೆಲವು ರಿಯಾಯಿತಿಗಳನ್ನು ನೀಡಲು ಉಕ್ರೇನ್ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನಗತ್ಯ ಒತ್ತಡ ಹೇರುತ್ತಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಲೆನ್‌ಸ್ಕಿ ಬುಧವಾರ ಹೇಳಿದ್ದು, ಹೆಚ್ಚಿನ ಪ್ರದೇಶಗಳನ್ನು ಬಿಟ್ಟುಕೊಡಲು ಉಕ್ರೇನಿಯನ್ನರು ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಹೊಂದಾಣಿಕೆ ಮಾಡುವಂತೆ ಟ್ರಂಪ್ ಪದೇ ಪದೇ ಉಕ್ರೇನ್‌ಗೆ ಆಗ್ರಹಿಸುವುದು ಸರಿಯಲ್ಲ. ರಶ್ಯದ ಮೇಲೆಯೂ ಅವರು ಒತ್ತಡ ಹೇರಬೇಕು ಎಂದು ಝಲೆನ್‌ಸ್ಕಿ ಆಗ್ರಹಿಸಿರುವುದಾಗಿ `ಆಕ್ಸಿಯೊಸ್’ ವರದಿ ಮಾಡಿದೆ. ಒಪ್ಪಂದದತ್ತ ಉಕ್ರೇನ್ ತ್ವರಿತವಾಗಿ ಸಾಗಬೇಕು. ಯುದ್ಧ ನಿಲ್ಲಬೇಕಾದರೆ ಉಕ್ರೇನ್ ವೇಗವಾಗಿ ಮಾತುಕತೆ ನಡೆಸಬೇಕು ಎಂಬ ಟ್ರಂಪ್ ಹೇಳಿಕೆಗೆ ಝಲೆನ್‌ಸ್ಕಿ `ಇದು ಅವರ ತಂತ್ರಗಳು. ನಿರ್ಧಾರವಲ್ಲ ಎಂದು ಭಾವಿಸುತ್ತೇನೆ’ ಎಂದು ಪ್ರತಿಕ್ರಿಯಿಸಿದರು.
ರಶ್ಯಕ್ಕಿಂತ ಉಕ್ರೇನ್‌ನ ಮೇಲೆ ಒತ್ತಡ ಹೇರುವುದು ರಾಜಕೀಯವಾಗಿ ಅಮೆರಿಕಕ್ಕೆ ಸುಲಭವಾಗಿರಬಹುದು. ಆದರೆ ತಾನು ಒತ್ತಡಕ್ಕೆ ಬಾಗುವುದಿಲ್ಲ. ಪೂರ್ವ ಡೊನ್ವಾಸ್ ವಲಯದಲ್ಲಿ ಹೆಚ್ಚುವರಿ ಪ್ರದೇಶವನ್ನು ಉಕ್ರೇನ್ ಬಿಟ್ಟುಕೊಡಬೇಕೆಂಬ ಯಾವುದೇ ಪ್ರಸ್ತಾಪವನ್ನು ಸ್ಥಳೀಯರು ತಿರಸ್ಕರಿಸುತ್ತಾರೆ. ಭಾವನಾತ್ಮಕವಾಗಿ ಅಲ್ಲಿನ ಜನರು ಇದನ್ನು ಎಂದಿಗೂ ಕ್ಷಮಿಸುವುದಿಲ್ಲ. ಅವರು ಅಮೆರಿಕವನ್ನು ಕ್ಷಮಿಸುವುದಿಲ್ಲ. ರಶ್ಯ ಈಗಾಗಲೇ ಆಕ್ರಮಿಸಿಕೊಂಡಿರುವ ಪ್ರದೇಶವನ್ನು ಮೀರಿ ಇನ್ನಷ್ಟು ಭೂಮಿಯನ್ನು ಉಕ್ರೇನಿಯನ್ನರು ಏಕೆ ಒಪ್ಪಿಸಬೇಕು ಎಂದು ಅರ್ಥವಾಗುತ್ತಿಲ್ಲ. ಇದು ನಮ್ಮ ದೇಶದ ಭಾಗವಾಗಿದೆ. ಇವರು ನಮ್ಮ ಪ್ರಜೆಗಳು, ನಮ್ಮಧ್ವಜ, ನಮ್ಮ ಭೂಮಿ’ ಎಂದು ಝಲೆನ್‌ಸ್ಕಿ ಹೇಳಿದ್ದು ಪ್ರಸ್ತುತ ಮುಂಚೂಣಿಯಲ್ಲಿ ಯುದ್ಧವನ್ನು ಸ್ಥಗಿತಗೊಳಿಸುವ ಶಾಂತಿ ಒಪ್ಪಂದವು ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಅಂಗೀಕರಿಸಲ್ಪಟ್ಟರೆ ಸ್ವೀಕಾರಾರ್ಹವಾಗಿರುತ್ತದೆ ಎಂದಿದ್ದಾರೆ.
