ಉದಯವಾಹಿನಿ, ನಿಯಾಮೆ : ಒಂದೆ
ಡೆ ಆಫ್ರಿಕಾ ಖಂಡದ ಕೆಲವು ರಾಷ್ಟ್ರಗಳು ಸುಧಾರಣೆಯತ್ತ ಹೆಜ್ಜೆ ಹಾಕುತ್ತಿದ್ದರೆ ಮತ್ತೊಂದೆಡೆ ಕೆಲವೊಂದು ದೇಶಗಳು ಪ್ರಜಾಪ್ರಭುತ್ವ ಮೌಲ್ಯಗಳಿಗೆ ತಿಲಾಂಜಲಿ ಇಟ್ಟು, ನಿರಂಕುಶ ಅಧಿಕಾರದತ್ತ ತೆರಳುತ್ತಿದೆ. ಇದಕ್ಕೆ ಹೊಸ ಉದಾಹರಣೆ ಎಂಬಂತೆ ಇದೀಗ ನೈಗರ್‌ನಲ್ಲಿ ಪ್ರಜಾಪ್ರಭುತ್ವದಿಂದ ಆಯ್ಕೆ ಮಾಡಲಾಗಿದ್ದ ಸರ್ಕಾರವನ್ನು ಕಿತ್ತೊಗೆದು, ಸೇನಾಡಳಿತವು ದಂಗೆಯನ್ನು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ನೈಗರ್‌ನಲ್ಲಿ ಹಿಂಸಾಚಾರ ಭುಗಿಲೇಳುವ ಸಾಧ್ಯತೆ ದಟ್ಟವಾಗಿದೆ.
ಸೇನಾ ಪ್ರಕಟನೆಯಲ್ಲಿ ಮಾತನಾಡಿದ ಕರ್ನಲ್ ಮೇಜರ್ ಅಮದೌ ಅಬ್ದ್ರಮನೆ, ನಾವು, ರಕ್ಷಣಾ ಮತ್ತು ಭದ್ರತಾ ಪಡೆಗಳಾಗಿದ್ದೇವೆ. ನಿಮಗೆ ತಿಳಿದಿರುವ ಆಡಳಿತವನ್ನು ಕೊನೆಗೊಳಿಸಲು ನಿರ್ಧರಿಸಿದ್ದೇವೆ. ಪ್ರಜಾಪ್ರಭುತ್ವ ಸರ್ಕಾರವು ಭದ್ರತಾ ಪರಿಸ್ಥಿತಿಯ ನಿರಂತರ ಕ್ಷೀಣತೆ ಮತ್ತು ಕಳಪೆ ಆರ್ಥಿಕ ಮತ್ತು ಸಾಮಾಜಿಕ ಆಡಳಿತವನ್ನು ಅನುಸರಿಸುತ್ತಿತ್ತು ಎಂದು ಅವರು ತಿಳಿಸಿದ್ದಾರೆ. ಇನ್ನು ಅಮದೌ ಅವರು ಹೇಳಿಕೆ ನೀಡುವ ವೇಳೆ ಅವರ ಹಿಂದುಗಡೆ ಒಂಬತ್ತು ಇತರೆ ಸಮವಸ್ತ್ರಧಾರಿ ಸೈನಿಕರು ನಿಂತುಕೊಂಡಿದ್ದರು. ಇನ್ನು ನೈಗರ್ ಅಧ್ಯಕ್ಷ ಮುಹಮ್ಮದ್ ಬಜೌಮ್ ಅವರನ್ನು ಬುಧವಾರ ಮುಂಜಾನೆಯಿಂದ ಅಧ್ಯಕ್ಷೀಯ ಸಿಬ್ಬಂದಿ ಪಡೆಗಳು ತಮ್ಮ ವಶಕ್ಕೆ ಪಡೆದುಕೊಂಡಿದೆ. ಪಶ್ಚಿಮ ಆಫ್ರಿಕಾದಲ್ಲಿ ಇಸ್ಲಾಮಿ ಉಗ್ರಗಾಮಿತ್ವದ ವಿರುದ್ಧದ ಹೋರಾಟದಲ್ಲಿ ಬಜೌಮ್ ಅವರು ಪಾಶ್ಚಿಮಾತ್ಯ ರಾಷ್ಟ್ರಗಳ ಪರ ಪ್ರಮುಖ ಆಪ್ತ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು.
