ಉದಯವಾಹಿನಿ, ಸತೀಶ್ ನೀನಾಸಂ ಅಭಿನಯದ ‘ದಿ ರೈಸ್ ಆಫ್ ಅಶೋಕ’ ಚಿತ್ರ ಫೆಬ್ರವರಿ 27ರಂದು ತೆರೆಗೆ ಬರಲು ಸಜ್ಜಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಟ್ರೇಲರ್ ಕಥೆಯ ತೀವ್ರತೆ ಮತ್ತು ಆ್ಯಕ್ಷನ್ ದೃಶ್ಯಗಳಿಂದ ಗಮನ ಸೆಳೆಯುತ್ತಿದೆ. ಸಮಾಜದಲ್ಲಿನ ಜಾತಿ ತಾರತಮ್ಯ ಮತ್ತು ದಬ್ಬಾಳಿಕೆಗೆ ವಿರುದ್ಧವಾಗಿ ಹೋರಾಡುವ ಅಶೋಕನಾಗಿ ಸತೀಶ್ ಕಾಣಿಸಿಕೊಂಡಿದ್ದಾರೆ.
ಬಡ ಕುಟುಂಬದಲ್ಲಿ ಹುಟ್ಟಿದ ಅಶೋಕ ನಗರದಲ್ಲಿ ವಿದ್ಯಾಭ್ಯಾಸ ಮುಗಿಸಿ ಊರಿಗೆ ಮರಳುತ್ತಾನೆ. ನಂತರ ರೆವೆನ್ಯೂ ಡಿಪಾರ್ಟ್‌ಮೆಂಟ್ ಸೇರುವ ಕನಸು ಕಾಣುತ್ತಾನೆ. ಆದರೆ ಗ್ರಾಮದ ಪಾಳೇಗಾರನ ದಬ್ಬಾಳಿಕೆ ಅವನ ದಾರಿಗೆ ಅಡ್ಡಿಯಾಗುತ್ತದೆ. ಅನ್ಯಾಯದ ವಿರುದ್ದ ಅಶೋಕ ಎದ್ದು ನಿಲ್ಲುವ ಕಥಾಸೂತ್ರವನ್ನು ಟ್ರೇಲರ್ ಸೂಚಿಸುತ್ತದೆ.
ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ರವಿಚಂದ್ರನ್, ದುನಿಯಾ ವಿಜಯ್, ವಸಿಷ್ಠ ಸಿಂಹ, ಯೋಗಿ ಮತ್ತು ದಿಗಂತ್ ಸೇರಿದಂತೆ ಹಲವರು ಹಾಜರಿದ್ದರು. ಚಿತ್ರಕ್ಕೆ ವಿನೋದ್ ದೊಂಡಾಲೆ ನಿರ್ದೇಶನ ಮಾಡಿದ್ದಾರೆ. ಅವರ ನಿಧನದ ಬಳಿಕ ಸತೀಶ್ ನಿರ್ಮಾಪಕರಾಗಿ ಚಿತ್ರವನ್ನು ಪೂರ್ಣಗೊಳಿಸಿದ್ದಾರೆ. ಈಗ ಎಲ್ಲಾ ಸವಾಲುಗಳನ್ನು ಮೀರಿ ಸಿನಿಮಾ ಬಿಡುಗಡೆ ಹಂತ ತಲುಪಿದೆ.
