ಉದಯವಾಹಿನಿ, ಅಹಲ್ಯಾನಗರ : ಅಹಲ್ಯಾನಗರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ 15 ವರ್ಷದ ಬಾಲಕಿಯನ್ನು ಅಪಹರಿಸಿದ ದುಷ್ಕರ್ಮಿಗಳು, ಹಲವು ದಿನಗಳ ಕಾಲ ಅತ್ಯಾಚಾರ ಎಸಗಿರುವ ಘಟನೆ ಬೆಳಕಿಗೆ ಬಂದಿದೆ. ಕಳೆದ ಶುಕ್ರವಾರ ಬಾಲಕಿಯನ್ನು ಅಪಹರಿಸಿ ನಾಸಿಕ್-ಸೂರತ್ ರಸ್ತೆಯ ಬಳಿಯ ಅರಣ್ಯ ಪ್ರದೇಶಕ್ಕೆ ಕರೆದೊಯ್ದು, ಐದು ದಿನ ಬಂಧಿಯಾಗಿರಿಸಿ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. “ಫೆಬ್ರವರಿ 13ರಂದು, ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಬಾಲಕಿ ಶಾಲೆಗೆ ಹೋಗಲು ಮನೆಯಿಂದ ಹೊರಟಿದ್ದಳು. ಸಂಜೆಯವರೆಗೂ ಹಿಂತಿರುಗದೇ ಇದ್ದಾಗ ಆತಂಕಗೊಂಡ ಪೋಷಕರು ರಾಹುರಿ ಪೊಲೀಸ್ ಠಾಣೆಗೆ ತರಳಿ ಕಾಣೆಯಾಗಿರುವ ಮಗಳ ಬಗ್ಗೆ ದೂರು ದಾಖಲಿಸಿದ್ದಾರೆ” ಎಂದು ಪೊಲೀಸರು ಹೇಳಿದ್ದಾರೆ.

ಪೋಷಕರ ದೂರಿನ ನಂತರ, ಪೊಲೀಸ್ ತಂಡ ಬಾಲಕಿಗಾಗಿ ಹುಡುಕಾಟ ನಡೆಸಿ ಆಕೆಯನ್ನು ರಕ್ಷಿಸಿದೆ. ನಂತರ ಸುರಕ್ಷಿತವಾಗಿ ಪೋಷಕರಿಗೆ ಹಸ್ತಾಂತರಿಸಲಾಯಿತು. ನಂತರ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಹುರಿಯ ಪೊಲೀಸ್ ಇನ್ಸ್‌ಪೆಕ್ಟರ್ ಸಂಜಯ್ ತೇಗೆ ಅವರು ಪ್ರತಿಕ್ರಿಯಿಸಿ, “ಆರೋಪಿಯು ತನ್ನ ಇಬ್ಬರು ಸಹಚರರ ಸಹಾಯದಿಂದ ಬಾಲಕಿಯನ್ನು ಅರಣ್ಯ ಪ್ರದೇಶಕ್ಕೆ ಕರೆದೊಯ್ದು, ಹಲವು ದಿನಗಳ ಕಾಲ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ” ಎಂದು ಹೇಳಿದರು. “ಮೂವರ ವಿರುದ್ಧ ಮೊದಲು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್)ಕ್ಕೆ ಸಂಬಂಧಿತ ಕಲಂಗಳಡಿ ಅಪಹರಣ ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತೆಯ ಹೇಳಿಕೆಯ ಆಧಾರದ ಮೇಲೆ ಪೋಕ್ಸೊ ಕಾಯ್ದೆ ಮತ್ತು ಲೈಂಗಿಕ ದೌರ್ಜನ್ಯದ ವಿಭಾಗಗಳನ್ನು ಸೇರಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ. ವೈದ್ಯಕೀಯ ಪರೀಕ್ಷೆಯು ಲೈಂಗಿಕ ದೌರ್ಜನ್ಯವನ್ನು ದೃಢಪಡಿಸಿದೆ” ಎಂದು ಮಾಹಿತಿ ನೀಡಿದರು. ಸರ್ಕಾರಿ ಶಾಲೆಯ ಹೆಡ್ ಮಾಸ್ಟ್ರು ಅರೆಸ್ಟ್: 13 ವರ್ಷದ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾರಾಷ್ಟ್ರದ ಯಾವತ್ಮಾಲ್ ಜಿಲ್ಲೆಯ ಶಾಲೆಯ ಮುಖ್ಯೋಪಾಧ್ಯಾಯನನ್ನು ಪೊಲೀಸರು ಇತ್ತೀಚಿಗೆ ಅರೆಸ್ಟ್ ಮಾಡಿದ್ದರು.

ಇಲ್ಲಿನ ಘಟಂಜಿ ತಾಲೂಕಿನ ಜಿಲ್ಲಾ ಪರಿಷತ್ ಶಾಲೆಯ ಮುಖ್ಯೋಪಾಧ್ಯಾಯ ಸುಮಾರು 47 ವರ್ಷದ ವ್ಯಕ್ತಿ, ಏಳನೇ ತರಗತಿ ವಿದ್ಯಾರ್ಥಿನಿಯ ಮೇಲೆ ಕಳೆದ ವರ್ಷದ ಮೇ 1 ಮತ್ತು ಫೆಬ್ರವರಿ 5ರಂದು ಅತ್ಯಾಚಾರ ಎಸಗಿದ್ದಾನೆ. ಸಂತ್ರಸ್ತೆಯ ತಂದೆ ಶನಿವಾರ ಈ ಬಗ್ಗೆ ದೂರು ನೀಡಿದ್ದಾರೆ. ಈ ದೂರಿನ ನಂತರ ಆರೋಪಿಯನ್ನು ಭಾನುವಾರ ಬಂಧಿಸಲಾಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದರು.

Leave a Reply

Your email address will not be published. Required fields are marked *

error: Content is protected !!