ಉದಯವಾಹಿನಿ, ಬೆಂಗಳೂರು: ದೆಹಲಿಯಲ್ಲಿ ನಡೆಯುತ್ತಿರುವ ಎಐ ಇಂಪ್ಯಾಕ್ಟ್ ಶೃಂಗಸಭೆ ಇಡೀ ಜಗತ್ತಿನ ಗಮನ ಸೆಳೆದಿದೆ. ಆದರೆ, ಶೃಂಗಸಭೆಯ ಕೊನೆಯ ದಿನ ಯುವ ಕಾಂಗ್ರೆಸ್ ಪಕ್ಷದ 10 ಕಾರ್ಯಕರ್ತರು ಅಂಗಿ ತೆಗೆದು ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ್ದು, ಬಿಜೆಪಿಗರ ಕಣ್ಣು ಕೆಂಪಾಗಿಸಿದೆ. ಶೃಂಗಸಭೆ ನಡೆಯುತ್ತಿರುವ ಸ್ಥಳದಲ್ಲೇ ಹತ್ತು ಮಂದಿ ದಿಢೀರನೇ ಶರ್ಟ್ ಬಿಚ್ಚಿ, ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಘೋಷಣೆಗಳನ್ನು ಕೂಗಿದ್ದರು. ಕಾಂಗ್ರೆಸ್ಸಿಗರ ಈ ವರ್ತನೆಯನ್ನು ಖಂಡಿಸಿ ಬಿಜೆಪಿ ಟೀಮ್ ಇಂದು ದೇಶಾದ್ಯಂತ ಪ್ರತಿಭಟನೆಗೆ ಇಳಿದಿದೆ.

ದೆಹಲಿ, ಮುಂಬೈ, ಕರ್ನಾಟಕ ಸೇರಿದಂತೆ ದೇಶಾದ್ಯಂತ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಎಐ ಶೃಂಗಸಭೆಯಲ್ಲಿ ಕಾಂಗ್ರೆಸ್ ಅರೆಬೆತ್ತಲೆ ಪ್ರತಿಭಟನೆಗೆ ಬೆಂಕಿ ಉಗುಳುತ್ತಿದ್ದಾರೆ. ದೇಶದ ಹಲವೆಡೆ ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ದೆಹಲಿಯಲ್ಲಿ ಕಾಂಗ್ರೆಸ್ ಕಚೇರಿ ಮುತ್ತಿಗೆಗೆ ಬಿಜೆಪಿ ಕಾರ್ಯಕರ್ತರು ಯತ್ನಿಸಿದರು. ಇದೇ ಸಂದರ್ಭದಲ್ಲಿ ಭಾರೀ ಹೈಡ್ರಾಮಾ ನಡೆಯಿತು. ದೆಹಲಿ ಮಾತ್ರವಲ್ಲದೇ ಮಹಾರಾಷ್ಟ್ರದಲ್ಲೂ ಕಾಂಗ್ರೆಸ್ ವಿರುದ್ಧ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಥಾಣೆಯಲ್ಲಿ ರಾಹುಲ್ ಗಾಂಧಿಗೆ ಕಪ್ಪುಪಟ್ಟಿ ಪ್ರದರ್ಶಿಸಲಾಯಿತು. ಇದಲ್ಲದೇ ಮುಂಬೈ, ಸೂರತ್, ಜೈಪುರ್, ಜಮ್ಮುವಿನಲ್ಲೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಭಾರೀ ಹೈಡ್ರಾಮಾ ಸೃಷ್ಟಿಸಿತು. ಬೆಂಗಳೂರು, ಬೆಳಗಾವಿ, ಬಳ್ಳಾರಿಯಲ್ಲಿ ಪ್ರತಿಭಟನೆ: ದೆಹಲಿಯ ಎಐ ಸಭೆಯಲ್ಲಿ ಕಾಂಗ್ರೆಸ್ ಪ್ರತಿಭಟನೆ ವಿರುದ್ಧ ಬೆಂಗಳೂರಿನಲ್ಲೂ ಬಿಜೆಪಿಗರು ಪ್ರತಿಭಟನೆ ನಡೆಸಿದರು. ನಗರದ ಫ್ರೀಡಂಪಾರ್ಕ್‌ನಲ್ಲಿ ರಾಜ್ಯ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ಶಾಸಕ ಸಿ.ಕೆ ರಾಮಮೂರ್ತಿ, ಸಪ್ತಗಿರಿಗೌಡ, ಎಸ್ ಹರೀಶ್, ಧೀರಜ್ ಮುನಿರಾಜು ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಭಾರತ್ ಮಂಟಪಮ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಅರೆಬೆತ್ತಲೆ ಪ್ರತಿಭಟನೆಗೆ ಖಂಡನೆ ವ್ಯಕತಪಡಿಸಿದರು. ಈ ವೇಳೆ ಭಾರೀ ಹೈಡ್ರಾಮಾ ನಡೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಪ್ರತಿಭಟನಾಕಾರನನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.

 

Leave a Reply

Your email address will not be published. Required fields are marked *

error: Content is protected !!