ಉದಯವಾಹಿನಿ, ಬುಂಡಿ(ರಾಜಸ್ಥಾನ): ರಾಜಸ್ಥಾನದ ಬುಂಡಿ ಜಿಲ್ಲೆಯ ಹಿಂದೋಲಿಯಲ್ಲಿ ಕಾಂಗ್ರೆಸ್ ಶಾಸಕ ಸುರೇಶ್ ಗುರ್ಜರ್ ಅವರಿಗೆ ಸೇರಿದ ಎಸ್‌ಯುವಿ ಕಾರು ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮಾಜಿ ಸರಪಂಚರೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಘಟನೆ ಬೆನ್ನಲ್ಲೇ ಮೃತರ ಕುಟುಂಬ ಸದಸ್ಯರು ಮತ್ತು ಗ್ರಾಮಸ್ಥರು ಮೃತದೇಹವನ್ನು ರಸ್ತೆಯಲ್ಲೇ ಇರಿಸಿ ರಾಷ್ಟ್ರೀಯ ಹೆದ್ದಾರಿ 52 ಅನ್ನು ತಡೆದು ಪ್ರತಿಭಟನೆ ನಡೆಸಿದರು. ಇದರಿಂದಾಗಿ ಹಲವಾರು ಕಿಲೋಮೀಟರ್ ವರೆಗೆ ಸಂಚಾರ ಸ್ಥಗಿತಗೊಂಡು ವಾಹನ ಸವಾರರು ಪರದಾಡುವಂತಾಯಿತು.
ಬಸ್ನಿ ಗ್ರಾಮದ ಮಾಜಿ ಸರಪಂಚ್ ಬಾಬು ಸಿಂಗ್ ಮೀನಾ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಹಿಂದೋಲಿ ಪ್ರದೇಶದ ‘ಪೆಂಚ್ ಕಿ ಬಾವ್ಡಿ’ ಬಳಿಯ ಬಸ್ನಿ ಗಣೇಶ್‌ಜಿ ದೇವಾಲಯದ ಮುಂದೆ ಈ ಅಪಘಾತ ಸಂಭವಿಸಿದೆ. ಶಾಸಕರ ಸ್ಕಾರ್ಪಿಯೋ ಕಾರು ಎದುರುಗಡೆ ಬರುತ್ತಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟರ್ ಸವಾರ ಬಾಬು ಸಿಂಗ್ ಮೀನಾ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಅಜಿತ್ ಮೇಘವಂಶಿ ತಿಳಿಸಿದ್ದಾರೆ.
ಸ್ಥಳೀಯರು ಮತ್ತು ದಾರಿಹೋಕರು ತಕ್ಷಣ ಗಾಯಾಳುವನ್ನು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ಬಾಬು ಸಿಂಗ್ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ ಮತ್ತು ಚಿಕಿತ್ಸೆಯ ಸಮಯದಲ್ಲಿ ಅವರು ಸಾವನ್ನಪ್ಪಿದರು ಎಂದು ಮೇಘವಂಶಿ ಹೇಳಿದರು.
ಮಾಜಿ ಸರಪಂಚ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬದವರು ಹಾಗೂ ಗ್ರಾಮಸ್ಥರು ಖಾನ್ಪುರ ಶಾಸಕರ ವಿರುದ್ಧ ಪ್ರತಿಭಟಿಸಲು ಪ್ರಾರಂಭಿಸಿದರು. ಅಪಘಾತ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಮೃತರ ಸಂಬಂಧಿಕರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಪರಿಸ್ಥಿತಿಯ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ಶಾಸಕ ಗುರ್ಜರ್ ಅವರನ್ನು ಸುರಕ್ಷತೆಗಾಗಿ ಹಿಂದೋಲಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಜೊತೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರತಿಭಟನಾಕಾರರ ಮನವೊಲಿಸುವ ಮೂಲಕ ಪರಿಸ್ಥಿತಿಯನ್ನು ಶಾಂತಗೊಳಿಸಲು ಪ್ರಯತ್ನಿಸಿದರು ಎಂದು ಎಸ್ಪಿ ಹೇಳಿದರು.
“ಕುಟುಂಬ ಸದಸ್ಯರು ಮತ್ತು ಗ್ರಾಮಸ್ಥರನ್ನು ಸಮಾಧಾನಪಡಿಸಲಾಗುತ್ತಿದೆ ಮತ್ತು ತನಿಖೆ ನಡೆಯುತ್ತಿದೆ. ಶಾಸಕರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಪಘಾತದ ಕಾರಣವನ್ನು ನಿರ್ಧರಿಸಲು ನಾವು ಅಪಘಾತದ ಸ್ಥಳವನ್ನು ಪರಿಶೀಲಿಸುತ್ತಿದ್ದೇವೆ ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ತೆಗೆದುಕೊಳ್ಳಲಾಗುತ್ತಿದೆ” ಎಂದು ತಿಳಿಸಿದರು.
