ಉದಯವಾಹಿನಿ, ತಿರುಪುರ್​ (ತಮಿಳುನಾಡು): ಪಾಕಿಸ್ತಾನಿ ಭಯೋತ್ಪಾದಕ ಸಂಘಟನೆಯನ್ನು ಬೆಂಬಲಿಸುತ್ತಿದ್ದ 6 ಜನ ಬಾಂಗ್ಲಾದೇಶಿ ಪ್ರಜೆಗಳನ್ನು ದೆಹಲಿ ಪೊಲೀಸರು ಇಂದು ತಮಿಳುನಾಡಿನಲ್ಲಿ ಬಂಧಿಸಿದ್ದಾರೆ. ವಿಚಾರಣೆಯಲ್ಲಿ ಅವರು ಉಗ್ರ ಸಂಘಟನೆಗಳ ಜೊತೆ ನಂಟು ಹೊಂದಿರುವುದು ಗೊತ್ತಾಗಿದೆ.ದೇಶದಲ್ಲಿ ಉಗ್ರ ದಾಳಿ ನಡೆಯುವ ಶಂಕೆ ಹಿನ್ನೆಲೆ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ. ಅನುಮಾನಾಸ್ಪದ ವ್ಯಕ್ತಿಗಳನ್ನು ಬಂಧಿಸುವ ಕ್ರಮಗಳನ್ನು ಸಹ ತೀವ್ರಗೊಳಿಸಲಾಗಿದೆ. ಈ ವೇಳೆ, ದೆಹಲಿ ವಿಶೇಷ ವಿಭಾಗದ ಪೊಲೀಸರು, ಸಾಮಾಜಿಕ ಮಾಧ್ಯಮದಲ್ಲಿ ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸುವ ಪೋಸ್ಟ್​ ಹಂಚಿಕೊಂಡಿದ್ದ ಆರು ಮಂದಿಯನ್ನು ಬಂಧಿಸಿದಾಗ, ಅವರು ಬಾಂಗ್ಲಾದೇಶಿ ಪ್ರಜೆಗಳು ಎಂಬುದು ಪತ್ತೆಯಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್​ ಹಂಚಿಕೊಂಡ ಹಿನ್ನೆಲೆ ಅದರ ಜಾಡು ಹಿಡಿದು ತಮಿಳುನಾಡಿನ ತಿರುಪುರಕ್ಕೆ ಬಂದ ದೆಹಲಿ ಪೊಲೀಸರು, ತಿರುಪುರ ನಗರ ಮತ್ತು ಜಿಲ್ಲಾ ಪೊಲೀಸರ ಸಹಾಯ ಕೋರಿದ್ದರು.
ಪಾಕ್​ ಉಗ್ರ ಸಂಘಟನೆಗಳಿಗೆ ಬೆಂಬಲ: ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸುತ್ತಿದ್ದ ಆರೋಪಿಗಳು ತಿರುಪುರದ ಉತುಕುಳಿ, ಪಲ್ಲಡಂ ಮತ್ತು ತಿರುಮುರುಗನ್‌ಪೂಂಡಿ ಪ್ರದೇಶಗಳಲ್ಲಿ ಅಡಗಿಕೊಂಡ ಬಗ್ಗೆ ಗುರುತಿಸಿದ್ದರು. ನಂತರ, ಇಂದು ಮುಂಜಾನೆ 6 ಮಂದಿಯನ್ನು ಬಂಧಿಸಲಾಯಿತು. ಇದರಲ್ಲಿ ಉತುಕುಳಿ ಪ್ರದೇಶದಲ್ಲಿ ಇಬ್ಬರು, ಪಲ್ಲಡಂನಲ್ಲಿ ಮೂವರು, ತಿರುಮುರುಗನ್‌ಪೂಂಡಿಯಲ್ಲಿ ಒಬ್ಬರನ್ನು ಬಂಧಿಸಲಾಗಿದೆ.
ಅವರನ್ನು ರಹಸ್ಯ ಸ್ಥಳದಲ್ಲಿ ಇರಿಸಿ ವಿಚಾರಣೆ ನಡೆಸಲಾಯಿತು. ಆ ಸಮಯದಲ್ಲಿ, ಅವರೆಲ್ಲರೂ ಬಾಂಗ್ಲಾದೇಶದವರು ಎಂದು ತಿಳಿದುಬಂದಿದೆ. ಅವರೆಲ್ಲರೂ ತಿರುಪ್ಪೂರಿನ ಬನಿಯನ್ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು. ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಸಂಘಟನೆಯನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಕಾಮೆಂಟ್‌ಗಳನ್ನು ಪೋಸ್ಟ್ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ನಕಲಿ ದಾಖಲೆ ಸೃಷ್ಟಿ: ಕೆಲವು ಬಾಂಗ್ಲಾದೇಶಿಗರು ಈಗಾಗಲೇ ನಕಲಿ ಆಧಾರ್ ಕಾರ್ಡ್‌ಗಳು ಮತ್ತು ಇತರ ದಾಖಲೆಗಳೊಂದಿಗೆ ತಿರುಪ್ಪೂರಿಗೆ ಬಂದು ಬನಿಯನ್ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತದೆ. ಇದರ ನಂತರ, ತಿರುಪ್ಪೂರು ಪೊಲೀಸರು ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ. ನಕಲಿ ದಾಖಲೆಗಳೊಂದಿಗೆ ವಾಸಿಸುತ್ತಿರುವ ಬಾಂಗ್ಲಾದೇಶಿಗರನ್ನು ಬಂಧಿಸಲಾಗುತ್ತಿದೆ. ಇಲ್ಲಿಯವರೆಗೆ 6 ಮಂದಿಯನ್ನು ಬಂಧಿಸಲಾಗಿದೆ. ಅವರಿಂದ 8 ಸೆಲ್ ಫೋನ್‌ಗಳು ಮತ್ತು 16 ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ದೆಹಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!