ಉದಯವಾಹಿನಿ, ಭಿಂಡ್ (ಮಧ್ಯಪ್ರದೇಶ): ವ್ಯಾನ್ ಮತ್ತು ಬಸ್ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಐದು ಜನ ಮೃತಪಟ್ಟ ಘಟನೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ನಡೆದಿದೆ. ಗೋಹದ್ ಚೌರಾಹಾ ಪೊಲೀಸ್ ಠಾಣಾ ವ್ಯಾಪ್ತಿಯ ಗಿಲ್ ಧಾಬಾ ಬಳಿಯ ರಾಷ್ಟ್ರೀಯ ಹೆದ್ದಾರಿ 719ರಲ್ಲಿ ಇಂದು ಬೆಳಗ್ಗೆ ಈ ದುರಂತ ಸಂಭವಿಸಿದೆ. ಐದು ಜನ ಮೃತಪಟ್ಟರೆ, ಆರು ಮಂದಿ ಗಾಯಗೊಂಡಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಸ್ಥಳೀಯರ ಸಹಾಯದ ಮೂಲಕ ಗಾಯಾಳುಗಳನ್ನು ತಕ್ಷಣ ಗೋಹದ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಕೆಲವರನ್ನು ವೈದ್ಯರ ಸೂಚನೆ ಮೇರೆಗೆ ಗ್ವಾಲಿಯರ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಡಿಕ್ಕಿ ರಭಸಕ್ಕೆ ವ್ಯಾನ್ ಸಂಪೂರ್ಣವಾಗಿ ಛಿದ್ರಗೊಂಡಿದೆ. ಘಟನೆಯಿಂದ ಹೆದ್ದಾರಿಯಲ್ಲಿ ಸಂಚಾರ ದಟ್ಟನೆ ಉಂಟಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತ ಸಂಭವಿಸಿದ್ದು ಹೀಗೆ: ಮದುವೆಗೆ ತೆರಳಿದ್ದ ಬಸ್ ಜನರನ್ನು ಇಳಿಸಿ ಭಿಂಡ್ನಿಂದ ಗ್ವಾಲಿಯರ್ಗೆ ಹೋಗುತ್ತಿತ್ತು. ಈ ಬಸ್ ಗಿಲ್ ಧಾಬಾ ಬಳಿ ಬರುತ್ತಿದ್ದಂತೆ, ಗ್ವಾಲಿಯರ್ನಿಂದ ಭಿಂಡ್ಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ವ್ಯಾನ್ನಲ್ಲಿದ್ದ ಐದು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಆರು ಜನರು ಗಾಯಗೊಂಡಿದ್ದಾರೆ.
ಪೊಲೀಸರು ಹೇಳುವುದಿಷ್ಟು: ಬೆಳಗಿನಜಾವ 3 ಗಂಟೆಯ ನಡುವೆ ಅಪಘಾತ ಸಂಭವಿಸಿರಬಹುದೆಂದು ಸ್ಥಳೀಯರು ಹೇಳುತ್ತಿದ್ದಾರೆ. ಅಫಘಾತಲ್ಲಿ ಮೃತಪಟ್ಟ ಐವರ ಪೈಕಿ ಮೂವರನ್ನು ಗುರುತಿಸಲಾಗಿದ್ದು, ಇಬ್ಬರ ಗುರುತು ಪತ್ತೆಯಾಗಿಲ್ಲ. ಡಿಕ್ಕಿ ಎಷ್ಟು ಭೀಕರವಾಗಿತ್ತೆಂದರೆ, ವ್ಯಾನ್ ಎರಡು ತುಂಡಾಗಿದೆ. ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಬಂದ ನಮ್ಮ ಪೊಲೀಸ್ ಸಿಬ್ಬಂದಿ ಪರಿಶೀಲನೆ ನಡೆಸಿದರು. ತಕ್ಷಣ ಸ್ಥಳೀಯರ ಸಹಾಯದ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮೃತರು ಬೇರೆ ಬೇರೆ ಜಿಲ್ಲೆಯವರಾಗಿದ್ದು, ದಾಟಿಯಾ ಜಿಲ್ಲೆಯ ಜಗದೀಶ್ ಭಡೋರಿಯಾ, ಭಿಂಡ್‌ನ ಅತುಲ್ ಶಿವಾರೆ ಮತ್ತು ಪ್ರದೀಪ್ ಈ ಮೂವರ ಮಾಹಿತಿ ಸದ್ಯಕ್ಕೆ ಗೊತ್ತಾಗಿದ್ದು, ಇನ್ನಿಬ್ಬರ ಗುರುತು ಇನ್ನೂ ಪತ್ತೆಯಾಗಿಲ್ಲ. ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ ಎಂದು ಗೋಹದ್ ಚೌರಾಹಾ ಪೊಲೀಸ್ ಠಾಣೆಯ ಉಸ್ತುವಾರಿ ಮನೀಶ್ ಧಕಾಡ್ ಮಾಹಿತಿ ನೀಡಿದ್ದಾರೆ.
ಗಾಯಗೊಂಡವರಲ್ಲಿ ಮೆಹಗಾಂವ್ ಪೊಲೀಸ್ ಠಾಣೆಯ ಎಲೈಚಿಯ ಮರೋಲಿಯ ನಿವಾಸಿ ಸಂತೋಷ್ ಮತ್ತು ಅವರ 10 ವರ್ಷದ ಮಗಳು ಕಿಟ್ಟು, 61 ವರ್ಷದ ಮೀರಾ ದೇವಿ, 50 ವರ್ಷದ ಸುಖಬೀರ್ ಸಿಂಗ್, ಮೆಹಗಾಂವ್ ನಿವಾಸಿ 60 ವರ್ಷದ ಭೋಗಿ ನಾಥ್ ಮತ್ತು ಗೋಹಡ್ ನಿವಾಸಿ 61 ವರ್ಷದ ಮೇವರಂ ಸೇರಿದ್ದು, ಅವರನ್ನು ಗ್ವಾಲಿಯರ್ ಆಸ್ಪತ್ರೆಗೆ ಕರೆದೊಯ್ಯುಲಾಗಿದೆ ಎಂದೂ ಅವರು ತಿಳಿಸಿದ್ದಾರೆ.
