ಉದಯವಾಹಿನಿ, ಥಾಣೆ(ಮಹಾರಾಷ್ಟ್ರ): ಆರ್‌ಎಸ್‌ಎಸ್ ಕಾರ್ಯಕರ್ತನೊಬ್ಬ 2014ರಲ್ಲಿ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಸಂಬಂಧ ಹೊಸ ಶ್ಯೂರಿಟಿ ಹೆಸರಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಭಿವಂಡಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರಾದರು. ಆ ಪ್ರಕರಣದಲ್ಲಿ ಮಹಾರಾಷ್ಟ್ರ ಕಾಂಗ್ರೆಸ್​ ಅಧ್ಯಕ್ಷ ಹರ್ಷವರ್ಧನ್ ಸಪ್ಕಲ್ ಅವರನ್ನು ತಮ್ಮ ಹೊಸ ಜಾಮೀನುದಾರ ಎಂದು ಹೆಸರಿಸಿದ್ದಾರೆ.
ಥಾಣೆ ಜಿಲ್ಲೆಯ ಭಿವಂಡಿಗೆ ಹೋಗುವ ದಾರಿಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಪ್ಪು ಬಾವುಟ ಪ್ರತಿಭಟನೆ ಎದುರಿಸಿದ ಗಾಂಧಿ, ಸಪ್ಕಲ್ ಮತ್ತು ಪಕ್ಷದ ಇತರ ಹಿರಿಯ ನಾಯಕರೊಂದಿಗೆ ನ್ಯಾಯಾಲಯದ ಆವರಣವನ್ನು ತಲುಪಿದರು. ನವದೆಹಲಿಯಲ್ಲಿ ನಡೆದ ಎಐ ಶೃಂಗಸಭೆಯಲ್ಲಿ ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆಗೆ ಪ್ರತಿಯಾಗಿ ಬಿಜೆಪಿ ಕಾರ್ಯಕರ್ತರು ರಾಹುಲ್​ ಗಾಂಧಿಗೆ ಕಪ್ಪು ಬಾವುಟಗಳನ್ನು ಪ್ರದರ್ಶಿಸಿದರು.

ಅದೇ ಸಮಯದಲ್ಲಿ, ಬಿಜೆಪಿಯ ಯುವ ಮೋರ್ಚಾ ಕೂಡ ನವದೆಹಲಿಯಲ್ಲಿ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸಿತು. ಭಾರತ AI ಶೃಂಗಸಭೆ 2026 ರ ಸ್ಥಳವಾದ ಭಾರತ್ ಮಂಟಪದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿದ ನಂತರ ಶುಕ್ರವಾರ ಐವೈಸಿ ಕಾರ್ಯಕರ್ತರನ್ನು ಬಂಧಿಸಲಾಯಿತು. ಪ್ರತಿಭಟನಾಕಾರರು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚಿತ್ರಗಳಿರುವ ಬಿಳಿ ಟಿ-ಶರ್ಟ್‌ಗಳನ್ನು ಧರಿಸಿದ್ದರು, ಜೊತೆಗೆ “ಭಾರತ-ಯುಎಸ್ ವ್ಯಾಪಾರ ಒಪ್ಪಂದ” ಮತ್ತು “ಪ್ರಧಾನಿ ರಾಜಿ ಮಾಡಿಕೊಂಡಿದ್ದಾರೆ” ಮುಂತಾದ ಘೋಷಣೆಗಳು ಟಿ ಶರ್ಟ್​ ಮೇಲಿದ್ದವು.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಹಿಂದಿನ ಜಾಮೀನುದಾರ ಮಾಜಿ ಕೇಂದ್ರ ಸಚಿವ ಶಿವರಾಜ್ ಪಾಟೀಲ್ ಚಾಕುರ್ಕರ್ ಅವರ ನಿಧನ ನಂತರ ಈ ಪ್ರಕರಣದಲ್ಲಿ ಲೋಕಸಭಾ ವಿರೋಧ ಪಕ್ಷದ ನಾಯಕ ನ್ಯಾಯಾಲಯದ ಮುಂದೆ ಖುದ್ದಾಗಿ ಹಾಜರಾಗಬೇಕಾಗಿತ್ತು. ಇದೀಗ ರಾಹುಲ್​​​ ಗಾಂಧಿ ಹೊಸ ಜಾಮೀನು ಬಾಂಡ್‌ಗೆ ಸಹಿ ಹಾಕಿದ್ದ ಕಾನೂನು ಪ್ರಕ್ರಿಯೆಗಳನ್ನು ಅರ್ಧ ಗಂಟೆಯೊಳಗೆ ಪೂರ್ಣಗೊಳಿಸಲಾಯಿತು. ಪ್ರಕರಣದಲ್ಲಿ ಸಪ್ಕಲ್ ಅವರನ್ನು ಅವರ ಹೊಸ ಖಾತರಿದಾರರನ್ನಾಗಿ ಹಾಜರುಪಡಿಸಲಾಗಿದೆ.

ಮಾಧ್ಯಮದವರೊಂದಿಗೆ ಮಾತನಾಡಿದ ರಾಹುಲ್​ ಗಾಂಧಿಯವರ ವಕೀಲ ನಾರಾಯಣ ಅಯ್ಯರ್, ನಮಗೆ ಭಾರತೀಯ ನ್ಯಾಯಾಂಗದ ಮೇಲೆ ಸಂಪೂರ್ಣ ನಂಬಿಕೆ ಇದೆ ಮತ್ತು ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿದೆ. ಭವಿಷ್ಯದ ವಿಚಾರಣೆಗಳಲ್ಲಿ ಗಾಂಧಿಯವರಿಗೆ ವೈಯಕ್ತಿಕ ಹಾಜರಾತಿಯಿಂದ ಶಾಶ್ವತ ವಿನಾಯಿತಿ ನೀಡಲಾಗಿದ್ದರೂ, ಸೂಕ್ತ ಸಮಯದಲ್ಲಿ ನಾವು ನಮ್ಮ ಸಾಕ್ಷಿಗಳನ್ನು ಹಾಜರುಪಡಿಸುತ್ತೇವೆ. ಜಾಮೀನು ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ತನಿಖಾಧಿಕಾರಿ (ಐಒ) ಅವರ ಪಾಟಿ ಸವಾಲು ಈಗ ಪುನಾರಂಭವಾಗಲಿದೆ. ಆ ದಿನ ಗಾಂಧಿಯವರ ವಿಚಾರಣೆಯನ್ನು ನಿಗದಿಪಡಿಸಲಾಗಿಲ್ಲ ಎಂದು ಹೇಳಿದರು.

ಪ್ರಕರಣದ ಹಿನ್ನೆಲೆ: 2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸೋನಾಲೆ ಗ್ರಾಮದಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡುತ್ತಾ, ಮಹಾತ್ಮ ಗಾಂಧಿಯವರ ಹತ್ಯೆಯ ಹಿಂದೆ ಆರ್​ಎಸ್​ಎಸ್​ ಕೈವಾಡವಿದೆ ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ ಎಂದು ಆರೋಪಿಸಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕಾರ್ಯಕರ್ತ ರಾಜೇಶ್ ಕುಂಟೆ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಈ ಸುಳ್ಳು ಹೇಳಿಕೆಯು ಆರ್‌ಎಸ್‌ಎಸ್‌ನ ಪ್ರತಿಷ್ಠೆಗೆ ಧಕ್ಕೆ ತಂದಿದೆ ಎಂದು ಕುಂಟೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 500 (ಮಾನನಷ್ಟ) ಅಡಿಯಲ್ಲಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದರು.

Leave a Reply

Your email address will not be published. Required fields are marked *

error: Content is protected !!