ಉದಯವಾಹಿನಿ, ಲುಧಿಯಾನ (ಪಂಜಾಬ್): ಫೆಬ್ರವರಿ 17ರಿಂದ ಫೆಬ್ರವರಿ 19 ರವರೆಗೆ ಇಲ್ಲಿನ ಕಿಲಾ ರಾಯ್‌ಪುರದಲ್ಲಿ ‘ಗ್ರಾಮೀಣ ಮಟ್ಟದ ಮಿನಿ ಒಲಿಂಪಿಕ್ಸ್’ ಆಯೋಜಿಸಲಾಗಿತ್ತು. ಈ ಬಾರಿ, ಈ ಮಿನಿ ಒಲಿಂಪಿಕ್ಸ್ನಲ್ಲಿ ಎತ್ತಿನ ಗಾಡಿ ರೇಸ್‌ಗಳು ಆಕರ್ಷಣೆಯ ಕೇಂದ್ರವಾಗಿತ್ತು. ರೈತರು ತಮ್ಮ ಇಷ್ಟದ ಎತ್ತು ಹಾಗೂ ಎತ್ತಿನ ಗಾಡಿಯ ಸ್ವಭಾವ ಮತ್ತು ವೇಗಕ್ಕೆ ಅನುಗುಣವಾಗಿ ವಿಭಿನ್ನ ರೀತಿಯ ಹೆಸರುಗಳನ್ನು ಇಟ್ಟಿದ್ದು ಗಮನ ಸೆಳೆಯಿತು.
ಭಾಗವಹಿಸಿದ್ದ ಒಂದು ಎತ್ತಿನಗಾಡಿಗೆ “ಬ್ರಹ್ಮ – ಅಸ್ತ್ರ” ಎಂದು, ಮತ್ತೊಂದು ಗಾಡಿಗೆ “ಅಫ್ಲಾಟೂನ್” ಎಂದು ಹೆಸರಿಟ್ಟಿದ್ದರು. ಕೋಪದ ಸ್ವಭಾವ ಹೊಂದಿರುವ ಮತ್ತೊಂದು ಜೋಡಿ ಎತ್ತುಗಳ ಬಂಡಿಗೆ “ವಾಲಿ” ಅಂತಲೂ ಇಟ್ಟಿದ್ದರು.ಹಾಗೆಯೇ ತಮ್ಮ ನೆಚ್ಚಿನ ಇನ್ನುಳಿದ ಹೋರಿಗಳ ಎತ್ತಿನ ಗಾಡಿಗಳಿಗೆ ಪ್ರಧಾನಿಯ ಹೆಸರು, ರಾಷ್ಟ್ರಪತಿಗಳ ಹೆಸರು, ಅದೇ ರೀತಿ, ಚೋಬರ್, ಬಾಜ್, ರಾಕೆಟ್ ಅಂತ ಎತ್ತುಗಳ ಓಟ, ನೋಟ, ಸ್ವಭಾವಕ್ಕೆ ಅನುಗುಣವಾಗಿ ಹೆಸರುಗಳನ್ನು ಇಟ್ಟಿದ್ದರು. 2015ರಲ್ಲಿ ಇದಕ್ಕೆ ನಿಷೇಧ ಹೇರಿದ್ದ ಸುಪ್ರೀಂಕೋರ್ಟ್: ಸುಮಾರು ಒಂದು ದಶಕಗಳ ಬಳಿಕ ಪಂಜಾಬ್‌ನ ಕಿಲಾ ರಾಯ್‌ಪುರದಲ್ಲಿ ಎತ್ತಿನ ಬಂಡಿ ಸ್ಪರ್ಧೆ ಏರ್ಪಡಿಸಿದ್ದರಿಂದ ರೋಚಕತೆ ತುಂಬಿತ್ತು. 2015ರಲ್ಲಿ, ಸುಪ್ರೀಂ ಕೋರ್ಟ್ ಈ ಎತ್ತಿನ ಬಂಡಿ ಸ್ಪರ್ಧೆಯನ್ನು ನಿಷೇಧಿಸಿತ್ತು. 2019ರಲ್ಲಿ, ಕ್ರೀಡಾ ಸಮಿತಿಯ ಮೇಲ್ಮನವಿಯ ಮೇರೆಗೆ, ಪಂಜಾಬ್ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿ ರಾಷ್ಟ್ರಪತಿಗಳಿಗೆ ಕಳುಹಿಸಲಾಗಿತ್ತು. ಅನುಮೋದನೆಗಾಗಿ 6 ವರ್ಷ ಬೇಕಾಯಿತು. ಅಂತಿಮವಾಗಿ, 2026ರಲ್ಲಿ ಎತ್ತಿನ ಬಂಡಿ ಸ್ಪರ್ಧೆಗೆ ಅನುಮತಿ ನೀಡಲಾಗಿದೆ.ಈ ಸ್ಪರ್ಧೆಗಳಲ್ಲಿ ಗೆದ್ದ ಎತ್ತುಗಳಿಗೆ ಭಾರಿ ಬಹುಮಾನ ಘೋಷಿಸಲಾಗಿದೆ. ಮೊದಲ ಬಹುಮಾನ 2 ಲಕ್ಷ ರೂ., ಎರಡನೇ ಬಹುಮಾನ 1.5 ಲಕ್ಷ ರೂ., ಮೂರನೇ ಬಹುಮಾನ 1,25,000 ರೂ., ನಾಲ್ಕನೇ ಬಹುಮಾನ 1 ಲಕ್ಷ ರೂ., ಮತ್ತು ಐದು, ಆರು, ಏಳನೇ ಮತ್ತು ಎಂಟನೇ ಸ್ಥಾನಗಳಲ್ಲಿ ಬಂದ ಎತ್ತುಗಳಿಗೂ ಬಹುಮಾನದ ಹಣ ಪಡೆದವು.
ಪಂಜಾಬ್ ವಿಧಾನಸಭಾ ಸ್ಪೀಕರ್ ಕುಲ್ತಾರ್ ಸಂಧ್ವಾನ್ ಮಾತನಾಡಿ, ಎಎಪಿ ಸರ್ಕಾರ ಎತ್ತಿನ ಗಾಡಿ ಓಟದ ಮೇಲಿನ ನಿಷೇಧವನ್ನು ತೆಗೆದುಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರೆ, ಕಿಲಾ ರಾಯ್‌ಪುರದಲ್ಲಿ ನಡೆದ ಎತ್ತಿನ ಗಾಡಿ ಓಟವು ವಿಶೇಷ ಆಕರ್ಷಣೆಯಾಗಿತ್ತು ಎಂದು ಕ್ರೀಡಾಕೂಟದ ಸಂಘಟಕ ಸುರಿಂದರ್ ಪಾಲ್ ಸಿಂಗ್ ಗ್ರೆವಾಲ್ ಹೇಳಿದರು.ವಿಶೇಷ ತಳಿ ಸೇರಿದಂತೆ ಸುಮಾರು 71 ಜೋಡಿ ಎತ್ತುಗಳು ಎತ್ತಿನಗಾಡಿ ಓಟಗಳಲ್ಲಿ ಭಾಗಿಯಾಗಿದ್ದವು. ಸ್ಪರ್ಧೆಗಳನ್ನು ಬಹಳ ಪ್ರತಿಷ್ಠೆಯಿಂದ ನಡೆಸಲಾಯಿತು. ಹೋರಿಗಳ ಮೇಲೆ ಯಾವುದೇ ಕ್ರೌರ್ಯ ನಡೆಯದಂತೆ ನೋಡಿಕೊಳ್ಳಲು ವಿಶೇಷ ಮೇಲ್ವಿಚಾರಣಾ ತಂಡ ರಚಿಸಲಾಗಿತ್ತು. ಸ್ಪರ್ಧೆಯ 72 ಗಂಟೆಗಳ ಮೊದಲು ಹೋರಿಗಳಿಗೆ ವೈದ್ಯಕೀಯ ಫಿಟ್‌ನೆಸ್ ಪ್ರಮಾಣಪತ್ರ ಕಡ್ಡಾಯಗೊಳಿಸಲಾಗಿತ್ತು. ಸ್ಪರ್ಧೆಯಲ್ಲಿ ಭಾಗವಹಿಸುವ ಹೋರಿಯ ವಯಸ್ಸು ಮೂರು ವರ್ಷಗಳಿಗಿಂತ ಕಡಿಮೆ ಇರಬಾರದು ಎಂಬ ನಿಯಮ ಸೇರಿಸಲಾಗಿತ್ತು. ಗಾಯಗೊಂಡ ಮತ್ತು ಅನಾರೋಗ್ಯ ಪೀಡಿತ ಹೋರಿಗಳಿಗಾಗಿ ಕ್ರೀಡಾಂಗಣದಲ್ಲಿ ವಿಶೇಷ ಆಂಬ್ಯುಲೆನ್ಸ್ ಲಭ್ಯವಿತ್ತು.
