ಉದಯವಾಹಿನಿ, ನ್ಯೂಯಾರ್ಕ್, ಅಮೆರಿಕ: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಧಿಸಿದ್ದ ಸುಂಕಗಳಲ್ಲಿ ಕೆಲವನ್ನು ಆ ದೇಶದ ಅತ್ಯುನ್ನತ ನ್ಯಾಯಾಲಯ (ಸುಪ್ರೀಂ ಕೋರ್ಟ್) ರದ್ದುಗೊಳಿಸಿದೆ. ವಿಶ್ವದ ಬಹುತೇಕ ದೇಶಗಳ ಮೇಲೆ ಹೊಸ ಸುಂಕ ಹೇರುವಾಗ ಅಸ್ತಿತ್ವದಲ್ಲಿರುವ ಅಧಿಕಾರ ವ್ಯಾಪ್ತಿಯನ್ನು ಅವರು ಮೀರಿದ್ದಾರೆ ಎಂದು ಕೋರ್ಟ್ ಟೀಕಿಸಿದೆ.
ಟ್ರಂಪ್, ಕಳೆದ ವರ್ಷದಿಂದ ಹೊಸ ಸುಂಕಗಳ ಸರಣಿಯನ್ನು ಆರಂಭಿಸಿದ್ದರು. ಸುಪ್ರೀಂ ಕೋರ್ಟ್ನ ತೀರ್ಪಿನ ಹೊರತಾಗಿಯೂ, ಅನೇಕ ಸರಕುಗಳ ಮೇಲೆ ಹಳೆಯ ಸುಂಕ ಪದ್ಧತಿ ಜಾರಿಯಲ್ಲಿದೆ. ಆದಾಗ್ಯೂ, ಜಾಗತಿಕವಾಗಿ ಮುಂದಿನ 5 ತಿಂಗಳವರೆಗೆ ಶೇಕಡಾ 10 ರಷ್ಟು ಸುಂಕ ಜಾರಿಯಲ್ಲಿರಲಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಅಧಿಕಾರ ವ್ಯಾಪ್ತಿ ಮೀರಿದ ಟ್ರಂಪ್ : 6:3ರ ಬಹುಮತದೊಂದಿಗೆ ಟ್ರಂಪ್ ವಿರುದ್ಧ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್, 1977 ರ ಅಂತಾರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆ ಅಥವಾ IEEPA ಬಳಸಿ ಟ್ರಂಪ್ ಜಾರಿಗೆ ತಂದ ಸುಂಕಗಳನ್ನು ರದ್ದುಗೊಳಿಸಲಾಗುತ್ತಿದೆ. ಅಧ್ಯಕ್ಷರು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ವಿದೇಶಗಳ ಮೇಲೆ ಸುಂಕ ವಿಧಿಸಿದ್ದಾರೆ. ಸುಂಕ ಹೇರಲು ಸಂಸತ್ತಿಗೆ ಮಾತ್ರ ಅಧಿಕಾರವಿದೆ, ಅಧ್ಯಕ್ಷರಿಗಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಿದೆ.
ರದ್ದಾಗ ಸುಂಕಗಳು, ಚಾಲ್ತಿಯಲ್ಲಿರುವ ಟ್ಯಾರಿಫ್: ಡೊನಾಲ್ಡ್ ಟ್ರಂಪ್ IEEPA ಕಾನೂನು ಬಳಸಿ ಹೇರಿದ್ದ ಸುಂಕಗಳನ್ನು ಸುಪ್ರೀಂ ಕೋರ್ಟ್ ಈಗ ರದ್ದು ಮಾಡಿದೆ. ಅವುಗಳು ಯಾವುವು ಮತ್ತು ಈಗಲೂ ಅಸ್ತಿತ್ವದಲ್ಲಿರುವ ಇತರ ಸುಂಕಗಳ ಮಾಹಿತಿ ಇಲ್ಲಿವೆ.
‘ಲಿಬರೇಷನ್ ಡೇ’ ಟ್ಯಾರಿಫ್ಸ್: ಕಳೆದ ವರ್ಷ ವಿಶ್ವದ ಬಹುತೇಕ ದೇಶಗಳ ಮೇಲೆ ಆಮದು ತೆರಿಗೆಗಳನ್ನು ವಿಧಿಸಲು ಟ್ರಂಪ್ IEEPA ಕಾಯ್ದೆಯನ್ನು ಬಳಸಿದರು. ಏಪ್ರಿಲ್ 2ರಂದು ಲಿಬರೇಷನ್ ಡೇ ಎಂದು ಕರೆದ ಅವರು ವಿದೇಶಗಳ ಸರಕುಗಳ ಮೇಲೆ ಕನಿಷ್ಠ 50ರಷ್ಟು ರೆಸಿಪ್ರೋಕಲ್ ಸುಂಕಗಳನ್ನು ವಿಧಿಸಿದರು. ಬಹುತೇಕ ಎಲ್ಲ ದೇಶಗಳಿಗೆ ಮೂಲ ಟ್ಯಾರಿಫ್ 10 ಪ್ರತಿಶತದಷ್ಟಿತ್ತು.
ಏಪ್ರಿಲ್ ಆರಂಭದಲ್ಲಿ ಶೇ 10ರಷ್ಟು ತೆರಿಗೆಯನ್ನು ಜಾರಿಗೆ ತರಲಾಯಿತು. ಆದರೆ, ಲಿಬರೇಷನ್ ಡೇ ಭಾಗವಾಗಿ ಘೋಷಿಸಿದ ಸುಂಕಗಳಲ್ಲಿ ಹೆಚ್ಚಿನವು ತಕ್ಷಣಕ್ಕೆ ಜಾರಿಗೆ ಬರಲಿಲ್ಲ. ಕಾಲಾನಂತರದಲ್ಲಿ ಅವುಗಳನ್ನು ಪರಿಷ್ಕರಿಸಿ (ವ್ಯಾಪಾರ ಒಪ್ಪಂದಗಳ ನಂತರ) ಆಗಸ್ಟ್ 7 ರಿಂದ ಜಾರಿಗೆ ತರಲಾಯಿತು.
ದಕ್ಷಿಣ ಕೊರಿಯಾ, ಜಪಾನ್ ಮತ್ತು ಯುರೋಪಿಯನ್ ಒಕ್ಕೂಟಗಳ ಮೇಲೆ ಈ ಲಿಬರೇಷನ್ ಡೇ ಸುಂಕಗಳನ್ನು ಹೇರಲಾಯಿತು. ಇದರಿಂದ ಎಲೆಕ್ಟ್ರಾನಿಕ್ಸ್, ಕಾರುಗಳು ಮತ್ತು ಕಾರು ಬಿಡಿಭಾಗಗಳು ಮತ್ತು ಔಷಧಗಳಂತಹ ಹಲವಾರು ಉತ್ಪನ್ನಗಳನ್ನು ಅಮೆರಿಕಕ್ಕೆ ರಫ್ತು ಮಾಡುವುದಕ್ಕೆ ಈ ತೆರಿಗೆ ಬಿದ್ದಿತು. ವ್ಯಾಪಾರ ಮಾತುಕತೆಗಳ ನಂತರ, ಯುರೋಪಿಯನ್ ಯೂನಿಯನ್, ಜಪಾನ್ ಮತ್ತು ದಕ್ಷಿಣ ಕೊರಿಯಾದ ಮೇಲೆ ಶೇಕಡಾ 15ರಷ್ಟು ಟ್ಯಾರಿಫ್ ವಿಧಿಸಿದರು. ನಂತದ ದಕ್ಷಿಣ ಕೊರಿಯಾದ ಉತ್ಪನ್ನಗಳ ಮೇಲಿನ ಸುಂಕವನ್ನು ಶೇ 25 ಕ್ಕೆ ಹೆಚ್ಚಿಸುವುದಾಗಿ ಟ್ರಂಪ್ ಬೆದರಿಕೆ ಹಾಕಿದರು. ಇದರಂತೆ ಹಲವು ದೇಶಗಳ ಮೇಲೆ ಇದೇ ಬೆದರಿಕೆಯ ತಂತ್ರ ಅನುಸರಿಸಿದರು.
