ಉದಯವಾಹಿನಿ, ಬೆಂಗಳೂರು: ನಗರದ ರಸ್ತೆ ಅಭಿವೃದ್ಧಿಗೆ 5,065 ಕೋಟಿ ರೂ. ವೆಚ್ಚ ಮಾಡಲಾಗಿದ್ದು, ಏಪ್ರಿಲ್ ಅಂತ್ಯದ ವೇಳೆಗೆ ಬೆಂಗಳೂರಿನ ಎಲ್ಲಾ ರಸ್ತೆಗಳ ಬ್ಲ್ಯಾಕ್‌ ಟಾಪಿಂಗ್ ಹಾಗೂ ವೈಟ್ ಟಾಪಿಂಗ್ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ತಿಳಿಸಿದರು.ಜಿಬಿಎ ಕಚೇರಿಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಕೆ ಶಿವಕುಮಾರ್ ಅವರು ಮಾಧ್ಯಮಗಳನ್ನ ಉದ್ದೇಶಿಸಿ ಮಾತನಾಡಿದರು.

ಇಂದಿನ ಸಭೆಯಲ್ಲಿ ಜಿಬಿಎ ಚಿಹ್ನೆಯನ್ನ ಅಂತಿಮಗೊಳಿಸಲಾಗಿದ್ದು, ಆಯುಕ್ತರು ಅದನ್ನು ಬಿಡುಗಡೆ ಮಾಡಲಿದ್ದಾರೆ. ಇನ್ನು ಬೆಂಗಳೂರು ದಕ್ಷಿಣ ಪಾಲಿಕೆಯಲ್ಲಿ ಮಾದರಿ ಕಟ್ಟಡ ಅಂತಿಮಗೊಳಿಸಿದ್ದೇವೆ. ಆದಷ್ಟು ಬೇಗ ಟೆಂಡರ್ ಕರೆದು ಗುದ್ದಲಿ ಪೂಜೆ ಮಾಡಿ ಕೆಲಸ ಆರಂಭಿಸಬೇಕು ಎಂದು ಸೂಚಿಸಿದ್ದೇನೆ. ಯಾವ ಶಾಸಕರು, ಮಂತ್ರಿ ಬರಲಿ ಎಂದು ಕಾಯಬೇಡಿ, ನಿಮ್ಮ ಪಾಡಿಗೆ ನಿಮ್ಮ ಕೆಲಸ ಆರಂಭಿಸಿ, ಆಮೇಲೆ ಅವರನ್ನ ಕರೆದುಕೊಂಡು ಹೋಗಿ ಪೂಜೆ ಮಾಡಿಸಿ ಎಂದು ಹೇಳಿದ್ದೇನೆ. ಪ್ರತಿನಿತ್ಯ ಕಾಮಗಾರಿ ಪ್ರಗತಿ ಫೋಟೋ ಸಮೇತ ಮಾಹಿತಿ ರವಾನಿಸಬೇಕು ಎಂದು ಸೂಚಿಸಿದ್ದು, ಅಧಿಕಾರಿಗಳಿಗೆ ಹೊಣೆಗಾರಿಕೆ ನಿಗದಿಪಡಿಸಿದ್ದೇನೆ ಎಂದು ಮಾಹಿತಿ ನೀಡಿದರು.

2 ಪ್ಯಾಕೇಜ್‌ಗಳಲ್ಲಿ ಹೊರ ವರ್ತುಲ ರಸ್ತೆಗೆ 420 ಕೋಟಿ ರೂ., ವಾರ್ಡ್ ರಸ್ತೆಗಳಿಗೆ 82 ಪ್ಯಾಕೇಜ್ ಗಳಲ್ಲಿ 1,000 ಕೋಟಿ ರೂ., ಕರ್ನಾಟಕ ಸರ್ಕಾರದ ಅನುದಾನದ 81 ಪ್ಯಾಕೇಜ್ ಗಳಲ್ಲಿ 1,241 ಕೋಟಿ ರೂ. ಸೇರಿದಂತೆ 2,671 ಕೋಟಿ ರೂ. ಮೊತ್ತದ ರಸ್ತೆ ಅಭಿವೃದ್ಧಿ ಕೆಲಸ ಪ್ರಾರಂಭವಾಗಿದೆ. ಈ ಕಾಮಗಾರಿ ಕೆಲಸಗಳು ತ್ವರಿತವಾಗಿ ಮಾಡಬೇಕು, ಮಳೆ ಆರಂಭವಾಗುವ ಮುನ್ನ ಎಲ್ಲಾ ಕೆಲಸ ಮುಗಿಸಬೇಕು ಎಂದು ಸೂಚಿಸಿದ್ದೇನೆ ಎಂದರು.

Leave a Reply

Your email address will not be published. Required fields are marked *

error: Content is protected !!