ಉದಯವಾಹಿನಿ, ಡೆಹ್ರಾಡೂನ್ (ಉತ್ತರಾಖಂಡ): ಕೇಂದ್ರ ಸರ್ಕಾರದ ಜೊತೆಗೂಡಿ ಉತ್ತರಾಖಂಡ ರಾಜ್ಯ ಸರ್ಕಾರವು ಯೋಗ ಮತ್ತು ಪಂಚಕರ್ಮವನ್ನು ಒಳಗೊಂಡಿರುವ ಆಯುಷ್ ಪದ್ಧತಿಯನ್ನು ಹಾಗೂ ಆಯುರ್ವೇದ ಔಷಧಿಗಳ ಬಳಕೆಗೆ ಉತ್ತೇಜಿಸುತ್ತಿದೆ. ಆದಿಕಾಲದಿಂದ ಬಳಕೆಯಲ್ಲಿರುವ ಈ ಔಷಧಿಗಳನ್ನು ಹೆಚ್ಚಿನ ಜನರು ಬಳಸುತ್ತಿದ್ದಾರೆ. ಇದರ ಮಧ್ಯೆ ಜೀವ ಕಾಪಾಡುವ ಔಷಧಿಗಳ ಕಲಬೆರಕೆ ಪ್ರಕರಣಗಳು ಸಹ ಬೆಳಕಿಗೆ ಬಂದಿವೆ.
ರಾಜ್ಯ ರಾಜಧಾನಿ ಡೆಹ್ರಾಡೂನ್‌ನಲ್ಲಿ ನಕಲಿ ಆಯುರ್ವೇದ ಚಿಕಿತ್ಸಾಲಯ ಮತ್ತು ಅಕ್ರಮ ಔಷಧ ಕಾರ್ಖಾನೆ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವುದು ಇದೀಗ ಪತ್ತೆಯಾಗಿದೆ.

ಡೆಹ್ರಾಡೂನ್‌ನ ಸಹಸ್ರಧಾರ ರಸ್ತೆಯಲ್ಲಿರುವ ತ್ರಿಫಲ ಗಿಡಮೂಲಿಕೆ ಕೇಂದ್ರವು ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿತ್ತು. ಇದು ದೇಶಾದ್ಯಂತ ಆನ್‌ಲೈನ್‌ನಲ್ಲಿ ಔಷಧಿಗಳನ್ನು ಪೂರೈಸುತ್ತದೆ. ಈ ಕೇಂದ್ರದ ವಿರುದ್ಧ ದೂರುಗಳು ಕೇಳಿಬಂದಿದ್ದವು. ನಂತರ, ಕೇಂದ್ರ ಆಯುಷ್ ಸಚಿವಾಲಯವು ಕೆಲವು ದಿನಗಳ ಹಿಂದೆ ರಾಜ್ಯ ಆಯುಷ್ ಇಲಾಖೆಯಿಂದ ಮಾಹಿತಿ ಕೋರಿತ್ತು.

ದೂರುಗಳು ಮತ್ತು ರಾಜ್ಯ ಸರ್ಕಾರ ನೀಡಿದ ಮಾಹಿತಿಯ ಆಧಾರದ ಮೇಲೆ ಫೆಬ್ರವರಿ 20 ರಂದು ಕೇಂದ್ರ ಆಯುಷ್ ಇಲಾಖೆಯ ತಂಡವು ಈ ನಕಲಿ ಆಯುರ್ವೇದ ಚಿಕಿತ್ಸಾಲಯ ಮತ್ತು ಔಷಧ ಕಾರ್ಖಾನೆಯ ಮೇಲೆ ದಾಳಿ ನಡೆಸಿತು. ಈ ವೇಳೆ ತಂಡವು ದೊಡ್ಡ ಪ್ರಮಾಣದ ಅಕ್ರಮ ಔಷಧಿ, 1 ಕೋಟಿ ರೂಪಾಯಿ ಹಣವನ್ನು ವಶಪಡಿಸಿಕೊಂಡಿದೆ.ವರ್ಷಗಳಿಂದ ನಡೆಯುತ್ತಿರುವ ವಂಚನೆ: ದಾಳಿಯ ಬಳಿಕ ದಾಖಲೆ ಪರಿಶೀಲನೆ ವೇಳೆ, ಈ ಚಿಕಿತ್ಸಾಲಯದ ನಿರ್ವಾಹಕರು ಆಯುರ್ವೇದ ಪದ್ಧತಿಯಲ್ಲಿ ಮಾನ್ಯವಾದ ಪದವಿ ಹೊಂದಿರಲಿಲ್ಲ. ಆದಾಗ್ಯೂ, ತಮ್ಮನ್ನು ನೋಂದಾಯಿತ ವೈದ್ಯ ಎಂದು ಬಿಂಬಿಸಿಕೊಂಡಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

ಈತ ಮಧುಮೇಹ ಮತ್ತು ರಕ್ತದೊತ್ತಡದಂತಹ ಗಂಭೀರ ಕಾಯಿಲೆಗಳಿಗೆ ವೈದ್ಯಕೀಯ ಸಲಹೆ ನೀಡುತ್ತಿದ್ದರು. ಕಳೆದ 5 ವರ್ಷಗಳಿಂದ ಅವರು ದೇಶಾದ್ಯಂತ ಕಲಬೆರಕೆ ಔಷಧಿಗಳನ್ನು ಅಕ್ರಮವಾಗಿ ಪೂರೈಸುತ್ತಿದ್ದರು. ಕೇಂದ್ರ ಆಯುಷ್ ಸಚಿವಾಲಯದ ತಂಡವು ಈಗ ಔಷಧಿಗಳ ಮಾದರಿಗಳನ್ನು ವಶಕ್ಕೆ ಪಡೆದಿದೆ. ಇವನ್ನು ಇತರ ವೈದ್ಯಕೀಯ ಔಷಧಿಗಳೊಂದಿಗೆ ಕಲಬೆರಕೆ ಮಾಡಿರಬಹುದು ಎಂಬ ಆತಂಕ ವ್ಯಕ್ತವಾಗಿದೆ. ರಾಜ್ಯ ಆಯುರ್ವೇದ ಇಲಾಖೆ ಎಲ್ಲಾ ಔಷಧಿಗಳನ್ನು ವಶಪಡಿಸಿಕೊಂಡು ಕಾರ್ಖಾನೆಗೆ ಬೀಗ ಹಾಕಿದೆ.

ಕಾರ್ಖಾನೆಯ ಮಾಲೀಕರು ಅಧಿಕೃತ ಮಾರಾಟ ಪರವಾನಗಿ ಇಲ್ಲದ ಕಂಪನಿಗಳಿಂದ ಹೋಮಿಯೋಪತಿ ಔಷಧಿಗಳನ್ನು ಸಹ ಮಾರಾಟ ಮಾಡುತ್ತಿರುವುದನ್ನು ತನಿಖಾಧಿಕಾರಿಗಳು ಪತ್ತೆ ಮಾಡಿದ್ದಾರೆ. ಈ ನಕಲಿ ವೈದ್ಯ ಅಕ್ರಮವಾಗಿ ಔಷಧಿಗಳನ್ನು ಪೂರೈಸುತ್ತಿದ್ದಾರೆ ಎಂಬ ದೂರು ಕೇಂದ್ರ ಆಯುಷ್​ ಇಲಾಖೆಗೆ ಹೋಗಿತ್ತು. ಬಳಿಕ ಇಲಾಖಾಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ತನಿಖೆ ನಡೆಸಲು ಸೂಚಿಸಿತ್ತು. ಇದೀಗ, ಕೇಂದ್ರ ತಂಡವೇ ದಾಳಿ ನಡೆಸಿದೆ ಎಂದು ಉತ್ತರಾಖಂಡ ಆಯುರ್ವೇದ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಸ್. ನಪಾಲ್ಚಲ್ ತಿಳಿಸಿದರು. ರೋಗಿ ವೇಷದಲ್ಲಿ ಅಧಿಕಾರಿಗಳ ದಾಳಿ: ಔಷಧ ನಿರೀಕ್ಷಕರು ರೋಗಿಗಳಂತೆ ನಟಿಸಿ ನಕಲಿ ವೈದ್ಯರ ಚಿಕಿತ್ಸಾಲಯಕ್ಕೆ ಹೋದರು. ಕ್ಲಿನಿಕ್ ನಿರ್ವಾಹಕರು ಅವರಿಗೆ ಸುಮಾರು 7 ಸಾವಿರ ರೂಪಾಯಿ ಮೌಲ್ಯದ ಔಷಧಿಗಳನ್ನು ನೀಡಿದರು. ಈ ವೇಳೆ ಔಷಧ ನಿರೀಕ್ಷಕರು ಅವರ ವೈದ್ಯ ಪದವಿಯ ಬಗ್ಗೆ ಮಾಹಿತಿ ಕೇಳಿದಾಗ, ದಾಖಲೆ ಇಲ್ಲದಿರುವುದು ಗೊತ್ತಾಗಿದೆ. ನಂತರ, ತಂಡದ ಇತರ ಸದಸ್ಯರಿಗೆ ಮಾಹಿತಿ ನೀಡಿ ದಾಳಿ ನಡೆಸಲಾಯಿತು. ಕ್ಲಿನಿಕ್ ಒಳಗೆ ಗ್ರೈಂಡರ್, ಮಿಕ್ಸರ್ ಮತ್ತು ಹಲವಾರು ಔಷಧ ಲೇಬಲ್‌ಗಳು ಸಹ ಕಂಡುಬಂದಿವೆ. ತಮ್ಮದೇ ಆದ ಲೇಬಲ್‌ಗಳನ್ನು ಬಳಸಿಕೊಂಡು ಔಷಧಿಗಳನ್ನು ತಯಾರಿಸಿ ಸರಬರಾಜು ಮಾಡುತ್ತಿದ್ದರು ಎಂದು ಅವರು ಮಾಹಿತಿ ನೀಡಿದರು.

Leave a Reply

Your email address will not be published. Required fields are marked *

error: Content is protected !!