ಉದಯವಾಹಿನಿ, ಶ್ರೀರಾಂಪುರ(ಪಶ್ಚಿಮ ಬಂಗಾಳ): ಬಿಎಲ್‌ಒವೊಬ್ಬರು ಎಸ್‌ಐಆರ್ ದಾಖಲೆಗಳಿಂದ ತುಂಬಿದ್ದ ಬ್ಯಾಗ್ ಅನ್ನು ಲಾಂಚ್ನಲ್ಲೇ ಬಿಟ್ಟು ಗಂಗಾ ನದಿಗೆ ಹಾರಿದ ಘಟನೆ ಶನಿವಾರ ಹೂಗ್ಲಿಯ ಸೆರಾಂಪೋರ್‌ನಲ್ಲಿ ನಡೆದಿದೆ. ಲಾಂಚ್ ಸಿಬ್ಬಂದಿ ಬಿಎಲ್‌ಒ ಮೊಹಮ್ಮದ್ ಕಯಾಮುದ್ದೀನ್ ಎಂಬುವರನ್ನು ರಕ್ಷಿಸಿದ್ದಾರೆ.
ರಕ್ಷಣೆಯ ನಂತರ ಬಿಎಲ್‌ಒ ಮೊಹಮ್ಮದ್ ಕಯಾಮುದ್ದೀನ್ ಅವರನ್ನು ಸೆರಾಂಪುರ್ ಠಾಣೆಯ ಪೊಲೀಸರು ಆಸ್ಪತ್ರೆಗೆ ಕರೆದೊಯ್ದರು. ಪ್ರಸ್ತುತ ಆರೋಗ್ಯವಾಗಿದ್ದಾರೆ. ಪೊಲೀಸರು ಎಸ್‌ಐಆರ್‌ನ ದಾಖಲೆಗಳಿಂದ ತುಂಬಿದ ಚೀಲ ಮತ್ತು ಅವರ ಮೊಬೈಲ್ ಅನ್ನು ವಶಪಡಿಸಿಕೊಂಡಿದ್ದಾರೆ. ಎಸ್‌ಐಆರ್‌ನ ತಾಂತ್ರಿಕ ಕೆಲಸವನ್ನು ಮಾಡಲು ಸಾಧ್ಯವಾಗದ ಕಾರಣ ಗಂಗಾ ನದಿಗೆ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಗಿ ಬಿಎಲ್‌ಒ ಮೊಹಮ್ಮದ್ ಕಯಾಮುದ್ದೀನ್ ಪೊಲೀಸರ ಬಳಿ ಹೇಳಿಕೊಂಡಿದ್ದಾರೆ.ತಿಟಗಢದ ನಿವಾಸಿಯಾದ ಮೊಹಮ್ಮದ್ ಕಯಾಮುದ್ದೀನ್ ಅವರು ಕಂಚರಪರ ಬಿಎನ್ ಪ್ರೌಢಶಾಲೆಯ ಹಂಗಾಮಿ ಮುಖ್ಯೋಪಾಧ್ಯಾಯರಾಗಿದ್ದಾರೆ.
“ಎಸ್‌ಐಆರ್ ಕೆಲಸದ ಹೊರೆ ತಡೆದುಕೊಳ್ಳಲು ನನಗೆ ಸಾಧ್ಯವಾಗಲಿಲ್ಲ. ಶನಿವಾರ ಫಾರ್ಮ್ ಅನ್ನು ಅಪ್‌ಲೋಡ್ ಮಾಡಲು ಕೊನೆಯ ದಿನಾಂಕವಾಗಿತ್ತು. ಆದರೆ ನಾನು ಆ ಕೆಲಸವನ್ನು ಪೂರ್ಣಗೊಳಿಸಿಲ್ಲ. ಮತದಾರರಿಗೆ ನಾನು ಏನೆಂದು ಉತ್ತರಿಸಲಿ?, ನನಗೆ ತುಂಬಾ ಬೇಸರವಾಗುತ್ತಿದೆ. ನನಗೆ ತಾಂತ್ರಿಕ ಜ್ಞಾನ ಇಲ್ಲ. ಅದಕ್ಕಾಗಿಯೇ ಕೆಲಸ ಮಾಡುವುದು ಕಷ್ಟಕರವಾಗಿತ್ತು. ಆಯೋಗವು ನನಗೆ ಸಹಾಯಕರನ್ನು ನೀಡಿದ್ದರೂ, ನನಗೆ ಅದನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ. ಎಸ್‌ಐಆರ್ ಕೆಲಸ ಮಾಡುವಾಗ ದಿನದಿಂದ ದಿನಕ್ಕೆ ನಾನು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಶನಿವಾರ ಬೆಳಗ್ಗೆ, ನಾನು ಬ್ಯಾರಕ್‌ಪೋರ್‌ನಿಂದ ಸೆರಾಂಪೋರ್‌ಗೆ ಬಂದೆ. ನಂತರ, ಸೆರಾಂಪೋರ್‌ನಿಂದ ಬ್ಯಾರಕ್‌ಪೋರ್‌ಗೆ ಹೋಗುವಾಗ, ನಾನು ಗಂಗಾ ನದಿಗೆ ಹಾರಿದೆ” ಎಂದು ಬಿಎಲ್‌ಒ ಮೊಹಮ್ಮದ್ ಖಯಾಮುದ್ದೀನ್ ಹೇಳಿದ್ದಾರೆ.”ಪ್ರಯಾಣಿಕನೊಬ್ಬ ಇದ್ದಕ್ಕಿದ್ದಂತೆ ಗಂಗಾ ನದಿಗೆ ಹಾರಿದನು. ನಾವು ಅವರನ್ನು ರಕ್ಷಿಸಿದೆವು. ನಂತರ, ಆತ ಬಿಎಲ್‌ಒ ಎಂದು ತಿಳಿಯಿತು. ಪೊಲೀಸರು ಮತ್ತು ಅವರ ಕುಟುಂಬಕ್ಕೆ ಮಾಹಿತಿ ನೀಡಲಾಯಿತು” ಎಂದು ಫೆರ್ರಿ ಘಾಟ್ ಕೆಲಸಗಾರ ಮೊಹಮ್ಮದ್ ಬಬ್ಲು ತಿಳಿಸಿದ್ದಾರೆ.
