ಉದಯವಾಹಿನಿ, ಭುವನೇಶ್ವರ (ಒಡಿಶಾ): ಭಾರತೀಯ ಕಂದಾಯ ಸೇವೆಯ (ಐಆರ್​ಎಸ್​) ಹಿರಿಯ ಅಧಿಕಾರಿಯೊಬ್ಬರು ತಮ್ಮ ಸರ್ಕಾರಿ ನಿವಾಸಕ್ಕೆ ಕರೆಸಿಕೊಂಡು ಯುವತಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪ ಕೇಳಿಬಂದಿದೆ. ಈ ಬಗ್ಗೆ ಯುವತಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.ಆರೋಪಿಯನ್ನು ಭುವನೇಶ್ವರದ ಜಿಎಸ್‌ಟಿ, ಕೇಂದ್ರ ಅಬಕಾರಿ ಮತ್ತು ಕಸ್ಟಮ್ಸ್ ವಲಯದ ಹಿರಿಯ ಐಆರ್‌ಎಸ್ ಅಧಿಕಾರಿ ಎಂದು ಗುರುತಿಸಲಾಗಿದೆ. ಯುವತಿಯ ಖಾಸಗಿ ಫೋಟೋಗಳನ್ನೂ ಈತ ವೈರಲ್​ ಮಾಡಿದ್ದಾನೆ ಎಂಬ ಆರೋಪವನ್ನೂ ಹೊರಿಸಲಾಗಿದೆ.

ಯುವತಿಯು, ಫೆಬ್ರುವರಿ 20 ರಂದು ಶಹೀದ್‌ನಗರ ಪೊಲೀಸ್ ಠಾಣೆಯಲ್ಲಿ ತನ್ನ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂದು ದೂರು ನೀಡಿದ್ದಾರೆ. ಪೊಲೀಸರು ಭಾರತೀಯ ನಾಗರಿಕ ದಂಡ ಸಂಹಿತೆಯ (BNSS) ಸೆಕ್ಷನ್ 180 ರ ಅಡಿಯಲ್ಲಿ ಆಕೆಯ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಆರೋಪಿ ಅಧಿಕಾರಿಯನ್ನು ಬಂಧಿಸಲು ತಂಡವನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೂರಿನಲ್ಲಿ ಏನಿದೆ? ಸಂತ್ರಸ್ತೆಯ ದೂರಿನ ಪ್ರಕಾರ, ಹಿರಿಯ ಐಆರ್‌ಎಸ್ ಅಧಿಕಾರಿ ತಮ್ಮ ಕುಟುಂಬದೊಂದಿಗೆ ಸತ್ಸಂಗ ಬಿಹಾರದ ಸರ್ಕಾರಿ ನಿವಾಸದಲ್ಲಿ ವಾಸಿಸುತ್ತಿದ್ದಾರೆ. ಜನವರಿ 15 ರಂದು ಅಧಿಕಾರಿಯು ತಮ್ಮ ಸಂಬಂಧಿಯೊಬ್ಬರ ಮೂಲಕ ನನ್ನನ್ನು ಅಲ್ಲಿಗೆ ಕರೆಸಿಕೊಂಡರು. ಆ ದಿನ, ನನ್ನನ್ನು ಕರೆದೊಯ್ದ ವ್ಯಕ್ತಿಯ ಸಹೋದರಿ ಮತ್ತು ಐಆರ್‌ಎಸ್ ಅಧಿಕಾರಿಯ ಪತ್ನಿ ಮಾರುಕಟ್ಟೆಗೆ ಹೋಗಿದ್ದರು. ಐಆರ್‌ಎಸ್ ಅಧಿಕಾರಿ ಮತ್ತು ನಾನು ಮನೆಯಲ್ಲಿದ್ದೆವು. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಬಳಸಿಕೊಂಡ ಅಧಿಕಾರಿ ನನಗೆ ಅಶ್ಲೀಲ ಫೋಟೋಗಳು ಮತ್ತು ವಿಡಿಯೋಗಳನ್ನು ತೋರಿಸಿದ. ನಂತರ, ಬಲವಂತವಾಗಿ ದೈಹಿಕ ಸಂಭೋಗ ನಡೆಸಿದ ಎಂದು ದೂರಿದ್ದಾಳೆ.
ಈ ಕುರಿತು ದೂರು ನೀಡುವುದಾಗಿ ಹೇಳಿದಾಗ, ಆರೋಪಿ ಅಧಿಕಾರಿ ನನಗೆ ಬೆದರಿಕೆ ಹಾಕಿದ. ಗೌಪ್ಯವಾಗಿ ತೆಗೆದ ಫೋಟೋ, ವಿಡಿಯೋವನ್ನು ವೈರಲ್ ಮಾಡುವುದಾಗಿ ಹೇಳಿದ. ಇದರಿಂದಾಗಿ ನಾನು ಮೊದಲು ದೂರು ನೀಡಲು ಹಿಂದೇಟು ಹಾಕಿದೆ. ಇಷ್ಟಕ್ಕೆ ಬಿಡದ ಆರೋಪಿ ಅಧಿಕಾರಿ, ನನಗೆ ಪದೇ ಪದೆ ಕರೆ ಮಾಡುತ್ತಿದ್ದ. ದೈಹಿಕ ಸಂಪರ್ಕ ಬೆಳೆಸದೇ ಹೋದಲ್ಲಿ ನಗ್ನ ಫೋಟೋಗಳು ಮತ್ತು ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ. ಕೆಲವು ಫೋಟೋಗಳನ್ನೂ ಆತ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದಾನೆ ಎಂದು ದೂರಿನಲ್ಲಿ ಯುವತಿ ಉಲ್ಲೇಖಿಸಿದ್ದಾಳೆ.
ಅಧಿಕಾರಿಯ ಕಿರುಕುಳ ತಾಳಲಾರದೆ ಫೆ. 20 ರಂದು ಶಹೀದ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಪ್ರಕರಣದ ಕುರಿತು ಪೊಲೀಸ್ ಅಧಿಕಾರಿಗಳು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!