ಉದಯವಾಹಿನಿ, ಜಬಲ್ಪುರ(ಮಧ್ಯಪ್ರದೇಶ): ದೇಶದಲ್ಲಿ ಉಗ್ರ ದಾಳಿ ನಡೆಸಲು ಸಂಚು ರೂಪಿಸಿರುವ ಆರೋಪದ ಮೇಲೆ ಬಾಂಗ್ಲಾದೇಶ ಮೂಲದ ಶಂಕಿತ ದಾಳಿಕೋರರನ್ನು ದೆಹಲಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ನಡುವೆ, ಅಕ್ರಮವಾಗಿ ದೇಶದಲ್ಲಿ ವಾಸವಿದ್ದ ಅಫ್ಘಾನಿಸ್ತಾನದ ಐವರು ಪ್ರಜೆಗಳನ್ನಉ ಮಧ್ಯಪ್ರದೇಶದ ಭಯೋತ್ಪಾದಕ ನಿಗ್ರಹ ದಳ ಬಂಧಿಸಿದೆ. ನಕಲಿ ದಾಖಲೆ ಮತ್ತು ಪಾಸ್‌ಪೋರ್ಟ್‌ಗಳನ್ನು ಸೃಷ್ಟಿಸಿಕೊಂಡು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ವಾಸವಿದ್ದ ಐದು ಅಫ್ಘಾನ್ ಪ್ರಜೆಗಳನ್ನು ಜಬಲ್ಪುರದ ಭಯೋತ್ಪಾದನಾ ನಿಗ್ರಹ ದಳ ಇಂದು ಬಂಧಿಸಿದೆ. ಇಲ್ಲಿನ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿದೆ.
ಬಂಧಿತ ಅಫ್ಘನ್ಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದರು. 2025ರ ಆಗಸ್ಟ್‌ನಲ್ಲಿ ಇದೇ ತಂಡವು ಇಲ್ಲಿನ ಓಮ್ಟಿ ಪ್ರದೇಶದಿಂದ ಶೋಭತ್ ಖಾನ್ ಎಂಬ ಅಫ್ಘನ್ ಪ್ರಜೆಯನ್ನು ಬಂಧಿಸಿತ್ತು. ಈತ ನೀಡಿದ ಮಾಹಿತಿಯ ಮೇರೆಗೆ ಈಗ ಮತ್ತೆ ಐವರನ್ನು ಎಟಿಎಸ್ ಬಂಧಿಸಿದೆ.
ಅಪ್ಘನ್ ಪ್ರಜೆಗಳ ಬಗ್ಗೆ ಮಾಹಿತಿ ಸಿಕ್ಕಿದ್ದು ಹೀಗೆ..: 2025ರ ಆಗಸ್ಟ್‌ನಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಅಫ್ಘನ್ ಪ್ರಜೆ ಶೋಭತ್ ಖಾನ್ ಎಂಬಾತ ಎಕೆ-47 ಹೊಂದಿರುವ ಪೋಸ್ಟರ್ ಹಂಚಿಕೊಂಡಿದ್ದ. ಇದರ ಜಾಡು ಪತ್ತೆ ಹಚ್ಚಿದ ಭಯೋತ್ಪಾದನಾ ನಿಗ್ರಹ ದಳವು ಜಬಲ್ಪುರದಲ್ಲಿ ಆತನನ್ನು ಬಂಧಿಸಿತು. ಬಂಧಿತ ಶೋಭತ್ ಖಾನ್ ಜಬಲ್ಪುರದ ಓಮ್ಟಿ ಪ್ರದೇಶದ ಬಳಿ ವಾಸಿಸುತ್ತಿದ್ದ. ಆತನ ಬಳಿ ನಕಲಿ ಪಾಸ್‌ಪೋರ್ಟ್, ಇತರ ಖೊಟ್ಟಿ ದಾಖಲೆಗಳು ಸಿಕ್ಕಿದ್ದವು. ವಿಚಾರಣೆ ನಡೆಸಿದಾಗ, ಇತರ ಅಫ್ಘನ್ ಪ್ರಜೆಗಳು ಅಕ್ರಮವಾಗಿ ದೇಶದಲ್ಲಿ ನೆಲೆಸಿರುವ ಬಗ್ಗೆ ಆರೋಪಿ ಮಾಹಿತಿ ನೀಡಿದ್ದಾನೆ. ಶೋಭತ್ ಜೊತೆಗೆ ಈ ಪ್ರಕರಣದಲ್ಲಿ ದಿನೇಶ್ ಗರ್ಗ್, ಚಂದನ್ ಸಿಂಗ್ ಮತ್ತು ಮಹೇಂದ್ರ ಎಂಬ ಮೂವರನ್ನು ಬಂಧಿಸಲಾಗಿತ್ತು. ಈ ವ್ಯಕ್ತಿಗಳು ನಕಲಿ ದಾಖಲೆಗಳನ್ನು ನೀಡಿ ಪಾಸ್‌ಪೋರ್ಟ್‌ಗಳನ್ನು ಕೊಡಿಸುತ್ತಿದ್ದರು. ಹೀಗೆ, ನೂರಾರು ಪಾಸ್‌ಪೋರ್ಟ್‌ಗಳನ್ನು ಹಲವರಿಗೆ ನೀಡಿದ ಬಗ್ಗೆ ಮಾಹಿತಿ ಸಿಕ್ಕಿದೆ. ಇವೆಲ್ಲವೂ ಜಬಲ್‌ಪುರದ ಮೋತಿ ನಲಾ, ತಲಾಬ್ ಸದರ್ ಮತ್ತು ಉಪ್ರೈನ್‌ಗಂಜ್‌ನಲ್ಲಿ ವಿಳಾಸಗಳನ್ನು ಹೊಂದಿವೆ. ಬಂಧಿತರ ವಿಚಾರಣೆ ಮತ್ತು ಅವರು ನೀಡಿದ ಮಾಹಿತಿಯ ಆಧಾರದ ಮೇಲೆ, ಕೋಲ್ಕತ್ತಾದಲ್ಲಿ ಎಟಿಎಸ್ ವಶಕ್ಕೆ ಪಡೆದಿರುವ ಇನ್ನೂ ಐದು ಅಫ್ಘನ್ ಪ್ರಜೆಗಳ ಬಗ್ಗೆ ಮಾಹಿತಿ ಪಡೆದುಕೊಂಡಿದೆ.
ಕೋಲ್ಕತ್ತಾದಲ್ಲಿ ಬಂಧನ: ಮಧ್ಯಪ್ರದೇಶದ ಭಯೋತ್ಪಾದನಾ ನಿಗ್ರಹ ದಳವು ಕೋಲ್ಕತ್ತಾದ ಪೊಲೀಸ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ಅವರ ವಶದಲ್ಲಿದ್ದ ಅಕ್ರಮ ಅಫ್ಘನ್ ನಿವಾಸಿಗಳಾದ ಜಿಯಾ ಉಲ್ ರೆಹಮಾನ್, ಜಾಫರ್ ಖಾನ್, ಸುಲ್ತಾನ್ ಮೊಹಮ್ಮದ್, ರಜಾ ಖಾನ್ ಮತ್ತು ಸೈಯದ್ ಮೊಹಮ್ಮದ್ ಎಂಬಾತನನ್ನು ಬಂಧಿಸಿತು. ಇದರಲ್ಲಿ ಸುಲ್ತಾನ್ ಮೊಹಮ್ಮದ್ ಎಂಬಾತ 2018ರಲ್ಲಿ ವೈದ್ಯಕೀಯ ವೀಸಾದ ಮೇಲೆ ಭಾರತಕ್ಕೆ ಬಂದು, ಬಳಿಕ ಹಿಂತಿರುಗಿಲ್ಲ. ಉಳಿದ ನಾಲ್ವರು ಅಕ್ರಮವಾಗಿ ದೇಶ ಪ್ರವೇಶಿಸಿ ನಕಲಿ ದಾಖಲೆಗಳನ್ನು ಬಳಸಿ ತಮ್ಮ ಪಾಸ್‌ಪೋರ್ಟ್‌ಗಳನ್ನು ಪಡೆದುಕೊಂಡಿದ್ದಾರೆ ಎಂದು ಎಟಿಎಸ್ ಅಧಿಕಾರಿಗಳು ತಿಳಿಸಿದ್ದಾರೆ. ಭಯೋತ್ಪಾದನಾ ನಿಗ್ರಹ ದಳವು ನಕಲಿ ದಾಖಲೆ ಸೃಷ್ಟಿಸಿ ಅವುಗಳ ಆಧಾರದ ಮೇಲೆ ಪಾಸ್‌ಪೋರ್ಟ್‌ಗಳನ್ನು ಪಡೆದುಕೊಂಡು ಭಾರತದ ವಿವಿಧ ಭಾಗಗಳಲ್ಲಿ ವಾಸಿಸುತ್ತಿರುವ ಇಂತಹ ಹಲವಾರು ವ್ಯಕ್ತಿಗಳ ಶೋಧ ಕಾರ್ಯ ನಡೆಸುತ್ತಿದೆ. ಇನ್ನಷ್ಟು ಜನರು ಬಂಧನವಾಗುವ ಸಾಧ್ಯತೆ ಇದೆ ಎಂದು ಎಟಿಎಸ್ ಅಧಿಕಾರಿಗಳು ತಿಳಿಸಿದ್ದಾರೆ.
