ಉದಯವಾಹಿನಿ, ಕುಲ್ತಾಲಿ (ಪಶ್ಚಿಮ ಬಂಗಾಳ): ಸುಂದರ್‌ಬನ್ಸ್‌ನ ಹೊರವಲಯದಲ್ಲಿರುವ ಕುಲ್ತಾಲಿ ಬ್ಲಾಕ್‌ನಲ್ಲಿರುವ ದೆಯುಲ್‌ಬರಿ ಎಂಬ ಪುಟ್ಟ ಹಳ್ಳಿಯಲ್ಲಿ ವಿದ್ಯುತ್​ ಕಂಬಗಳನ್ನೇ ಕಪ್ಪು ಹಲಗೆಗಳನ್ನಾಗಿ ಮಾಡಿಕೊಳ್ಳಲಾಗಿದೆ. ಮಕ್ಕಳ ಆರಂಭಿಕ ಕಲಿಕೆಗೆ ಬೇಕಾದ ಅಕ್ಷರಗಳನ್ನು ವಿದ್ಯುತ್​ ಕಂಬಗಳ ಮೇಲೆ ಬರೆಯಲಾಗಿದ್ದು, ವಿದ್ಯುತ್ ಕಂಬಗಳನ್ನು ಹೀಗೂ ಉಪಯೋಗಿಸಬಹುದು ಎಂಬ ಗ್ರಾಮದ ಹೊಸ ಪರಿಕಲ್ಪನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸುಮಾರು 40-45 ವಿದ್ಯುತ್ ಕಂಬಗಳ ಮೇಲೆ ವರ್ಣಮಾಲೆ, ಅಂಕಿ-ಸಂಖ್ಯೆಗಳು, ಇಂಗ್ಲಿಷ್ ಶಬ್ದಗಳು, ಸಂಕಲನ, ವ್ಯವಕಲನ, ಗುಣಾಕಾರ ಮತ್ತು ಭಾಗಾಕಾರ ಚಿಹ್ನೆಗಳನ್ನು ಬರೆಯಲಾಗಿದ್ದು, ರಸ್ತೆಯನ್ನು ತೆರೆದ ಶಾಲೆಯನ್ನಾಗಿ ಪರಿವರ್ತಿಸಿದ ಗ್ರಾಮಸ್ಥರ ನಡೆಗೆ ಪ್ರಶಂಸೆ ವ್ಯಕ್ತವಾಗಿದೆ.ಪಶ್ಚಿಮ ಬಂಗಾಳದ ನವೋದಯದ ಪ್ರವರ್ತಕ ಈಶ್ವರ ಚಂದ್ರ ವಿದ್ಯಾಸಾಗರ್ ಅವರ ಶೈಕ್ಷಣಿಕ ತತ್ವಶಾಸ್ತ್ರವನ್ನು ಗಮನದಲ್ಲಿಟ್ಟುಕೊಂಡು, ಹಳ್ಳಿಯ ರಸ್ತೆಗಳಲ್ಲಿರುವ ವಿದ್ಯುತ್ ಕಂಬಗಳನ್ನು ಹೀಗೆ ಬಳಸಿಕೊಳ್ಳಲಾಗಿದೆ. ಶಾಲೆಗೆ ಹೋಗುವ ಮಾರ್ಗದಲ್ಲಿ ಈ ವಿದ್ಯುತ್ ಕಂಬಗಳಿದ್ದು, ಮಕ್ಕಳು ಶಾಲೆಗೆ ಹೋಗಿ-ಬರುವಾಗ ಇವುಗಳತ್ತ ಗಮನ ಹರಿಸದೇ ಇರರು. ಇದೊಂದು ರೀತಿ ಚಲಿಸುವ ತರಗತಿಯಾಗಿದೆ ಎಂದು ನೋಡಿದವರು ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ. ಇಂತಹದ್ದೊಂದು ವಿಶಿಷ್ಠ ಆಲೋಚನೆಯ ಹಿಂದೆ ಸ್ಥಳೀಯ ನಿವಾಸಿ ಪುಲಕ್ ಮಂಡಲ್ ಎನ್ನುವರು ಇದ್ದಾರೆ.

ವಿದ್ಯಾಸಾಗರ್ ಅವರು ಬಾಲ್ಯದಲ್ಲಿ ತಮ್ಮ ಹಳ್ಳಿಯಿಂದ ಕೋಲ್ಕತ್ತಾಗೆ ಕಾಲ್ನಡಿಗೆಯಲ್ಲಿ ನಡೆದು ಹೋಗುವಾಗ ರಸ್ತೆಯ ಬದಿ ಇಂಗ್ಲಿಷ್​ನಲ್ಲಿ ಬರೆಯಲಾದ ಬೋರ್ಡ್​ಗಳನ್ನು ​ಹೀಗೆಯೇ ಓದಿಕೊಂಡು ತೆರಳುತ್ತಿದ್ದರು. ಈ ಆಲೋಚನೆಗೆ ಅವರೇ ಸ್ಪೂರ್ತಿ ಎನ್ನುತ್ತಾರೆ ಪುಲಕ್ ಮಂಡಲ್.
ವಿದ್ಯುತ್ ಕಂಬದ ಮೇಲೆ ಬರೆಯಲಾದ ಅಕ್ಷರಗಳ ಮಾಲೆ ರಸ್ತೆಬದಿಯಲ್ಲಿರುವ ಕೆಲವು ವಿದ್ಯುತ್ ಕಂಬಗಳು ಧೂಳು, ಮಣ್ಣು, ಗಿಡ-ಮರಗಳ ಬಳ್ಳಿಯಿಂದ ಮೆತ್ತಿದ್ದರೆ, ಇನ್ನೂ ಕೆಲವು ಪೋಸ್ಟರ್‌, ಕಸದ ರಾಶಿಗಳಿಂದ ಭರ್ತಿಯಾಗಿದ್ದವು. ಒಂದು ದಿನ ಈ ಆಲೋಚನೆ ಬಂದಿತು. ತಕ್ಷಣ ಬಣ್ಣ ಹಾಗೂ ಕುಂಚ ಎತ್ತಿಕೊಂಡರು ಹೊರಟೆವು. ಸ್ಥಳೀಯರ ಸಹಾಯದಿಂದ, ಮೊದಲು ಕಂಬಗಳನ್ನು ಸ್ವಚ್ಛಗೊಳಿಸಲಾಯಿತು. ನಂತರ ವರ್ಣಮಾಲೆ ಸೇರಿದಂತೆ ಮಕ್ಕಳ ಕಲಿಕೆ ಬೇಕಾದ ಬಾಂಗ್ಲಾ ಮತ್ತು ಇಂಗ್ಲಿಷ್ ಅಂಕಿ-ಸಂಖ್ಯೆಗಳು, ಸರಳ ಅಂಕಗಣಿತದ ಚಿಹ್ನೆಗಳನ್ನು ವರ್ಣರಂಜಿತ ಬಣ್ಣಗಳಲ್ಲಿ ಬರೆದೆವು. ವಿದ್ಯುತ್ ಕಂಬಗಳನ್ನು ಶಿಕ್ಷಣದ ಭಾಗಿವಾಗಿ ಉಪಯೋಗ ಮಾಡಿಕೊಂಡಿದ್ದಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ಕೇಳಿಬರುತ್ತಿದೆ. ಯುವ ವಿದ್ಯಾರ್ಥಿಗಳು ಕೂಡ ಈ ಬಗ್ಗೆ ತುಂಬಾ ಉತ್ಸುಕರಾಗಿದ್ದಾರೆ. ಗ್ರಾಮದ ಪ್ರತಿ ಮೂಲೆ ಮೂಲೆ ಈ ರೀತಿ ಶಿಕ್ಷಣದ ಸಂದೇಶವನ್ನು ಹೊತ್ತೊಯ್ದರೆ, ಮುಂದಿನ ಪೀಳಿಗೆಗೆ ಹೆಚ್ಚು ಅನುಕೂಲ. ಇಚ್ಛಾಶಕ್ತಿಯಿದ್ದರೆ, ರಸ್ತೆಬದಿಯೂ ಸಹ ಶಾಲೆಯಾಗಬಹುದು ಎಂಬುದಕ್ಕೆ ಇದೇ ಸಾಕ್ಷಿ ಎಂದು ಪುಲಕ್ ಹರ್ಷ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!