ಉದಯವಾಹಿನಿ, ಹೈದರಾಬಾದ್(ತೆಲಂಗಾಣ)​: ಅಡುಗೆ ಎಂಬುದು ಕಲೆ ಇದ್ದಂತೆ. ಅದರಲ್ಲೂ ಅಡುಗೆ ಮಾಡುವುದರಲ್ಲಿ ಅವರು ಪ್ರವೀಣರಾದರೆ, ಪ್ರತಿನಿತ್ಯದ ಅಡುಗೆ ಕೂಡ ಹಬ್ಬದೂಟದಂತೆ ಭಾಸವಾಗುತ್ತದೆ. ಈ ಮಾತು ಹೈದರಾಬಾದ್‌ನ ಪ್ರಸಿದ್ಧ ‘ಉಸ್ತಾದ್‌’ಗಳ (ಮಾಸ್ಟರ್ ಷೆಫ್‌ಗಳು) ಜೀವನಕ್ಕೆ ಸಂಪೂರ್ಣವಾಗಿ ಒಪ್ಪಿತವಾಗುತ್ತದೆ. ರಂಜಾನ್ ಆರಂಭವಾದಂತೆ ಈ ಬಾಣಸಿಗರು ನಗರದ ಜನಪ್ರಿಯ ಖಾದ್ಯವಾದ ಹಲೀಮ್ ತಯಾರಿಸುವಲ್ಲಿ ಕಾರ್ಯನಿರತರಾಗುತ್ತಾರೆ. ಅನುಭವಿ ಉಸ್ತಾದ್‌ಗಳಿಂದ ಕಲೆ ಕಲಿತ ಸಾವಿರಾರು ನುರಿತ ಅಡುಗೆಯವರೂ ಸಹ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ರಂಜಾನ್​ ಸಮಯದಲ್ಲಿ ಮಾತ್ರ ಹಲೀಮ್​ ಅಡುಗೆ ಹೆಚ್ಚು ಕಾಣಸಿಗುತ್ತದೆ ಎಂದು ಕೆಲವರು ನಂಬಿದ್ದಾರೆ. ಆದರೆ, ಇದಕ್ಕೆ ವರ್ಷವಿಡೀ ಬೇಡಿಕೆ ಇದೆ. ಹೈದರಾಬಾದ್‌ನಾದ್ಯಂತ ಮುಸ್ಲಿಂ ಮದುವೆಗಳು, ವಲೀಮಾ ಸ್ವಾಗತಗಳು, ಶುಭ ಸಂದರ್ಭಗಳು ಮತ್ತು ಮನೆಗಳಲ್ಲಿ ಸಣ್ಣ ದಾವತ್‌ಗಳಲ್ಲಿ ಹಲೀಮ್ ಮತ್ತು ಬಿರಿಯಾನಿ ವಿಶೇಷ ಸ್ಥಾನ ಪಡೆದಿದೆ. ಪರಿಣಾಮವಾಗಿ, ಈ ಉಸ್ತಾದ್​ಗಳು ಯಾವುದೇ ಋತುಮಾನದಲ್ಲೂ ಬಿಡುವಿಲ್ಲದೆ ಕೆಲಸದಲ್ಲಿ ತೊಡಗುತ್ತಾರೆ.

ಉಸ್ತಾದ್​ಗಳ ಬಳಿ ಕಲಿಕೆ: ಹಲೀಮ್ ತಯಾರಿಕೆ ಕುರಿತು ತಿಳಿಸುವ ಯಾವುದೇ ಔಪಚಾರಿಕ ಅಡುಗೆ ಶಾಲೆ ಅಥವಾ ತರಬೇತಿ ಕೇಂದ್ರವಿಲ್ಲ. ಪ್ರತಿಯೊಬ್ಬ ಕಲಿಕೆದಾರರು ಅನುಭವಿ ಉಸ್ತಾದ್​ಗಳ ಬಳಿಯಲ್ಲಿ ಶಿಷ್ಯರಾಗಿ ಸೇರಿ ಕಲಿಯಲಾರಂಭಿಸುತ್ತಾರೆ. ಇದರ ತಯಾರಿಕೆಗೆ ಬೇಕಾದ ವಸ್ತು, ಬೆಂಕಿ ಉರಿಯ ನಿಯಂತ್ರಣ ಮತ್ತು ಹದವಾಗಿ ಬೇಯಿಸುವ ವಿಧಾನಗಳ ಹಲವು ವರ್ಷದ ಕಲಿಕೆ ಅವರಲ್ಲಿ ಕೌಶಲ್ಯ ಮೂಡಿಸುತ್ತದೆ. ಈ ಕೌಶಲ್ಯದ ಅನುಭವದ ಮೇರೆಗೆ ಅನೇಕ ಜನರು ಸ್ವತಂತ್ರವಾಗಿ ಆರ್ಡರ್​ ಪಡೆದು ಗಳಿಕೆ ಆರಂಭಿಸುತ್ತಾರೆ. ಹೈದರಾಬಾದಿ ಅಡುಗೆಯ ಮೂಲಗಳು: ನಿಜಾಮರ ಕಾಲದಿಂದ ಹೈದರಾಬಾದ್​ನಲ್ಲಿ ಸಾಂಪ್ರದಾಯಿಕವಾದ ಹಲೀಮ್​​ ಮತ್ತು ಬಿರಿಯಾನಿ ಆರಂಭವಾಯಿತು. ಆರಂಭದಲ್ಲಿ ಯೆಮೆನ್​ ಮತ್ತು ಪರ್ಷಿಯಾದಲ್ಲಿ ರಾಜಮನೆತನದ ಅಡುಗೆ ಕೋಣೆಯಲ್ಲಿ ಕೆಲಸ ಮಾಡುವವರು ಮುಂದೆ ಆರನೇ ನಿಜಾಮ್​ ಮಹಬೂಬ್​ ಆಲಿ ಖಾನ್​ ಕಾಲದಲ್ಲಿ ಈ ಹೊಸ ಅಡುಗೆ ಪರಿಚಯ ಮಾಡಿದರು. ಏಳನೇ ನಿಜಾಂ ಮೀರ್​ ಒಸ್ಮಾನ್​ ಆಲಿ ಖಾನ್​ ಆಡಳಿತದಲ್ಲಿ ಈ ಅಡುಗೆ ಸಾಕಷ್ಟು ಪ್ರಖ್ಯಾತಿ ಪಡೆದು, ರಾಜರ ಅಡುಗೆಯಲ್ಲಿ ಗುರುತಿಸಿಕೊಂಡಿತು. ಇದಾದ ವರ್ಷಗಳ ಬಳಿಕ ಇದು ಹೈದರಾಬಾದ್​ನ ಆಹಾರ ಸಂಸ್ಕೃತಿಯನ್ನು ಸೇರಿತು. ದಖ್ಖನಿ ಬಾಣಸಿಗರು ಇದರಲ್ಲಿ ನುರಿತರು. ಬಳಿಕ ಇದು ಪೀಳಿಗೆಯಿಂದ ಪೀಳಿಗೆಗೆ ಬಂದಿತು.

Leave a Reply

Your email address will not be published. Required fields are marked *

error: Content is protected !!