ಉದಯವಾಹಿನಿ,ಇರಾನ್ : ಅಮೆರಿಕ , ಇರಾನ್ ನಡುವೆ ಉದ್ವಿಗ್ನತೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ನಾಗರಿಕರು ವಾಣಿಜ್ಯ ವಿಮಾನಗಳು ಸೇರಿದಂತೆ ಲಭ್ಯವಿರುವ ಎಲ್ಲಾ ಸಾರಿಗೆ ವ್ಯವಸ್ಥೆ ಮೂಲಕ ಇರಾನ್ ತೊರೆಯುವಂತೆ ಭಾರತೀಯ ರಾಯಭಾರ ಕಚೇರಿ ಸೂಚಿಸಿದೆ. ಟೆಹ್ರಾನ್‌ನಲ್ಲಿ ಭುಗಿಲೆದ್ದಿರುವ ಪ್ರತಿಭಟನೆಗಳು ಮತ್ತು ಇರಾನ್ ಮೇಲೆ ಅಮೆರಿಕದ ಮಿಲಿಟರಿ ದಾಳಿಯ ಭೀತಿ ಹೆಚ್ಚುತ್ತಿರುವ ಮಧ್ಯೆ ಇರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಭಾರತೀಯ ನಾಗರಿಕರಿಗೆ ಸಲಹೆ ನೀಡಿದೆ. ಕಳೆದ ತಿಂಗಳು ಪ್ರತಿಭಟನಾಕಾರರ ಮೇಲೆ ಟೆಹ್ರಾನ್ ದಮನಕಾರಿ ಕ್ರಮಗಳನ್ನು ಕೈಗೊಂಡ ನಂತರ ಇದೇ ಮೊದಲ ಬಾರಿಗೆ ಇರಾನ್‌ನ ಹಲವಾರು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ಇರಾನ್‌ನಲ್ಲಿ ಈ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಭಾರತದ ವಿದ್ಯಾರ್ಥಿಗಳು, ಯಾತ್ರಾರ್ಥಿಗಳು, ಉದ್ಯಮಿಗಳು, ಪ್ರವಾಸಿಗರು ವಿಮಾನ ಸೇರಿದಂತೆ ಲಭ್ಯವಿರುವ ಸಾರಿಗೆ ಮಾರ್ಗಗಳ ಮೂಲಕ ಇರಾನ್‌ನಿಂದ ಹೊರಹೋಗುವಂತೆ ಮತ್ತು ಮುಂಜಾಗ್ರತೆ ವಹಿಸುವಂತೆ ಸೂಚಿಸಲಾಗಿದೆ. ಪ್ರತಿಭಟನೆ ನಡೆಯುವ ಸ್ಥಳಕ್ಕೆ ಹೋಗಬಾರದು. ಸದಾ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಬೇಕು. ಸ್ಥಳೀಯ ಮಾಧ್ಯಮಗಳ ಮೇಲೆ ನಿಗಾ ವಹಿಸಬೇಕೆಂದು ತಿಳಿಸಿದೆ.
ಜನವರಿಯಲ್ಲಿ ಅಧಿಕೃತ ಅಂದಾಜಿನ ಪ್ರಕಾರ, ವಿದ್ಯಾರ್ಥಿಗಳೂ ಸೇರಿದಂತೆ 10 ಸಾವಿರಕ್ಕೂ ಹೆಚ್ಚು ಭಾರತೀಯರು ಇರಾನ್‌ನಲ್ಲಿ ವಾಸಿಸುತ್ತಿದ್ದಾರೆ. ಜನವರಿ 5ರಂದು ಭಾರತ ಸರ್ಕಾರ ಹೊರಡಿಸಿದ್ದ ಪ್ರಕಟಣೆ ಮತ್ತು ಇರಾನ್‌ನಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಗಮನದಲ್ಲಿಟ್ಟುಕೊಂಡು, ಇರಾನ್ ತೊರೆಯುವಂತೆ ಭಾರತೀಯ ನಾಗರಿಕರಿಗೆ ಸೂಚಿಸಲಾಗಿದೆ” ಎಂದು ರಾಯಭಾರ ಕಚೇರಿ ಮಾಹಿತಿ ನೀಡಿದೆ.
ಎಲ್ಲಾ ಭಾರತೀಯ ನಾಗರಿಕರು ಮತ್ತು ಪಿಐಒಗಳು (ಭಾರತೀಯ ಮೂಲದ ವ್ಯಕ್ತಿಗಳು) ಸರಿಯಾದ ಎಚ್ಚರಿಕೆ ವಹಿಸಬೇಕು, ಪ್ರತಿಭಟನೆಗಳು ನಡೆಯುವ ಸ್ಥಳಗಳಿಂದ ದೂರವಿರಬೇಕು ಮತ್ತು ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಬೇಕು. ಇರಾನ್‌ನಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳು ಪಾಸ್‌ಪೋರ್ಟ್‌ಗಳು ಮತ್ತು ಗುರುತಿನ ಚೀಟಿಗಳು ಸೇರಿದಂತೆ ತಮ್ಮ ಪ್ರಯಾಣ ಮತ್ತು ವಲಸೆ ದಾಖಲೆಗಳನ್ನು ತಮ್ಮೊಂದಿಗೆ ಹೊಂದಿರಬೇಕು. ಈ ನಿಟ್ಟಿನಲ್ಲಿ ಯಾವುದೇ ಸಹಾಯಕ್ಕಾಗಿ ನಾಗರಿಕರು ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸುವಂತೆ ಕೋರಿದೆ. ಜಿನೀವಾದಲ್ಲಿ ಗುರುವಾರ ಅಮೆರಿಕ-ಇರಾನ್ ಮುಂದಿನ ಸುತ್ತಿನ ಮಾತುಕತೆ: ಮತ್ತೊಂದೆಡೆ ಇರಾನ್, ಅಮೆರಿಕದ ಮಿಲಿಟರಿ ಕ್ರಮದ ಬೆದರಿಕೆ ನಡುವೆ ಹೊಸ ಪ್ರತಿಭಟನೆಗಳನ್ನು ಎದುರಿಸುತ್ತಿದೆ. ಈ ನಡುವೆ ಅಮೆರಿಕ ಮತ್ತು ಇರಾನ್ ಗುರುವಾರ ಜಿನೀವಾದಲ್ಲಿ ತಮ್ಮ ಮುಂದಿನ ಸುತ್ತಿನ ಪರಮಾಣು ಮಾತುಕತೆಗಳನ್ನು ನಡೆಸಲಿವೆ ಎಂದು ತಿಳಿದು ಬಂದಿದೆ. ಒಮಾನ್‌ನ ವಿದೇಶಾಂಗ ಸಚಿವ ಬದ್ರ್ ಅಲ್-ಬುಸೈದಿ ಈ ಮಾತುಕತೆಗಳನ್ನು ದೃಢಪಡಿಸಿದ್ದಾರೆ. ಒಮಾನ್ ಈ ಹಿಂದೆ ಇರಾನ್‌ನ ಪರಮಾಣು ಕಾರ್ಯಕ್ರಮಗಳ ಕುರಿತು ಪರೋಕ್ಷ ಮಾತುಕತೆಗಳನ್ನು ಆಯೋಜಿಸಿತ್ತು. ಕಳೆದ ವಾರ ಜಿನೀವಾದಲ್ಲಿ ಇತ್ತೀಚಿನ ಮಾತುಕತೆಗಳಿಗೆ ವೇದಿಕೆ ಕಲ್ಪಿಸಿತ್ತು. ಆದರೆ, ಟ್ರಂಪ್ ಆಡಳಿತದಿಂದ ತಕ್ಷಣಕ್ಕೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ನಡುವೆ ದಶಕಗಳ ಬಳಿಕ ಮಧ್ಯಪ್ರಾಚ್ಯದಲ್ಲಿ ಅಮೆರಿಕ ಮಿಲಿಟರಿಯನ್ನು ನಿಯೋಜಿಸಿದೆ. ಈ ಮೂಲಕ ಪರಮಾಣು ಕಾರ್ಯಕ್ರಮಗಳನ್ನು ತ್ಯಜಿಸುವಂತೆ ಇರಾನ್ ಮೇಲೆ ಅಮೆರಿಕ ಒತ್ತ ಹೇರುತ್ತಿದೆ. ಹೀಗಾಗಿ ಯುದ್ಧದ ಕಾರ್ಮೋಡ ಆವರಿಸಿದೆ.
