ಉದಯವಾಹಿನಿ, ಕೀವ್(ಉಕ್ರೇನ್): ಉಕ್ರೇನ್ ದೇಶವನ್ನು ವಶಪಡಿಸಿಕೊಳ್ಳುವ ಪ್ರಯತ್ನವಾಗಿ ರಷ್ಯಾ ದಾಳಿ ಆರಂಭಿಸಿ ನಾಲ್ಕು ವರ್ಷಗಳಾಗಿದ್ದರೂ ಪುಟಿನ್ ತಮ್ಮ ಗುರಿ ಸಾಧಿಸುವಲ್ಲಿ ವಿಫಲರಾಗಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲಿಡಿಮಿರ್ ಝೆಲನ್ಸ್ಕಿ ಹೇಳಿದ್ದಾರೆ.
ಯುದ್ಧದ ನಾಲ್ಕನೇ ವರ್ಷಾಚರಣೆಯ ಅಂಗವಾಗಿ ವಿಡಿಯೋ ಸಂದೇಶದಲ್ಲಿ ಮಾತನಾಡಿರುವ ಅವರು, ಸಂಘರ್ಷ ಶುರುವಾದ ದಿನದಿಂದ ರಷ್ಯಾ ಸೈನಿಕರ ವಿರುದ್ಧ ಉಕ್ರೇನಿಯರು ದಿಟ್ಟವಾಗಿ ಹೋರಾಡುತ್ತಿದ್ದಾರೆ. ಉಕ್ರೇನ್ ಪ್ರಬಲವಾದ ರಕ್ಷಣೆ ಮತ್ತು ದೀರ್ಘಕಾಲದ ಶಾಂತಿಗಾಗಿ ಏನಾದರು ಮಾಡಲು ಸಿದ್ಧವಿದೆ ಎಂದಿದ್ದಾರೆ. 2022ರ ಫೆ.24ರಂದು ಉಕ್ರೇನ್ ಮೇಲೆ ರಷ್ಯಾ ಯುದ್ಧ ಆರಂಭಿಸಿದಾಗಿನಿಂದ ಇಲ್ಲಿಯವರೆಗೆ ಎರಡೂ ಕಡೆಯಿಂದ ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಎರಡನೇ ವಿಶ್ವ ಯುದ್ದದ ಬಳಿಕ ಯುರೋಪಿಯನ್ ನೆಲದಲ್ಲಿ ನಡೆಯುತ್ತಿರುವ ಮಾರಣಾಂತಿಕ ಯುದ್ಧ ಇದೆಂದು ಹೇಳಲಾಗಿದೆ.
ಈ ಸಂಘರ್ಷವನ್ನು ನಿಲ್ಲಿಸಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಅಮೆರಿಕ ಕಳೆದ ವರ್ಷ ಉಭಯ ದೇಶಗಳ ಜೊತೆ ಮಾತುಕತೆ ಆರಂಭಿಸಿತ್ತು. ಆದರೆ, ಯುದ್ಧ ನಿಲ್ಲಿಸುವಲ್ಲಿ ವಿಫಲವಾಗಿದೆ.
“ಪುಟಿನ್ ಇನ್ನೂ ತಮ್ಮ ಗುರಿ ಸಾಧಿಸಿಲ್ಲ. ಉಕ್ರೇನ್ ಅನ್ನು ಅವರು ಇಬ್ಭಾಗ ಮಾಡಲು ಸಾಧ್ಯವಾಗಿಲ್ಲ. ಅವರು ಯುದ್ಧ ಗೆದ್ದಿಲ್ಲ. ನಾವು ಉಕ್ರೇನ್ ಅನ್ನು ರಕ್ಷಿಸುತ್ತಿದ್ದು, ಶಾಂತಿ ಮತ್ತು ನ್ಯಾಯ ಸಾಧನೆಗಾಗಿ ಎಲ್ಲವನ್ನೂ ಮಾಡುತ್ತಿದ್ದೇವೆ” ಎಂದು ಝೆಲನ್ಸ್ಕಿಹೇಳಿದ್ದಾರೆ.
“ನಮಗೆ ಶಾಂತಿ ಬೇಕು. ಘನತೆಯ ಮತ್ತು ದೀರ್ಘಕಾಲದ ಶಾಂತಿ ಬೇಕು. ಯಾವುದೇ ಒಪ್ಪಂದಕ್ಕೆ ಸುಮ್ಮನೆ ಸಹಿ ಹಾಕುವುದಿಲ್ಲ” ಎಂದಿದ್ದಾರೆ.
ಫಿನ್ನಿಶ್ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್ ಮತ್ತು ಸ್ವೀಡನ್ ಪ್ರಧಾನಿ ಉಲ್ಫ್ ಕ್ರಿಸ್ಟರ್ಸನ್ ಸೇರಿದಂತೆ ಉಕ್ರೇನ್ ಮಿತ್ರ ದೇಶಗಳು ವಾರ್ಷಿಕೋತ್ಸವದಂದು ಉಪಸ್ಥಿತರಿದ್ದರು.
ಯುರೋಪಿಯನ್ ಕಮಿಷನ್ ಮುಖ್ಯಸ್ಥೆ ಉರ್ಸುಲಾ ವಾನ್ ಡೇರ್ ಲೆಯನ್ ಅವರೂ ಕೂಡ ಪಾಲ್ಗೊಂಡಿದ್ದು, ಯುರೋಪ್ ಆರ್ಥಿಕ, ಮಿಲಿಟರಿ ಮತ್ತು ಭಾರೀ ಚಳಿಯ ಸಮಯದಲ್ಲೂ ಉಕ್ರೇನ್ ಜೊತೆಗೆ ಸ್ಥಿರವಾಗಿ ನಿಂತಿದೆ. ಈ ಕುರಿತು ಉಕ್ರೇನ್ ಜನರಿಗೆ ಸ್ವಷ್ಟ ಸಂದೇಶ ರವಾನಿಸಿದ್ದು, ಶಾಂತಿ ಪುನರ್ಸ್ಥಾಪನೆ ಆಗುವವರೆಗೂ ನಾವು ಅವರ ಜೊತೆಗೆ ನಿಲ್ಲುವುದಾಗಿ ತಿಳಿಸಿದ್ದಾರೆ.
ಉಕ್ರೇನ್ ಮತ್ತು ರಷ್ಯಾ ನಡುವಿನ ಸಂಘರ್ಷ ನಿಲ್ಲಿಸುವ ಪ್ರಯತ್ನವನ್ನು ಅಮೆರಿಕ ನಡೆಸುತ್ತಿದೆ. ಆದರೆ, ಪ್ರದೇಶದ ವಿಚಾರದಲ್ಲಿ ಮಾಸ್ಕೋ ಮತ್ತು ಕೀವ್ ನಡುವಿನ ಮಾತುಕತೆಯಲ್ಲಿ ಒಮ್ಮತ ಸಾಧಿಸಲು ಸಾಧ್ಯವಾಗಿಲ್ಲ. ರಷ್ಯಾ ಉಕ್ರೇನ್ನ ಶೇ.20ರಷ್ಟು ಪ್ರದೇಶವನ್ನು ಆಕ್ರಮಿಸಿದ್ದು, ಉಕ್ರೇನ್ ಪೂರ್ವ ಡಾನ್ಬಾಸ್ ಪ್ರದೇಶ ನಿಯಂತ್ರಣಕ್ಕೆ ರಷ್ಯಾ ಮುಂದಾಗಿದ್ದು, ಇದಕ್ಕೆ ಉಕ್ರೇನ್ ಸಮ್ಮತಿಸಿಲ್ಲ. ಅಲ್ಲದೇ ಅಮೆರಿಕ ಸೇರಿದಂತೆ ಯುರೋಪಿಯನ್ ದೇಶಗಳಿಂದ ಭದ್ರತಾ ಗ್ಯಾರಂಟಿಯನ್ನು ಉಕ್ರೇನ್ ಬಯಸುತ್ತಿದೆ.
