ಉದಯವಾಹಿನಿ, ಮೆಕ್ಸಿಕೋ: ಡ್ರಗ್ ಮಾಫಿಯಾ ಡಾನ್ ಎಲ್ ಮೆಂಚೊ ಹತ್ಯೆ ಬಳಿಕ ಮೆಕ್ಸಿಕೋದ ಕೆಲವು ಭಾಗಗಳಲ್ಲಿ ಆತನ ಸಹಚರರಿಂದ ಹಿಂಸಾಚಾರ ಹಾಗೂ ರಸ್ತೆ ತಡೆ, ದಾಳಿಯಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಭಾರತ, ಕೆನಡಾ ಹಾಗೂ ಯುವೈಟೆಡ್ ಸ್ಟೇಟ್ಸ್ ರಾಯಭಾರ ಕಚೇರಿಗಳು ತನ್ನ ಪ್ರಜೆಗಳಿಗೆ ಸಲಹೆಗಳನ್ನು ನೀಡಿದೆ.
ನಾಗರಿಕರು ಒಳಾಂಗಣದಲ್ಲಿಯೇ ಇರುವಂತೆ, ಅನಗತ್ಯ ಪ್ರಯಾಣಗಳನ್ನು ತಪ್ಪಿಸುವಂತೆ ಭಾರತೀಯ ಪ್ರಜೆಗಳಿಗೆ ಮನವಿ ಮಾಡಿಕೊಂಡಿದೆ. ಮೆಕ್ಸಿಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಅಲ್ಲಿನ ಎಲ್ಲಾ ಭಾರತೀಯ ಪ್ರಜೆಗಳಿಗೆ ಸುತ್ತಮುತ್ತಲಿನ ಬಗ್ಗೆ ಜಾಗೃತರಾಗಿರಲು, ಕಾನೂನು ಜಾರಿ ಚಟುವಟಿಕೆಯ ಸುತ್ತಲಿನ ಪ್ರದೇಶಗಳಿಗೆ ತೆರಳುವುದನ್ನು ತಪ್ಪಿಸಲು ಮತ್ತು ಅನಗತ್ಯ ಪ್ರಯಾಣವನ್ನು ಕಡಿಮೆ ಮಾಡಲು ಕೇಳಿಕೊಂಡಿದೆ.
ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಮೆಕ್ಸಿಕೋದಲ್ಲಿರುವ ಭಾರತದ ರಾಯಭಾರ ಕಚೇರಿಯು, “ಮೆಕ್ಸಿಕೋದಲ್ಲಿರುವ ಎಲ್ಲ ಭಾರತೀಯ ಪ್ರಜೆಗಳೇ, ಭದ್ರತಾ ಕಾರ್ಯಾಚರಣೆಗಳು ಮತ್ತು ಸಂಬಂಧಿತ ರಸ್ತೆ ತಡೆಗಳು ಮತ್ತು ಅಪರಾಧ ಚಟುವಟಿಕೆಗಳು ನಡೆಯುತ್ತಿವೆ. ಜಲಿಸ್ಕೊ ರಾಜ್ಯ (ಪೋರ್ಟೊ ವಲ್ಲರ್ಟಾ, ಚಾಪಾಲಾ ಮತ್ತು ಗ್ವಾಡಲಜರಾ ಪ್ರದೇಶಗಳು), ತಮೌಲಿಪಾಸ್ ರಾಜ್ಯ (ರೇನೋಸಾ ಮತ್ತು ಇತರ ಪುರಸಭೆಗಳ ಪ್ರದೇಶಗಳು), ಮೈಕೋಕನ್ ರಾಜ್ಯ, ಗೆರೆರೊ ರಾಜ್ಯ ಮತ್ತು ನ್ಯೂಯೆವೊ ಲಿಯಾನ್ ರಾಜ್ಯಗಳ ಪ್ರದೇಶಗಳಲ್ಲಿನ ಭಾರತೀಯ ಪ್ರಜೆಗಳು ಮುಂದಿನ ಸೂಚನೆ ಬರುವವರೆಗೆ ನೀವು ಇರುವ ಸ್ಥಳದಲ್ಲೇ ಆಶ್ರಯ ಪಡೆಯಬೇಕು.” ಎಂದು ಹೇಳಿದೆ.
ತೆಗೆದುಕೊಳ್ಳಬೇಕಾದ ಕ್ರಮಗಳು ಏನು?: ಕಾನೂನು ಜಾರಿ ಚಟುವಟಿಕೆಯ ಸುತ್ತಲಿನ ಪ್ರದೇಶಗಳನ್ನು ತಪ್ಪಿಸಿ. ನಿಮ್ಮ ಸುತ್ತಮುತ್ತಲಿನ ಬಗ್ಗೆ ಎಚ್ಚರವಿರಲಿ. ಆಶ್ರಯವನ್ನು ಹುಡುಕಿ ಮತ್ತು ನಿಮ್ಮ ಮನೆಯ ಹೊರಗೆ ಅನಗತ್ಯ ಓಡಾಡುವುದನ್ನು ಕಡಿಮೆ ಮಾಡಿ ಎಂದು ಹೇಳಿದೆ.
ಸಹಾಯಕ್ಕಾಗಿ ರಾಯಭಾರ ಕಚೇರಿಯು ಸಹಾಯವಾಣಿ ಸಂಖ್ಯೆಯನ್ನು ಸಹ ನೀಡಿದೆ. ಅಪ್ಡೇಟ್ ಮಾಹಿತಿಗಳಿಗೆ ಸ್ಥಳೀಯ ಮಾಧ್ಯಮಗಳನ್ನು ವೀಕ್ಷಿಸಿ. ಸ್ಥಳೀಯ ಅಧಿಕಾರಿಗಳ ನಿರ್ದೇಶನಗಳನ್ನು ಅನುಸರಿಸಿ ಮತ್ತು ತುರ್ತು ಸಂದರ್ಭದಲ್ಲಿ, 911 ಗೆ ಕರೆ ಮಾಡಿ. ಜನಸಂದಣಿಯಲ್ಲಿ ಹೋಗುವುದನ್ನು ತಪ್ಪಿಸಿ. ನಿಮ್ಮ ಸ್ಥಳ ಮತ್ತು ಯೋಗಕ್ಷೇಮದ ಬಗ್ಗೆ ಕುಟುಂಬ ಮತ್ತು ಸ್ನೇಹಿತರಿಗೆ ಫೋನ್, ಮೆಸೇಜ್ ಮತ್ತು ಸಾಮಾಜಿಕ ಮಾಧ್ಯಮದ ಮೂಲಕ ತಿಳಿಸಿ. ಸಹಾಯಕ್ಕಾಗಿ ದಯವಿಟ್ಟು +52 55 4847 7539 ನಲ್ಲಿ ಭಾರತದ ರಾಯಭಾರ ಕಚೇರಿಯನ್ನು ಸಂಪರ್ಕಿಸಿ” ಎಂದು ಭಾರತೀಯ ಪ್ರಜೆಗಳಿಗೆ ತಿಳಿಸಿದೆ.
ಮೆಕ್ಸಿಕೋದಲ್ಲಿ ಅಪರಾಧ ಚಟುವಟಿಕೆಯಿಂದಾಗಿ ರಸ್ತೆ ತಡೆ ಉಂಟಾಗಿದ್ದು, ಇದು ವಿಮಾನ ಕಾರ್ಯಾಚರಣೆಯ ಮೇಲೂ ಪರಿಣಾಮ ಬೀರಿದೆ. ಹಾಗಾಗಿ ಮೆಕ್ಸಿಕೋದಲ್ಲಿರುವ ಅಮೆರಿಕನ್ ನಾಗರಿಕರು ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆಯುವಂತೆ ಅಮೆರಿಕ ವಿದೇಶಾಂಗ ಇಲಾಖೆ ಭಾನುವಾರ ಒತ್ತಾಯಿಸಿದೆ.
ಮೆಕ್ಸಿಕೋದ ಹಲವು ಪ್ರದೇಶಗಳಲ್ಲಿ ನಡೆಯುತ್ತಿರುವ, ವ್ಯಾಪಕ ಭದ್ರತಾ ಕಾರ್ಯಾಚರಣೆಗಳು ಮತ್ತು ಸಂಬಂಧಿತ ರಸ್ತೆ ತಡೆಗಳು ಮತ್ತು ಅಪರಾಧ ಚಟುವಟಿಕೆಗಳಿಂದಾಗಿ, ಮುಂದಿನ ಸೂಚನೆ ಬರುವವರೆಗೂ ಅಮೆರಿಕದ ನಾಗರಿಕರು ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆಯಬೇಕು ಎಂದು ಇಲಾಖೆಯ ಕಾನ್ಸುಲರ್ ವ್ಯವಹಾರಗಳ ವಿಭಾಗದ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ನಲ್ಲಿ ಹೇಳಿದೆ.
