ಉದಯವಾಹಿನಿ, ಸಾಮಾನ್ಯವಾಗಿ ಸಂಜೆ ಕಾಫಿ ಅಥವಾ ಟೀ ಜೊತೆ ಬಿಸಿಬಿಸಿಯಾಗಿ ಏನಾದರೂ ತಿನ್ನುವುದು ಕೆಲವರಿಗೆ ಅಭ್ಯಾಸವಾಗಿರುತ್ತದೆ. ಅಲ್ಲದೇ ಮಕ್ಕಳು ಕೂಡ ಸಂಜೆ ಶಾಲೆಯಿಂದ ಬಂದವರೇ ತಿನ್ನಲು ಏನಾದರೂ ಕೇಳುತ್ತಾರೆ. ಇದಕ್ಕಾಗಿ ಇವತ್ತಿನ ನಮ್ಮ ರೆಸಿಪಿಯಲ್ಲಿ ಗರಿಗರಿಯಾದ ಮಶ್ರೂಮ್ ಪಕೋಡ ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಇದನ್ನು ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರು ಕೂಡ ಇಷ್ಟಪಟ್ಟು ತಿನ್ನುತ್ತಾರೆ. ಹಾಗಿದ್ರೆ ಇದನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ.

ಬೇಕಾಗುವ ಸಾಮಗ್ರಿಗಳು:
ಮಶ್ರೂಮ್ (ಬಟನ್ ಮಶ್ರೂಮ್) – 200-250 ಗ್ರಾಂ
ಕಡಲೆ ಹಿಟ್ಟು – 2 ಕಪ್
ಅಕ್ಕಿ ಹಿಟ್ಟು – 2 ಚಮಚ
ಖಾರದ ಪುಡಿ – 1 ಚಮಚ
ಅರಿಶಿನ ಪುಡಿ – ಕಾಲು ಚಮಚ
ಗರಂ ಮಸಾಲಾ – ಅರ್ಧ ಚಮಚ
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಜೀರಿಗೆ ಪುಡಿ ಅಥವಾ ಜೀರಿಗೆ – ಸ್ವಲ್ಪ
ಇಂಗು – ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು
ಸೋಡಾ – ಒಂದು ಚಿಟಿಕೆ
ಎಣ್ಣೆ – ಕರಿಯಲು ಬೇಕಾದಷ್ಟು

ಮಾಡುವ ವಿಧಾನ:
* ಮೊದಲು ಮಶ್ರೂಮ್ ಅನ್ನು ಚೆನ್ನಾಗಿ ತೊಳೆದು ಸಣ್ಣದಾಗಿ ಕತ್ತರಿಸಿ ನೀರು ಚೆನ್ನಾಗಿ ಒಣಗಿಸಿಕೊಳ್ಳಿ.
* ಈಗ ಒಂದು ಬೌಲ್‌ನಲ್ಲಿ ಕಡಲೆ ಹಿಟ್ಟು ಹಾಕಿಕೊಳ್ಳಿ. ಅದಕ್ಕೆ ಅಕ್ಕಿ ಹಿಟ್ಟು, ಖಾರದ ಪುಡಿ, ಅರಿಶಿನ, ಗರಂ ಮಸಾಲಾ, ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಇಂಗು ಮತ್ತು ಸೋಡಾ ಸೇರಿಸಿ ಮಿಕ್ಸ್ ಮಾಡಿ.
* ನಂತರ ಸ್ವಲ್ಪ ಸ್ವಲ್ಪ ನೀರು ಹಾಕುತ್ತಾ ಬಜ್ಜಿ ಹಿಟ್ಟಿನ ರೀತಿ ಕಲಸಿಕೊಳ್ಳಿ.
* ಬಳಿಕ ಈ ಹಿಟ್ಟಿಗೆ ಕತ್ತರಿಸಿದ ಮಶ್ರೂಮ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಮಶ್ರೂಮ್ ಮೇಲೆ ಹಿಟ್ಟು ಚೆನ್ನಾಗಿ ಹಿಡಿಯಬೇಕು. ಒಡೆಯದಂತೆ ನಿಧಾನವಾಗಿ ಮಾಡಿ. 2-3 ನಿಮಿಷ ಬಿಟ್ಟುಕೊಳ್ಳಿ.
* ಈಗ ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಮೀಡಿಯಮ್ ಉರಿಯಲ್ಲಿ ಕಾಯಿಸಿ.
* ಎಣ್ಣೆ ಕಾದ ನಂತರ ಮಶ್ರೂಮ್ ಮಿಶ್ರಣವನ್ನು ಚಮಚದಿಂದ ಅಥವಾ ಕೈಯಿಂದ ಚಿಕ್ಕ ಚಿಕ್ಕ ಉಂಡೆಗಳಾಗಿ ಹಾಕಿ ಕರಿಯಿರಿ. ಎರಡು ಬದಿಯೂ ಚೆನ್ನಾಗಿ ಬಣ್ಣ ಬರುವವರೆಗೆ ಕರಿಯಿರಿ. ಗೋಲ್ಡನ್ ಬ್ರೌನ್ ಆದರೆ ಸಾಕು.
* ಕರಿದ ನಂತರ ಟಿಶ್ಯೂ ಪೇಪರ್ ಮೇಲೆ ಇಟ್ಟು ಹೆಚ್ಚಿನ ಎಣ್ಣೆ ಹೀರಿಕೊಳ್ಳಲು ಬಿಡಿ.
* ಈಗ ಗರಿಗರಿಯಾದ ಮಶ್ರೂಮ್ ಪಕೋಡ ಸವಿಯಲು ಸಿದ್ಧ.
* ಚಟ್ನಿ, ಸಾಸ್ ಅಥವಾ ಟೊಮ್ಯಾಟೋ ಕೆಚಪ್ ಜೊತೆಗೆ ಮಶ್ರೂಮ್ ಪಕೋಡ ಒಳ್ಳೆಯ ರುಚಿ ಕೊಡುತ್ತದೆ.

Leave a Reply

Your email address will not be published. Required fields are marked *

error: Content is protected !!