ಉದಯವಾಹಿನಿ, ಚೆನ್ನೈ(ತಮಿಳುನಾಡು): ಕಮ್ಯುನಿಷ್ಟ್ ಪಕ್ಷದ ಹಿರಿಯ ನಾಯಕ, ತಮ್ಮ ಜೀವನದುದ್ದಕ್ಕೂ ಕಾರ್ಮಿಕ ವರ್ಗದ ಪರ ಹೋರಾಡಿದ ಕಾಮ್ರೇಡ್ ಆರ್ ನಲ್ಲಕಣ್ಣು ಅವರು ಇಂದು ನಿಧನರಾಗಿದ್ದಾರೆ. ಅವರಿಗೆ 101 ವರ್ಷ ವಯಸ್ಸಾಗಿತ್ತು.
ಆರ್. ನಲ್ಲಕಣ್ಣು ಅವರು ತಮಿಳುನಾಡು ರಾಜ್ಯದ ಕಮ್ಯುನಿಷ್ಟ್ ಚಳವಳಿಯ ಮುಂದಾಳು ಆಗಿದ್ದ ಅವರು ಭಾರತ್ ಕಮ್ಯುನಿಷ್ಟ್ ಪಕ್ಷದ ಹಿರಿಯ ನಾಯಕರಾಗಿದ್ದರು. ಕಳೆದ ಕೆಲ ವರ್ಷಗಳಿಂದ ವಯೋಸಹಜತೆಯಿಂದಾಗಿ ಪಕ್ಷದ ಸಕ್ರಿಯ ಚಟುಟಿಕೆಗಳಿಂದ ದೂರ ಉಳಿದಿದ್ದರು. ಕಳೆದ ವರ್ಷದ ಆ. 22 ರಂದು ಮನೆಯಲ್ಲಿ ದಿಢೀರ್ ಬಿದ್ದ ಪರಿಣಾಮ ಗಾಯಗೊಂಡಿದ್ದರು. ಬಳಿಕ ಅವರನ್ನು ಚೆನ್ನೈನಲ್ಲಿರುವ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಯ ಬಳಿಕ ಅವರು ಮನೆಗೆ ಮರಳಿದ್ದರು.
ಅವರಿಗೆ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಕಳೆದ ವರ್ಷದ ಡಿಸೆಂಬರ್ 25 ರಂದು ಅವರನ್ನು ಮತ್ತೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿತ್ತು. ನಂತರ ಮನೆಗೆ ತೆರಳಿದ್ದರು. ಮತ್ತೊಮ್ಮೆ ಉಸಿರಾಟದ ತೊಂದರೆಯಾದಾಗ ಅದೇ ಆಸ್ಪತ್ರೆಗೆ ಸೇರಿಸಲಾಗಿತ್ತು.
ಅಲ್ಲಿಂದ ನಿರಂತರ ಚಿಕಿತ್ಸೆ ಪಡೆಯುತ್ತಿದ್ದ ನಲ್ಲಕಣ್ಣು ಅವರಿಗೆ ಇಂದು ಬೆಳಗ್ಗೆ ತೀವ್ರ ಆರೋಗ್ಯ ಸಮಸ್ಯೆಯಾಯಿತು. ಇದರ ನಂತರ, ವೈದ್ಯರು ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುತ್ತಿದ್ದರು. ಈ ಪರಿಸ್ಥಿತಿಯಲ್ಲಿ ಯಾವುದೇ ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಮಧ್ಯಾಹ್ನ 1.55 ಕ್ಕೆ ನಲ್ಲಕಣ್ಣು ಕೊನೆಯುಸಿರೆಳೆದರು.
ಶ್ರೀವೈಕುಂಡಂನ ಸಿಂಹ ಎಂದೇ ಖ್ಯಾತರಾಗಿದ್ದ ನಲ್ಲಕಣ್ಣು: ಅವರು ಡಿಸೆಂಬರ್ 25, 1925 ರಂದು ತೂತುಕುಡಿ ಜಿಲ್ಲೆಯ ಶ್ರೀವೈಕುಂಡಂನಲ್ಲಿ ಜನಿಸಿದ್ದರು. ಅವರು ಮೊದಲು ಕಾಂಗ್ರೆಸ್ ಕಡೆ ಒಲವು ಹೊಂದಿದ್ದರು. ಆದ್ರೆ ತಮ್ಮ 18ನೇ ವಯಸ್ಸಿನಲ್ಲಿ ಭಾರತೀಯ ಕಮ್ಯುನಿಸ್ಟ್ ಪಕ್ಷವನ್ನು ಸೇರ್ಪಡೆಯಾದರು. ನಲ್ಲಕಣ್ಣು ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. ಆ ಸಮಯದಲ್ಲಿ, ದೇಶಾದ್ಯಂತ ದೊಡ್ಡ ಕ್ಷಾಮ ತಲೆದೋರಿತ್ತು. ಆದರೆ, ಶ್ರೀವೈಕುಂಡಂ ಪ್ರದೇಶದ ಓರ್ವ ಭೂಮಾಲೀಕ ಸುಮಾರು 2,000 ಭತ್ತದ ಮೂಟೆಗಳನ್ನು ಸಂಗ್ರಹಿಸಿಟ್ಟಿರುವುದನ್ನು ಕಂಡುಹಿಡಿದು, ಅದರ ಬಗ್ಗೆ ಭಾರತ್ ಕಮ್ಯುನಿಸ್ಟ್ ಪಕ್ಷದ ಜನಶಕ್ತಿ ನಿಯತಕಾಲಿಕೆಯಲ್ಲಿ ಲೇಖನ ಬರೆದಿದ್ದರು. ಇದನ್ನು ಓದಿದ್ದ ಅಂದಿನ ಜಿಲ್ಲಾಧಿಕಾರಿ ತಕ್ಷಣ ಕ್ರಮ ಕೈಗೊಂಡು ಎಲ್ಲಾ ಭತ್ತದ ಮೂಟೆಗಳನ್ನು ವಶಪಡಿಸಿಕೊಂಡಿದ್ದರು. ಈ ಘಟನೆಯು ನಲ್ಲಕಣ್ಣು ಅವರ ಹೋರಾಟದ ಕಿಚ್ಚಿಗೆ ಸಾಕ್ಷಿಯಾಗಿತ್ತು.
ದೇಶದ ಸ್ವಾತಂತ್ರ್ಯ ಹೋರಾಟ ತೀವ್ರಗೊಂಡಿದ್ದ ಅವಧಿಯಲ್ಲಿ ಕಮ್ಯುನಿಸ್ಟ್ ಪಕ್ಷವನ್ನು ನಿಷೇಧಿಸಲಾಗಿತ್ತು. ಆ ಸಮಯದಲ್ಲಿ, ದೇಶಾದ್ಯಂತ ಕಮ್ಯುನಿಸ್ಟ್ ಪಕ್ಷದ ನಾಯಕರನ್ನು ಬ್ರಿಟಿಷ್ ಆಡಳಿತಾಧಿಕಾರಿಗಳು ಬಂಧಿಸಿ ಜೈಲಿನಲ್ಲಿಟ್ಟಿದ್ದರು. ತಮಿಳುನಾಡಿನಲ್ಲಿ ಬಂಧಿತರಾದ ಪ್ರಮುಖ ಕಮ್ಯುನಿಸ್ಟ್ ನಾಯಕರಲ್ಲಿ ನಲ್ಲಕಣ್ಣು ಸಹ ಇದ್ದರು. ಅವರನ್ನು ಬಂಧಿಸಿ ಏಳು ವರ್ಷಗಳ ಕಾಲ ಜೈಲಿನಲ್ಲಿರಿಸಲಾಗಿತ್ತು.
