ಉದಯವಾಹಿನಿ, ಭುವನೇಶ್ವರ (ಒಡಿಶಾ): ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಒಡಿಶಾದ ಗಣಿ ಇಲಾಖೆಯ ಉಪ ನಿರ್ದೇಶಕರ ನಿವಾಸದ ಮೇಲೆ ದಾಳಿ ನಡೆಸಿರುವ ಜಾಗೃತ ದಳ ಅಧಿಕಾರಿಗಳು 4 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಹಣವನ್ನು ವಶಪಡಿಸಿಕೊಂಡಿದ್ದಾರೆ. ಇದು ರಾಜ್ಯ ಜಾಗೃತ ದಳದ ಇತಿಹಾಸದಲ್ಲೇ ನಡೆದ ಅತಿದೊಡ್ಡ ನಗದು ಜಪ್ತಿ ಕಾರ್ಯಾಚರಣೆ ಎಂದು ಹೇಳಲಾಗಿದೆ.
ಪ್ರಕರಣದ ವಿವರ: ಕಟಕ್ ವೃತ್ತದ ಗಣಿ ಉಪ ನಿರ್ದೇಶಕ ದೇವಬ್ರತ್ ಮೊಹಂತಿ ಪರವಾನಗಿ ಪಡೆದ ಕಲ್ಲಿದ್ದಲು ವ್ಯಾಪಾರಿಯಿಂದ ಮಂಗಳವಾರ ರಾತ್ರಿ 30 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ಅಧಿಕಾರಿಗಳ ಕೈಗೆ ರೆಡ್​ ಹ್ಯಾಂಡ್​ ಆಗಿ ಸಿಕ್ಕಿ ಬಿದ್ದಿದ್ದರು. ಕಲ್ಲಿದ್ದಲು ಗಣಿಯನ್ನು ಸುಗಮವಾಗಿ ನಡೆಸಲು ಮತ್ತು ಅಕ್ರಮವಾಗಿ ಸಾಗಣೆಗೆ ಅಡ್ಡಿಪಡಿಸದಿರಲು ಅವರು ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎಂದು ತಿಳಿದುಬಂದಿದೆ. ದೇವಬ್ರತ್ ಅವರನ್ನು ವಿಜಿಲೆನ್ಸ್ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ.

ಟ್ರಾಲಿ ಬ್ಯಾಗ್‌ನಲ್ಲಿ ಕಂತೆ ಕಂತೆ ಹಣ: ಗಣಿ ಅಧಿಕಾರಿಯ ಬಂಧನದ ಬಳಿಕ ಇಂದು (ಬುಧವಾರ) ಮೊಹಂತಿ ಅವರಿಗೆ ಸೇರಿದ ಮೂರು ಪ್ರಮುಖ ಸ್ಥಳಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲಾಯಿತು. ಭುವನೇಶ್ವರದ ಶ್ರೀವಿಹಾರ್ ನೇಚರ್ಸ್ ಅಪಾರ್ಟ್‌ಮೆಂಟ್‌ನ ಫ್ಲಾಟ್ ಸಂಖ್ಯೆ 302 ರಲ್ಲಿ ತಪಾಸಣೆ ನಡೆಸಿದಾಗ, ಟ್ರಾಲಿ ಬ್ಯಾಗ್‌ಗಳು ಮತ್ತು ಕಪಾಟುಗಳಲ್ಲಿ ಬಚ್ಚಿಟ್ಟಿದ್ದ 4 ಕೋಟಿ ರೂಪಾಯಿಗೂ ಅಧಿಕ ನಗದು ಪತ್ತೆಯಾಗಿದೆ. ಅಧಿಕಾರಿಗಳು ಸಿಕ್ಕ ಹಣವನ್ನು ಎಣಿಸಲು ಯಂತ್ರಗಳನ್ನು ಬಳಸುತ್ತಿದ್ದಾರೆ.

ಅಧಿಕಾರಿಯ ಮನೆಯಲ್ಲಿ 4 ಕೋಟಿ ರೂಪಾಯಿ ಪತ್ತೆಯಾಗುವುದರ ಜೊತೆಗೆ, ಅವರ ಕಚೇರಿ ಡ್ರಾಯರ್‌ನಿಂದ 1.20 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದೆ. ಇದಲ್ಲದೇ, ಅಧಿಕಾರಿಗೆ ಸೇರಿದ ಭುವನೇಶ್ವರದ ಬೆಟ್ಟಗಳ ಬಳಿ 2,400 ಚದರ ಅಡಿ ವಿಸ್ತೀರ್ಣದ ಎರಡು ಅಂತಸ್ತಿನ ಕಟ್ಟಡ ಹಾಗೂ ಸುನಲಂಕಾ ಗ್ರಾಮದಲ್ಲಿ 130 ಚದರ ಮೀಟರ್ ವಿಸ್ತೀರ್ಣದ ಮತ್ತೊಂದು ಬೃಹತ್ ಕಟ್ಟಡವನ್ನು ಜಾಗೃತ ದಳದ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!