ಉದಯವಾಹಿನಿ, ಟೆಲ್ ಅವಿವ್: ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಎರಡು ದಿನಗಳ ಭೇಟಿಗೆ ಇಸ್ರೇಲ್‌ಗೆ ಆಗಮಿಸಿದ ಮೋದಿ ಅವರು ವಿಮಾನ ಇಳಿದು ಬರುತ್ತಿದ್ದಂತೆ ನೆತನ್ಯಾಹು ನಗುನಗುತ್ತಾ ಕೈ ಹಿಡಿದು ಅಪ್ಪಿಕೊಂಡರು. ಈ ಸಂದರ್ಭದಲ್ಲಿ ನೆತನ್ಯಾಹು ಪತ್ನಿ ಸಾರಾ ಅವರು ಜೊತೆಗಿದ್ದು ಮೋದಿ ಅವರನ್ನು ಸ್ವಾಗತಿಸಿದರು.
ಮೋದಿ ಅವರನ್ನು ನೆತನ್ಯಾಹು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ್ದು ಹೊಸದೆನಲ್ಲ. ಈ ಹಿಂದೆ 2017 ರ ಜುಲೈನಲ್ಲಿ ಮೊದಲ ಬಾರಿಗೆ ಇಸ್ರೇಲ್‌ಗೆ ತೆರಳಿದ್ದಾಗಲೂ ನೆತನ್ಯಾಹು ಸ್ವಾಗತಿಸಿದ್ದರು.ಇಂದು ಮತ್ತು ನಾಳೆ ನಡೆಯಲಿರುವ ಕಾರ್ಯಕ್ರಮಗಳಲ್ಲಿ ಇಬ್ಬರೂ ನಾಯಕರು ಜೊತೆಯಾಗಿ ಭಾಗಿಯಾಗಲಿದ್ದಾರೆ. ನಾಳೆ ದ್ವಿಪಕ್ಷೀಯ ಮಾತುಕತೆ ಮತ್ತು ಜಂಟಿ ಪತ್ರಿಕಾಗೋಷ್ಠಿ ನಡೆಯಲಿದೆ.
ಮೋದಿ ಇಸ್ರೇಲ್ ಸಂಸತ್ ಕ್ನೆಸೆಟ್‌ನಲ್ಲಿ ಭಾಷಣ ಮಾಡಲಿದ್ದಾರೆ. ಯಾದ್ ವಶೆಮ್ ಹೋಲೋಕಾಸ್ಟ್ ಸ್ಮಾರಕ ಸಂಗ್ರಹಾಲಯಕ್ಕೆ ಭೇಟಿ ಹಾಗೂ ಇಸ್ರೇಲ್‌ನಲ್ಲಿ ನೆಲೆಸಿರುವ ಭಾರತೀಯ-ಯಹೂದಿ ಸಮುದಾಯದೊಂದಿಗೆ ಮೋದಿ ಸಂವಾದ ನಡೆಸಲಿದ್ದಾರೆ.
ಭಾರತದ ಯಾವೊಬ್ಬ ಪ್ರಧಾನಿ 2017 ರವರೆಗೆ ಇಸ್ರೇಲ್‌ಗೆ ಭೇಟಿ ನೀಡಿರಲಿಲ್ಲ. ಅಲ್ಲಿಯವರೆಗೆ ಅಧಿಕಾರಿಗಳ ಮಟ್ಟದ ಮಾತುಕತೆ ನಡೆಯತ್ತಿತ್ತು. ಆದರೆ ಮೋದಿ ಮೊದಲ ಬಾರಿಗೆ ಇಸ್ರೇಲ್‌ಗೆ ಭೇಟಿ ನೀಡುವ ಮೂಲಕ ಎಲ್ಲರ ಹುಬ್ಬೇರಿಸಿದ್ದರು. ಇಸ್ರೇಲ್ ಅಲ್ಲದೇ ಪ್ಯಾಲೆಸ್ಟೈನ್ ಜೊತೆಗೂ ಮೋದಿ ಅವರ ಸಂಬಂಧ ಚೆನ್ನಾಗಿದೆ. 2018ರ ಫೆಬ್ರವರಿಯಲ್ಲಿ ಪ್ಯಾಲೆಸ್ಟೈನ್‌ಗೆ ಮೋದಿ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಪ್ಯಾಲೆಸ್ಟೈನ್ ಅತ್ಯುತ್ತಮ ಗೌರವ ʼಗ್ರ್ಯಾಂಡ್ ಕಾಲರ್ʼ ನೀಡಿ ಪುರಸ್ಕರಿಸಿತ್ತು.
