ಉದಯವಾಹಿನಿ, ವಾಷಿಂಗ್ಟನ್: ಇರಾನ್ ಮೇಲೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುದ್ಧ ಸಾರುವ ಭೀತಿ ನಡುವೆ, ಅಮೆರಿಕದ ಗುಪ್ತಚರ ಸಂಸ್ಥೆಯಾದ ಸಿಐಎ ಇರಾನ್ ನಾಗರಿಕರಿಗೆ ಬಹಿರಂಗ ಆಫರ್ ಒಂದನ್ನು ನೀಡಿದೆ. ಇರಾನ್ ಸರ್ಕಾರದ ರಹಸ್ಯಗಳನ್ನು ಹಂಚಿಕೊಳ್ಳಲು ಇಚ್ಛಿಸುವವರಿಗಾಗಿ ಫಾರ್ಸಿ ಭಾಷೆಯಲ್ಲಿ ವಿಶೇಷ ಸೂಚನೆಗಳನ್ನು ಬಿಡುಗಡೆ ಮಾಡಿದೆ.
ಡಿಜಿಟಲ್ ವೇದಿಕೆಯಲ್ಲಿ ನೇಮಕಾತಿ: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಮೇಲೆ ಮಿಲಿಟರಿ ದಾಳಿ ನಡೆಸುವ ಸಾಧ್ಯತೆಗಳ ಬಗ್ಗೆ ಚಿಂತಿಸುತ್ತಿರುವ ಈ ಹೊತ್ತಿನಲ್ಲಿ, ಸಿಐಎ ತನ್ನ ಎಕ್ಸ್ (ಟ್ವಿಟರ್), ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಖಾತೆಗಳಲ್ಲಿ ಫಾರ್ಸಿ ಭಾಷೆಯ ವಿಡಿಯೋ ಸಂದೇಶ ಪ್ರಕಟಿಸಿದೆ.
“ಹಲೋ, ಸಿಐಎ ನಿಮ್ಮ ಮಾತನ್ನು ಕೇಳಿಸಿಕೊಳ್ಳುತ್ತದೆ. ಜೊತೆಗೆ, ನಿಮಗೆ ಸಹಾಯ ಮಾಡಲೂ ಬಯಸುತ್ತದೆ. ನಮ್ಮನ್ನು ಸುರಕ್ಷಿತವಾಗಿ ಸಂಪರ್ಕಿಸಲು ಇಲ್ಲಿವೆ ಕೆಲವು ಟಿಪ್ಸ್,” ಎಂದು ಅಮೆರಿಕದ ಬೇಹುಗಾರಿಕಾ ಸಂಸ್ಥೆ ಹೇಳಿದೆ.
ಇರಾನ್ ಸರ್ಕಾರದ ಕಣ್ಗಾವಲಿನಿಂದ ತಪ್ಪಿಸಿಕೊಂಡು ಮಾಹಿತಿ ನೀಡಲು ಕೇಂದ್ರೀಯ ತನಿಖಾ ದಳ(ಸಿಐಎ) ಈ ಕೆಳಗಿನ ಮಾರ್ಗಗಳನ್ನು ಅನುಸರಿಸಲು ಇರಾನ್ ಜನರಿಗೆ ಸೂಚಿಸಿದೆ.
VPN ಬಳಕೆ: ಇಂಟರ್ನೆಟ್ ನಿರ್ಬಂಧಗಳನ್ನು ಮೀರಿ ಸಿಐಎ ಸಂಪರ್ಕಿಸಲು ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್ ಬಳಸಲು ಸೂಚನೆ.
ಡಾರ್ಕ್‌ನೆಟ್ (Darknet): ಗುರುತು ಪತ್ತೆಯಾಗದಂತೆ ಇಂಟರ್ನೆಟ್‌ನ ರಹಸ್ಯ ತಾಣಗಳ ಮೂಲಕ ಸಂಪರ್ಕಿಸಲು ಸಲಹೆ.
ಡಿಸ್ಪೋಸಬಲ್ ಡಿವೈಸ್: ಪತ್ತೆ ಹಚ್ಚಲು ಸಾಧ್ಯವಾಗದಂತಹ ತಾತ್ಕಾಲಿಕ ಎಲೆಕ್ಟ್ರಾನಿಕ್ ಸಾಧನಗಳ ಬಳಕೆ.
ಬ್ರೌಸಿಂಗ್ ಹಿಸ್ಟರಿ ಡಿಲೀಟ್: ಮಾಹಿತಿ ನೀಡಿದ ನಂತರ ಇಂಟರ್ನೆಟ್ ಇತಿಹಾಸವನ್ನು ಅಳಿಸಿಹಾಕಲು ಸೂಚನೆ.
ಹೆಚ್ಚುತ್ತಿರುವ ಉದ್ವಿಗ್ನತೆ: ಇರಾನ್‌ನಲ್ಲಿ ಸರ್ಕಾರಿ ವಿರೋಧಿ ಪ್ರತಿಭಟನೆಗಳು ತೀವ್ರಗೊಂಡಿರುವ ಈ ಸಮಯದಲ್ಲಿ ಅಮೆರಿಕ ಗುಪ್ತಚರ ಸಂಸ್ಥೆ ಈ ಕ್ರಮಕ್ಕೆ ಮುಂದಾಗಿದೆ. ಈಗಾಗಲೇ ರಷ್ಯನ್, ಮ್ಯಾಂಡರಿನ್ (ಚೀನಾ) ಮತ್ತು ಕೊರಿಯನ್ ಭಾಷೆಗಳಲ್ಲಿ ಇಂತಹ ಅಭಿಯಾನ ನಡೆಸಿ ಯಶಸ್ವಿಯಾಗಿರುವುದಾಗಿ ಸಿಐಎ ನಿರ್ದೇಶಕ ಜಾನ್ ರಾಟ್‌ಕ್ಲಿಫ್ ತಿಳಿಸಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಅಮೆರಿಕ ದಶಕಗಳಲ್ಲೇ ಅತಿದೊಡ್ಡ ಮಿಲಿಟರಿ ಪಡೆಯನ್ನು ನಿಯೋಜಿಸಿದ್ದು, ಇರಾನ್‌ನ ಪರಮಾಣು ಚಟುವಟಿಕೆಗಳ ಮೇಲೆ ತೀವ್ರ ನಿಗಾ ಇರಿಸಿದೆ. ಈ ನಡುವೆ ಸಿಐಎ ಬಿಡುಗಡೆ ಮಾಡಿರುವ ಈ ವಿಡಿಯೋ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆ ಪಡೆದಿದ್ದು, ಇರಾನ್ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಉಭಯ ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಹಿನ್ನೆಲೆ ಭಾರತ ತನ್ನ ನಾಗರಿಕರನ್ನು ಅಲ್ಲಿಂದ ತಕ್ಷಣವೇ ವಾಪಸ್ ಬರಲು ಸೂಚಿಸಿದೆ..
