ಉದಯವಾಹಿನಿ: ಬೇಸಿಗೆಕಾಲ ಶುರು ಆಯ್ತು. ಕಲ್ಲಂಗಡಿ ಹಣ್ಣು , ಜ್ಯೂಸ್, ಐಸ್ ಕ್ರೀಂ ತಿಂದು ತಂಪಾಗೋಣ ಅಂತ ಏನಾದರೂ ಪ್ಲ್ಯಾನ್​ ಮಾಡಿದ್ದರೆ ಎಚ್ಚರವಾಗಿರಿ. ಏಕೆಂದರೆ ನೀವು ತಿನ್ನುವ ಕಲ್ಲಂಗಡಿ ಹಣ್ಣು, ಖುಷ್​ ಖುಷಿಯಿಂದ ಸವಿಯುವ ಐಸ್ ಕ್ರೀಂ, ಕೂಲ್ ಡ್ರಿಂಕ್ಸ್ ಎಷ್ಟು ಸುರಕ್ಷಿತ? ಹೀಗಂತ ನಾವಲ್ಲ, ಖುದ್ದು ಆರೋಗ್ಯ ಇಲಾಖೆ ಶಂಕೆ ವ್ಯಕ್ತಪಡಿಸಿದೆ. ಹೀಗಾಗಿ ಸದ್ಯದಲ್ಲೇ ಸ್ಯಾಂಪಲ್ ಟೆಸ್ಟ್ ಕೂಡ ನಡೆಯಲಿದೆ.

ಬೇಸಿಗೆ ಕಾಲದ ಆರಂಭದಲ್ಲಿಯೇ ಕಲ್ಲಂಗಡಿ ಹಣ್ಣಿಗೆ ಬೇಡಿಕೆ ಹೆಚ್ಚಳವಾಗಿದೆ. ಆದರೆ ಕಲ್ಲಂಗಡಿ ಹಣ್ಣು ನಿಜಕ್ಕೂ ಸುರಕ್ಷಿತನಾ ಎನ್ನುವ ಅನುಮಾನ ಮೂಡಿದೆ. ಕಳೆದ ಸಲ ಕಲ್ಲಂಗಡಿ ಹಣ್ಣಿಗೆ ಕೃತಕ ಬಣ್ಣ ಉಪಯೋಗಿಸುವ ಆತಂಕ ಎದುರಾದ ಬೆನ್ನಲ್ಲೇ ಈ ವರ್ಷನೂ ಆರಂಭದಲ್ಲಿಯೇ ಕಲ್ಲಂಗಡಿ ಹಣ್ಣಿನ ಸ್ಯಾಂಪಲ್ ಪಡೆಯುವುದಕ್ಕೆ ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ. ಕಲ್ಲಂಗಡಿ ಹಣ್ಣಿನ ಜೊತೆಗೆ ಐಸ್ ಕ್ರೀಂ, ಜ್ಯೂಸ್​​ಗಳ ಸ್ಯಾಂಪಲ್ ಪಡೆಯುವುದಕ್ಕೂ ತೀರ್ಮಾನಿಸಲಾಗಿದೆ.

ಬೇಸಿಗೆ ದಿನದಲ್ಲಿ ಕಲ್ಲಂಗಡಿಗೆ ಭಾರೀ ಬೇಡಿಕೆ ಇದ್ದು, ಹೆಚ್ಚೆ ಮಾರಾಟ ಮಾಡಲು ಹಾಗೂ ಜನರನ್ನು ಆಕರ್ಷಿಸಲು ವ್ಯಾಪಾರಿಗಳು ಕೃತಕ ಬಣ್ಣ ಬಳಕೆ ಮಾಡುವ ಪ್ರಕರಣಗಳು ಪತ್ತೆಯಾಗಿವೆ. ಕಲ್ಲಂಗಡಿ ಹಣ್ಣಿನ ಬಳ್ಳಿಗೆ ಎರಿಥ್ರೋಸಿನ್ ಇಂಜೆಕ್ಟ್ ಮಾಡುವ ಸುಳಿವು ಸಿಕ್ಕಿದೆ. ಹೀಗಾಗಿ ಮಾರ್ಚ್ ತಿಂಗಳ ಆರಂಭದಲ್ಲಿಯೇ ಕಲ್ಲಂಗಡಿ ಹಣ್ಣಿನ ಸ್ಯಾಂಪಲ್ ಟೆಸ್ಟ್ ನಡೆಸಲು ಆಹಾರ ಮತ್ತು ಸುರಕ್ಷಿತಾ ಇಲಾಖೆಗೆ ಆರೋಗ್ಯ ಇಲಾಖೆ ಸೂಚಿಸಿದೆ. ಇಂಜೆಕ್ಷನ್ ಕೊಟ್ಟ ಕಲ್ಲಂಗಡಿ ಹಣ್ಣಿನಲ್ಲಿ ನೈಟ್ರೇಟ್ ಮತ್ತು ಕೃತಕ ಡೈ(ಕ್ರೋಮೇಟ್, ಮೆಥನಾಲ್ ಹಳದಿ, ಸುಡಾನ್ ಕೆಂಪು) ಕಾರ್ಬೈಡ್, ಆಕ್ಸಿಟಾಸಿನ್ ಇರಬಹುದು.

ಕಲ್ಲಂಗಡಿ ಹಣ್ಣು ಬೇಗನೆ ಬೆಳೆಯಲು ನಿಟ್ರೋಜನ್ ಬಳಸಲಾಗುತ್ತದೆ. ನಿಟ್ರೋಜನ್ ದೇಹದೊಳಗೆ ಹೋದರೆ ಅದು ತುಂಬಾ ಹಾನಿಕರ ಮತ್ತು ಇದರಲ್ಲಿ ವಿಷಕಾರಿ ಅಂಶಗಳಿವೆ. ಕ್ರೋಮೇಟ್, ಮೆಂಥಾಲ್ ಯಲ್ಲೋ ಮತ್ತು ಸುಡಾನ್ ರೆಡ್ ಬಣ್ಣವು ಕಲ್ಲಂಗಡಿಗೆ ಗಾಢವಾದ ಬಣ್ಣ ನೀಡಲು ಬಳಸುತ್ತಾರೆ. ಕಾರ್ಬೈಡ್ ಕಿಡ್ನಿ ಮತ್ತು ಯಕೃತ್​ಗೆ ತುಂಬಾ ಅಪಾಯಕಾರಿ. ಇದರಿಂದ ಕಿಡ್ನಿಯು ತೀವ್ರವಾಗಿ ಹಾನಿಗೀಡಾಗಬಹುದು. ಮೆಂಥಾಲ್ ಯಲ್ಲೋ ಬಳಕೆಯಿಂದ ಕ್ಯಾನ್ಸರ್ ಬರುವ ಅಪಾಯವೂ ಇದೆ ಎಂದು ಆಹಾರ ತಜ್ಞೆ ಡಾ.ಕೀರ್ತಿ ಹಿರಿಸಾವೆ ಹೇಳುತ್ತಾರೆ. ಇನ್ನು ಗ್ರಾಹಕರು ಮಾತ್ರ ಇತ್ತೀಚೆಗೆ ಯಾವ ಆಹಾರ ತಿನ್ನುವುದು, ಯಾವುದು ಬಿಡುವುದು ನಮ್ಮ ಎಚ್ಚರಿಕೆಯಲ್ಲಿ ನಾವು ಇರಬೇಕು ಎನ್ನುತ್ತಾರೆ.

Leave a Reply

Your email address will not be published. Required fields are marked *

error: Content is protected !!