ಉದಯವಾಹಿನಿ, ನವದೆಹಲಿ: ದೆಹಲಿ ಹೈಕೋರ್ಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ತಮ್ಮ ನಿವಾಸದಲ್ಲಿ ಅಪಾರ ಪ್ರಮಾಣದ ಸುಟ್ಟು ಕರಕಲಾದ ನಗದು ರಾಶಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ವಿರುದ್ಧದ ತನಿಖೆಗಾಗಿ ರಚಿಸಲಾಗಿದ್ದ ತ್ರಿಸದಸ್ಯ ಸಮಿತಿಯನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮರು ರಚಿಸಿದ್ದಾರೆ.
ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿ ಮಣೀಂದ್ರ ಮೋಹನ್ ಶ್ರೀವಾಸ್ತವ ಅವರು ಮಾರ್ಚ್ 6 ರಂದು ನಿವೃತ್ತಿಯಾಗಲಿರುವ ಹಿನ್ನೆಲೆಯಲ್ಲಿ ಬಾಂಬೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಚಂದ್ರಶೇಖರ್ ಅವರನ್ನು ಸಮಿತಿಗೆ ಸೇರ್ಪಡೆ ಮಾಡಲಾಗಿದೆ.
2025ರ ಆಗಸ್ಟ್ 12ರಂದು ರಚಿಸಲಾಗಿದ್ದ ಮೂಲ ಸಮಿತಿಯಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್, ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮಣೀಂದ್ರ ಮೋಹನ್ ಶ್ರೀವಾಸ್ತವ ಹಾಗೂ ಹಿರಿಯ ವಕೀಲ ಬಿ.ವಿ ಆಚಾರ್ಯ ಸದಸ್ಯರಾಗಿದ್ದರು.
ಗಮನಾರ್ಹ ಅಂಶವೆಂದರೆ ಲೋಕಸಭಾ ಸ್ಪೀಕರ್ ರಚಿಸಿರುವ ತ್ರಿಸದಸ್ಯ ಸಮಿತಿ ರದ್ದುಗೊಳಿಸುವಂತೆ ನ್ಯಾ. ವರ್ಮಾ ಅವರು ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಈಚೆಗೆ ತಿರಸ್ಕರಿಸಿತ್ತು. ಕೆಲ ದಿನಗಳ ಹಿಂದೆ ನ್ಯಾ. ವರ್ಮಾ ಅವರು, ಅಗ್ನಿ ಅವಘಡ ಸಂಭವಿಸಿದ ವೇಳೆ ಅವರು ತಮ್ಮ ಅಧಿಕೃತ ನಿವಾಸದಲ್ಲಿ ಇರಲಿಲ್ಲ. ಬೆಂಕಿ ನಂದಿಸಲು ಬಂದ ಅಗ್ನಿಶಾಮಕ ದಳ ಆ ಸ್ಥಳದಿಂದ ಯಾವುದೇ ನಗದು ವಶಪಡಿಸಿಕೊಂಡಿರಲಿಲ್ಲ ಎಂದು ತಿಳಿಸಿದ್ದರು.
