ಉದಯವಾಹಿನಿ, ಶಿಮ್ಲಾ: ಇತ್ತೀಚೆಗೆ ದೆಹಲಿಯಲ್ಲಿ ನಡೆದಿದ್ದ ಎಐ ಇಂಪ್ಯಾಕ್ಟ್ ಶೃಂಗ ಸಭೆಯಲ್ಲಿ ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದ ಮೂವರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನ ಬಂಧಿಸಿ, ಕರೆತರುವಾಗ ಭಾರೀ ನಾಟಕೀಯ ಬೆಳವಣಿಗೆ ನಡೆದಿದೆ. ಆರೋಪಿಗಳನ್ನ ಬಂಧಿಸಲು ಹಿಮಾಚಲ ಪ್ರದೇಶದ ಶಿಮ್ಲಾ ತೆರಳಿದ್ದ ದೆಹಲಿ ಪೊಲೀಸರನ್ನೇ ಶಿಮ್ಲಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಎರಡೂ ಖಾಕಿ ಪಡೆಗಳ ನಡುವೆ ಘರ್ಷಣೆ ಏರ್ಪಟ್ಟಿದ್ದು, ಚರ್ಚೆಗೂ ಗ್ರಾಸವಾಗಿದೆ.
ಹೆಚ್ಚುವರಿ ಮ್ಯಾಜಿಸ್ಟ್ರೇಟ್ (ACJM) ಏಕಾಂಶ್ ಕಪಿಲ್ ಅವರು ನೀಡಿದ ಟ್ರಾನ್ಸಿಟ್ ರಿಮಾಂಡ್ ಅಡಿಯಲ್ಲಿ ದೆಹಲಿ ಪೊಲೀಸ್ ತಂಡ ಮೂವರು ಆರೋಪಿಗಳನ್ನ ಕರೆದೊಯ್ಯುತ್ತಿತ್ತು. ಈ ವೇಳೆ ದೆಹಲಿ ಪೊಲೀಸರನ್ನು ತಡೆದ ಶಿಮ್ಲಾ ಖಾಕಿ ಆರೋಪಿಗಳಾದ ಸೌರವ್, ಅರ್ಬಾಜ್ ಮತ್ತು ಸಿದ್ಧಾರ್ಥ್ ಮೂವರನ್ನ ಬಲವಂತವಾಗಿ ಕರೆದೊಯ್ಯುತ್ತಿದ್ದಾರೆ. ಅಲ್ಲದೇ ಆರೋಪಿಗಳು ತಂಗಿದ್ದ ರೆಸಾರ್ಟ್‌ನಲ್ಲಿರುವ ಸಿಸಿಟಿವಿ ಡಿವಿಆರ್‌ಗಳನ್ನ ಯಾವುದೇ ಅನುಮತಿಯಿಲ್ಲದೇ ತೆಗದುಕೊಂಡಿದ್ದಾರೆ ಎಂದು ಆರೋಪಿಸಿದ್ರು.
ಜೊತೆಗೆ ಅಪಹರಣ ಪ್ರಕರಣ ದಾಖಲಿಸಿ, ವಾಹನಗಳನ್ನೂ ವಶಕ್ಕೆ ಪಡೆದಿದ್ದರು. ಈ ವೇಳೆ ಶಿಮ್ಲಾ-ದೆಹಲಿ ಪೊಲೀಸರ ನಡುವೆ ಘರ್ಷಣೆ ಏರ್ಪಟ್ಟಿತು. ಕೊನೆಗೆ ಮೂವರು ಆರೋಪಿಗಳನ್ನ ಕರೆದುಕೊಂಡು ಹೋಗಲು ಅನುವು ಮಾಡಿಕೊಟ್ಟ ಬಳಿಕ 24 ಗಂಟೆಗಳ ನಂತರ ಘರ್ಷಣೆ ಶಮನವಾಯಿತು.
ನಂತರ ಬಂಧಿತ ಮೂವರು ಯೂತ್ ಕಾಂಗ್ರೆಸ್ ಕಾರ್ಯಕರ್ತರನ್ನು ಶಿಮ್ಲಾ ಜಿಲ್ಲಾ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಈ ಸಂದರ್ಭದಲ್ಲಿ ದೆಹಲಿ ಪೊಲೀಸರು ಉಪಸ್ಥಿತರಿದ್ದರು.
