ವಾರಣಾಸಿ(ಉತ್ತರ ಪ್ರದೇಶ): ಇಲ್ಲಿನ ವಿಶ್ವಪ್ರಸಿದ್ಧ ಅಸ್ಸಿ ಘಾಟ್‌ನಲ್ಲಿ ಮೆಕ್ಸಿಕೋ ಜೋಡಿ ದೋಣಿಯಲ್ಲಿ ಹಿಂದೂ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಈ ಅಪರೂಪದ ವಿವಾಹ ವೀಕ್ಷಿಸಲು ಸ್ಥಳೀಯರು, ಭಕ್ತರು ಮತ್ತು ಪ್ರವಾಸಿಗರ ದೊಡ್ಡ ಗುಂಪು ಘಾಟ್‌ನಲ್ಲಿ ನೆರೆದಿತ್ತು.
ವೇದ ಮಂತ್ರಗಳ ನಡುವೆ ವಿವಾಹ ಸಮಾರಂಭ: ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳಿಂದ ಆಕರ್ಷಿತರಾಗಿದ್ದ ಮೆಕ್ಸಿಕನ್ ನಿವಾಸಿಗಳಾದ ರುಯಿಜ್ ಕ್ಯಾಬ್ರೋಲ್ ಮತ್ತು ಗೊನ್ಜಾಲೊ ಮಿಗುಯೆಲ್, ಭಾರತದ ಆಧ್ಯಾತ್ಮಿಕ ರಾಜಧಾನಿ ವಾರಣಾಸಿಯಲ್ಲಿ ವಿವಾಹವಾಗಲು ನಿರ್ಧರಿಸಿದ್ದರು. ಅದರಂತೆ ಗಂಗಾ ನದಿಯಲ್ಲಿ ದೋಣಿಯ ಮೇಲೆ ವೇದ ಮಂತ್ರಗಳೊಂದಿಗೆ ಸಂಪ್ರದಾಯ ಬದ್ಧವಾಗಿ ಮದುವೆಯಾದರು.
ಭಾರತೀಯ ಉಡುಪುಗಳನ್ನು ಧರಿಸಿದ್ದ ವಧು-ವರ: ವಧು ಕೆಂಪು ಬಣ್ಣದ ಬನಾರಸಿ ಸೀರೆ ಮತ್ತು ವರ ಧೋತಿ-ಕುರ್ತಾ ಧರಿಸಿದ್ದರು. ವಿವಾಹ ಸಮಾರಂಭವನ್ನು ಆಚಾರ್ಯ ದೀಪಕ್ ಪಾಂಡೆ, ಹಿಂದೂ ಪದ್ಧತಿಗಳ ಪ್ರಕಾರ ನೆರವೇರಿಸಿದರು. ಮಂತ್ರಗಳ ಪಠಣ, ಧೂಪದ್ರವ್ಯ ಗಂಗಾ ನದಿಯ ಶಾಂತ ಅಲೆಗಳು ಸಮಾರಂಭವನ್ನು ಆಧ್ಯಾತ್ಮಿಕವಾಗಿಸಿದವು.
ಘಾಟ್‌ನಲ್ಲಿ ನೆರೆದಿದ್ದವರಿಂದ ನವದಂಪತಿಗೆ ಆಶೀರ್ವಾದ: ಘಾಟ್‌ನಲ್ಲಿ ನೆರೆದಿದ್ದವರು ಪುಷ್ಪವೃಷ್ಟಿ ಸುರಿಸಿ ನವ ದಂಪತಿಯನ್ನು ಆಶೀರ್ವದಿಸಿದರು. ಅನೇಕ ದೇಶಿ ಮತ್ತು ವಿದೇಶಿ ಪ್ರವಾಸಿಗರು ಈ ಅದ್ಭುತ ಕ್ಷಣವನ್ನು ತಮ್ಮ ಕ್ಯಾಮರಾಗಳಲ್ಲಿ ಸೆರೆಹಿಡಿದರು. ಇದನ್ನು ಸಂಸ್ಕೃತಿಗಳ ಸಂಗಮ ಎಂದು ಬಣ್ಣಿಸಿದರು ಮತ್ತು ಈ ಕಾರ್ಯಕ್ರಮವು ಭಾರತೀಯ ಸಂಪ್ರದಾಯಗಳ ಜಾಗತಿಕ ಸ್ವೀಕೃತಿಯನ್ನು ಸಂಕೇತಿಸುತ್ತದೆ ಎಂದು ಹೇಳಿದರು.
ಹಿಂದೂ ಸಂಪ್ರದಾಯದಂತೆ ಮದುವೆಯಾದ ಅಮೆರಿಕದ ಜೋಡಿ: ಇದಕ್ಕೂ ಮುನ್ನ ಕಳೆದ ವರ್ಷ ಡಿಸೆಂಬರ್ನಲ್ಲಿ ಅಮೆರಿಕದ ಜೋಡಿಯೊಂದು ವಾರಣಾಸಿಯ ಪ್ರಸಿದ್ಧ ಗೌರಿ ಕೇದಾರೇಶ್ವರ ದೇವಸ್ಥಾನದಲ್ಲಿ ಶನಿವಾರ ಹಿಂದೂ ಆಚರಣೆಗಳಂತೆ ವಿಧಿವತ್ತಾಗಿ ವಿವಾಹವಾಗಿತ್ತು. ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯು ಅಮೆರಿಕದ ಲಾಸ್ ಏಂಜಲೀಸ್ ನಗರದ ನಿವಾಸಿಗಳಾದ ಜೇಸನ್ ಮ್ಯಾಟ್ಜ್ನರ್ ಮತ್ತು ಅವರ ಮನದನ್ನೆ ಲಾರೆನ್ ಕೊಜಾಕ್ ಅವರನ್ನು ಭಾರತಕ್ಕೆ ಕರೆತಂದಿತ್ತು. ಭಾರತೀಯ ತತ್ವಶಾಸ್ತ್ರ ಮತ್ತು ಸಂಪ್ರದಾಯಗಳಿಂದ ಆಳವಾಗಿ ಪ್ರಭಾವಿತರಾದ ಈ ಜೋಡಿ ವಾರಣಾಸಿಗೆ ಬಂದು ಸಾಂಪ್ರದಾಯಿಕ ಹಿಂದೂ ಪದ್ಧತಿಗಳಂತೆ ಸತಿಪತಿಗಳಾದರು.
ಪಂಡಿತ್ ಅನುರಾಗ್ ಮಿಶ್ರಾ ಮತ್ತು ವಾರಣಾಸಿ ಎಕ್ಸ್‌ಪೀರಿಯೆನ್ಸ್ ಸಂಸ್ಥಾಪಕ ಕುನಾಲ್ ರಕ್ಷಿತ್ ಅವರು ವಿವಾಹಕ್ಕೆ ವ್ಯವಸ್ಥೆ ಮಾಡಿದ್ದರು. ಜೇಸನ್ ಮತ್ತು ಲಾರೆನ್ ದೇವಾಲಯದ ಆವರಣದಲ್ಲಿ ವೇದ ಪಠಣ, ಧಾರ್ಮಿಕ ವಿಧಿವಿಧಾನಗಳು ಮತ್ತು ಸಾಂಪ್ರದಾಯಿಕ ಆಚರಣೆಗಳ ನಡುವೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕಾಶಿಯ ಪ್ರಾಚೀನ ಮತ್ತು ಪೌರಾಣಿಕ ಗೌರಿ ಕೇದಾರೇಶ್ವರ ದೇವಸ್ಥಾನದಲ್ಲಿ ವಿದೇಶಿ ಜೋಡಿಯ ವಿವಾಹಕ್ಕೆ ಸ್ಥಳೀಯರೂ ಸಾಕ್ಷಿಯಾಗಿದ್ದರು.
