ಉದಯವಾಹಿನಿ, ಎರ್ನಾಕುಲಂ (ಕೇರಳ): ಹಿಟ್ ಅಂಡ್​ ರನ್​ಗೆ ಕರ್ನಾಟಕದ ಇಬ್ಬರು ಬಲಿಯಾಗಿರುವ ಘಟನೆ ಕೇರಳದ ತ್ರಿಕ್ಕಲತ್ತೂರು ಪಲ್ಲಿತಾಳಂ ಬಳಿಯ ಎಂಸಿ ರಸ್ತೆಯಲ್ಲಿ ಗುರುವಾರ ಮಧ್ಯರಾತ್ರಿ ಸಂಭವಿಸಿದೆ. ಮೃತರನ್ನು ಮುತ್ತುರಾಜು (29) ಮತ್ತು ಸರವಣನ್ (24) ಎಂದು ಗುರುತಿಸಲಾಗಿದೆ.
ಪೆಝಕ್ಕಪ್ಪಿಲ್ಲಿ ಪಲ್ಲಿಪ್ಪಾಡಿ ಪ್ರದೇಶದಲ್ಲಿ ಮೃತರು ಜೆಸಿಬಿ ಆಪರೇಟರ್‌ಗಳಾಗಿ ಕೆಲಸ ಮಾಡುತ್ತಿದ್ದರು. ತಡರಾತ್ರಿ ತಮ್ಮ ಸ್ಕೂಟರ್‌ನಲ್ಲಿ ಸಂಚರಿಸುತ್ತಿದ್ದಾಗ ಅಪರಿಚಿತ ವಾಹನದ ಚಾಲಕ ವೇಗವಾಗಿ ಬಂದು ಡಿಕ್ಕಿ ಹೊಡೆದು, ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.
ಡಿಕ್ಕಿ ರಭಸಕ್ಕೆ ಇಬ್ಬರೂ ರಸ್ತೆಗೆ ಹಾರಿಬಿದ್ದಿ ಪರಿಣಾಮ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ನಂತರ ವಾಹನ ನಿಲ್ಲಿಸದೇ ಸ್ಥಳದಿಂದ ವಾಹನ ಸವಾರು ಎಸ್ಕೇಪ್ ಆಗಿದ್ದಾನೆ ಎಂದು ಪ್ರಾಥಮಿಕ ಮೂಲಗಳು ಮಾಹಿತಿ ನೀಡಿವೆ.

ತಡರಾತ್ರಿ ವೇಳೆ ಸಂಭವಿಸಿದ ಅಪಘಾತದಿಂದ ಜೋರಾದ ಶಬ್ದ ಕೇಳಿ ಸ್ಥಳೀಯರು ಸ್ಥಳಕ್ಕೆ ಆಗಮಿಸಿ, ತಕ್ಷಣವೇ ಗಾಯಾಳುಗಳುಗಳನ್ನು ಹತ್ತಿರದ ಆಸ್ಪತ್ರೆಗೆ ರವಾನಿಸಿದ್ದರು. ಆದರೆ, ವೈದ್ಯರು, ಈಗಾಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.ಹಿಟ್ ಅಂಡ್​ ರನ್ ಪ್ರಕರಣ ವಾಹನ ಮತ್ತು ಆರೋಪಿಯನ್ನು ಪತ್ತೆ ಹಚ್ಚಲು ಮುವಾಟ್ಟುಪುಳ ಪೊಲೀಸರು ತೀವ್ರ ತನಿಖೆ ಆರಂಭಿಸಿದ್ದಾರೆ. ಈ ಕುರಿತು ಈಟಿವಿ ಭಾರತ್ ಜೊತೆ ಮಾತನಾಡಿದ ಮುವಾಟ್ಟುಪುಳ ಪೊಲೀಸ್ ಠಾಣೆಯ ಅಧಿಕಾರಿ ಬಾಸಿಲ್ ಥಾಮಸ್, ‘ಇಲಾಖೆಯು ಶೀಘ್ರದಲ್ಲೇ ವಾಹನ ಪತ್ತೆ ಹಚ್ಚಿ, ಸವಾರನ ವಿರುದ್ಧ ಕ್ರಮ ಕೈಗೊಳ್ಳಲಿದೆ’ ಎಂದು ತಿಳಿಸಿದರು.
ವಾಹನದ ಗುರುತಿನ ಸುಳಿವು ನೀಡಬಹುದಾದ ಅವಶೇಷ ಅಥವಾ ವಾಹನದ ತುಣುಕುಗಳಿಗಾಗಿ ವಿಧಿವಿಜ್ಞಾನ ತಂಡಗಳು ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಾರೆ. ಸುತ್ತಮುತ್ತಲಿನ ಪ್ರದೇಶದ ಸಿಸಿಟಿವಿಗಳನ್ನು ಸಹ ಪರಿಶೀಲಿಸಲಾಗುತ್ತಿದೆ. ಘಟನೆಯ ಸಮಯದಲ್ಲಿ ಮಾರ್ಗದಲ್ಲಿ ಹಾದುಹೋದ ಭಾರೀ ವಾಹನಗಳು ಮತ್ತು ಸರಕು ಸಾಗಣೆ ಲಾರಿಗಳ ಬಗ್ಗೆಯೂ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

ಇಬ್ಬರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಸಹೋದ್ಯೋಗಿಗಳು ಮತ್ತು ಸ್ಥಳೀಯ ಅಧಿಕಾರಿಗಳು ಅಗತ್ಯ ಕಾನೂನು ಪ್ರಕ್ರಿಯೆ ಮುಗಿಸಿ, ಮೃತದೇಹಗಳನ್ನು ಕರ್ನಾಟಕದ ಅವರ ಊರುಗಳಿಗೆ ಕಳುಹಿಸಲು ಪ್ರಯತ್ನಿಸುತ್ತಿದ್ದಾರೆ. ಹೆಚ್ಚಿದ ರಸ್ತೆ ಅಪಘಾತಗಳು: ಮುವಾಟ್ಟುಪುಳ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇತ್ತೇಚೆಗೆ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಎಂಸಿ ರಸ್ತೆಯಲ್ಲಿ ಪದೇ ಪದೇ ಸಂಭವಿಸುತ್ತಿರುವ ದುರಂತಗಳನ್ನು ತಡೆಗಟ್ಟಲು ವಿಶೇಷವಾಗಿ ರಾತ್ರಿ ಸಮಯದಲ್ಲಿ ಅತಿ ವೇಗ ನಿಯಂತ್ರಿಸಲು ಮತ್ತು ಸುಧಾರಿತ ಮೇಲ್ವಿಚಾರಣಾ ವ್ಯವಸ್ಥೆಗಳ ಅನುಷ್ಠಾನಕ್ಕೆ ಸ್ಥಳೀಯರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!